ಒಂದೆಡೆ ಭಾರತ ಹಾಗೂ ಆಸ್ಟ್ರೇಲಿಯಾ ಪುರುಷ ತಂಡಗಳ ನಡುವೆ ನಡೆದ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದ್ದರೆ, ಮತ್ತೊಂದೆಡೆ ಬ್ರಿಸ್ಬೇನ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಆಸ್ಟ್ರೇಲಿಯಾ ತಂಡದ ವಿರುದ್ಧ ಸತತ ಎರಡನೇ ಸೋಲು ಕಂಡಿದೆ. ಆಸ್ಟ್ರೇಲಿಯಾ ನೀಡಿದ 372 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ತಂಡ ಕೇವಲ 249 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಬರೋಬ್ಬರಿ 122 ರನ್‌ಗಳ ಅಂತರದಿಂದ ಹೀನಾಯ ಸೋಲುಕಂಡಿದೆ. ಈ ಮೂಲಕ ಹರ್ಮನ್‌ಪ್ರೀತ್ ಕೌರ್ ಪಡೆ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನು ಕಳೆದುಕೊಂಡಿದೆ.
ಬ್ರಿಸ್ಬೇನ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 371 ರನ್‌ಗಳ ಬೃಹತ್ ಗುರಿ ನೀಡಿತು. ಆಸ್ಟ್ರೇಲಿಯಾ ಪರ, ಜಾರ್ಜಿಯಾ ವೋಲ್ ಮತ್ತು ಎಲಿಸ್ ಪೆರ್ರಿ ಅದ್ಭುತ ಶತಕ ಸಿಡಿಸಿ ತಂಡವನ್ನು ಬಲಿಷ್ಠ ಸ್ಥಿತಿಯಲ್ಲಿ ಇರಿಸಿದರು. ಇದಕ್ಕೆ ಉತ್ತರವಾಗಿ ಭಾರತ ತಂಡ 249 ರನ್‌ಗಳಿಗೆ ಆಲೌಟ್ ಆಯಿತು.
ಆಸೀಸ್ ಪರ ತಮ್ಮ ಎರಡನೇ ಏಕದಿನ ಪಂದ್ಯವನ್ನು ಆಡಿದ ಯುವ ಬ್ಯಾಟರ್ ಜಾರ್ಜಿಯಾ ವೋಲ್ ಕೇವಲ 87 ಎಸೆತಗಳಲ್ಲಿ 101 ರನ್ ಕಲೆಹಾಕುವುದರೊಂದಿಗೆ ತಮ್ಮ ವೃತ್ತಿಜೀವನದ ಮೊದಲ ಶತಕ ಗಳಿಸುವಲ್ಲಿ ಯಶಸ್ವಿಯಾದರು. ಇತ್ತ ಪೆರ್ರಿ ಕೂಡ 75 ಎಸೆತಗಳಲ್ಲಿ ಆರು ಸಿಕ್ಸರ್ ಮತ್ತು 7 ಸಹಾಯದಿಂದ 105 ರನ್ ಗಳಿಸುವ ಮೂಲಕ ಟೀಂ ಇಂಡಿಯಾವನ್ನು ಆರಂಭದಲ್ಲೇ ಪಂದ್ಯದಿಂದ ಹೊರಹಾಕಿದರು.
ಆಸ್ಟ್ರೇಲಿಯಾ ನೀಡಿದ ಈ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭದಲ್ಲೇ ಆಘಾತ ಎದುರಿಸಿತು. ಅನುಭವಿ ಬ್ಯಾಟರ್ ಸ್ಮೃತಿ ಮಂದಾನ 9 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿದರು. ಆದರೆ ಸ್ಮೃತಿ ಜೊತೆ ಇನಿಂಗ್ಸ್ ಆರಂಭಿಸಿದ್ದ ರಿಚಾ ಘೋಷ್ 72 ಎಸೆತಗಳಲ್ಲಿ 54 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜೆಮಿಮಾ ರಾಡ್ರಿಗಸ್ 43 ರನ್ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 38 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮಿನ್ನು ಮಣಿ ಕೊನೆಯ ಓವರ್‌ಗಳಲ್ಲಿ 45 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಮೇಲೆ ಹೇಳಿದಂತೆ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸೀಸ್ ಪ್ರವಾಸದಲ್ಲಿರುವ ಭಾರತ ಪುರುಷರ ತಂಡ ಕೂಡ ಆತಿಥೇಯ ತಂಡದ ವಿರುದ್ಧ ಸೋಲು ಅನುಭವಿಸಬೇಕಾಯಿತು. ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ್ದ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್‌ಗಳ ಸೋಲು ಅನುಭವಿಸಿದೆ. ಅಷ್ಟೇ ಅಲ್ಲ ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಕೂಡ ದೊಡ್ಡ ಹಿನ್ನಡೆ ಅನುಭವಿಸಿದೆ. ಆಸ್ಟ್ರೇಲಿಯ ಈಗ ನಂಬರ್ ಒನ್ ಸ್ಥಾನ ತಲುಪಿದ್ದರೆ, ಟೀಂ ಇಂಡಿಯಾ ನೇರವಾಗಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Sun, 8 December 24