IND W vs ENG W: ಮೊದಲ ದಿನದಾಟದಲ್ಲೇ 400 ಕ್ಕೂ ಅಧಿಕ ರನ್ ಕಲೆಹಾಕಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Dec 14, 2023 | 5:05 PM

India Women vs England Women: ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ (17) ಹಾಗೂ ಶಫಾಲಿ ವರ್ಮಾ (19) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಶುಭಾ ಸತೀಶ್ ಹಾಗೂ ಜೆಮಿಮಾ ರೊಡ್ರಿಗಾಸ್ ಶತಕದ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

IND W vs ENG W: ಮೊದಲ ದಿನದಾಟದಲ್ಲೇ 400 ಕ್ಕೂ ಅಧಿಕ ರನ್ ಕಲೆಹಾಕಿದ ಟೀಮ್ ಇಂಡಿಯಾ
Team India
Follow us on

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ಮಹಿಳಾ ತಂಡ ಬೃಹತ್ ಮೊತ್ತ ಪೇರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಹರ್ಮನ್​ಪ್ರೀತ್ ಕೌರ್ (Harmanpreet Kaur) ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧಾನ (17) ಹಾಗೂ ಶಫಾಲಿ ವರ್ಮಾ (19) ಬೇಗನೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಶುಭಾ ಸತೀಶ್ ಹಾಗೂ ಜೆಮಿಮಾ ರೊಡ್ರಿಗಾಸ್ ಶತಕದ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಶುಭಾ-ಜೆಮಿಮಾ:

ಈ ಪಂದ್ಯದೊಂದಿಗೆ ಟೆಸ್ಟ್ ಕ್ರಿಕೆಟ್​ಗೆ ಪಾದರ್ಪಣೆ ಮಾಡಿರುವ ಶುಭಾ ಸತೀಶ್ 76 ಎಸೆತಗಳಲ್ಲಿ 13 ಫೋರ್​ಗಳೊಂದಿಗೆ 69 ರನ್ ಬಾರಿಸಿದರು. ಮತ್ತೊಂದೆಡೆ ಜೆಮಿಮಾ ರೊಡ್ರಿಗಾಸ್ 99 ಎಸೆತಗಳಲ್ಲಿ 11 ಫೋರ್​ಗಳೊಂದಿಗೆ 68 ರನ್​ಗಳಿಸಿದರು. ಈ ಮೂಲಕ ಇಬ್ಬರು ಆಟಗಾರರು ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮಿಂಚಿದರು.

ಈ ಇಬ್ಬರ ನಿರ್ಗಮನದ ಬಳಿಕ ಕಣಕ್ಕಿಳಿದ ನಾಯಕಿ ಹರ್ಮನ್​ಪ್ರೀತ್ ಕೌರ್ 49 ರನ್​ಗಳಿಸಿ ರನೌಟ್ ಆದರೆ, ಯಾಸ್ತಿಕಾ ಭಾಟಿಯಾ 88 ಎಸೆತಗಳಲ್ಲಿ 66 ರನ್ ಬಾರಿಸಿ ನಿರ್ಗಮಿಸಿದರು. ಈ ವೇಳೆ ಕಣಕ್ಕಿಳಿದ ಸ್ನೇಹ್ ರಾಣಾ 30 ರನ್​ಗಳ ಕೊಡುಗೆ ನೀಡಿದರು. ಮತ್ತೊಂದೆಡೆ ದೀಪ್ತಿ ಶರ್ಮಾ (60) ಅಜೇಯ ಅರ್ಧಶತಕ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ದಿನದಾಟದಲ್ಲಿ 7 ವಿಕೆಟ್ ನಷ್ಟಕ್ಕೆ 410 ರನ್ ಪೇರಿಸಿದೆ.

ಭಾರತ ಪ್ಲೇಯಿಂಗ್ XI: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಸ್ನೇಹ ರಾಣಾ, ಶುಭಾ ಸತೀಶ್, ಪೂಜಾ ವಸ್ತ್ರಾಕರ್, ರೇಣುಕಾ ಠಾಕೂರ್ ಸಿಂಗ್, ರಾಜೇಶ್ವರಿ ಗಾಯಕ್ವಾಡ್.

ಇದನ್ನೂ ಓದಿ: IPL 2024: ಐಪಿಎಲ್​ಗಾಗಿ ಕೆಎಲ್ ರಾಹುಲ್ ಮಾಸ್ಟರ್ ಪ್ಲ್ಯಾನ್

ಇಂಗ್ಲೆಂಡ್ ಪ್ಲೇಯಿಂಗ್ XI: ಟಮ್ಮಿ ಬ್ಯೂಮಾಂಟ್, ಸೋಫಿಯಾ ಡಂಕ್ಲಿ, ಹೀದರ್ ನೈಟ್ (ನಾಯಕಿ), ನ್ಯಾಟ್ ಸ್ಕೈವರ್-ಬ್ರಂಟ್, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ವಿಕೆಟ್ ಕೀಪರ್), ಸೋಫಿ ಎಕ್ಲೆಸ್ಟೋನ್, ಷಾರ್ಲೆಟ್ ಡೀನ್, ಕೇಟ್ ಕ್ರಾಸ್, ಲಾರೆನ್ ಫೈಲರ್, ಲಾರೆನ್ ಬೆಲ್.