IND vs AUS: ಮೊಹಮ್ಮದ್ ಶಮಿ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ರೋಹಿತ್ ಶರ್ಮಾ

IND vs AUS: ಮೊಹಮ್ಮದ್ ಶಮಿ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ ರೋಹಿತ್ ಶರ್ಮಾ

ಪೃಥ್ವಿಶಂಕರ
|

Updated on: Dec 08, 2024 | 3:59 PM

IND vs AUS: ಟೀಂ ಇಂಡಿಯಾ ಅಡಿಲೇಡ್‌ನಲ್ಲಿ ಭಾರೀ ಸೋಲು ಅನುಭವಿಸಿದ್ದು, ಬ್ಯಾಟಿಂಗ್‌ನಲ್ಲಿನ ವೈಫಲ್ಯ ಮತ್ತು ಬೌಲಿಂಗ್‌ನಲ್ಲಿನ ಅನುಭವದ ಕೊರತೆಯೇ ತಂಡದ ಸೋಲಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಈ ನಡುವೆ ಮೊಹಮ್ಮದ್ ಶಮಿಯ ಆಗಮನದ ಬಗ್ಗೆ ಮಾತನಾಡಿರುವ ನಾಯಕ ರೋಹಿತ್ ಶರ್ಮಾ ಶಾಕಿಂಗ್ ಮಾಹಿತಿ ನೀಡಿದ್ದಾರೆ.

ಪರ್ತ್​ ಟೆಸ್ಟ್‌ನಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ ಇದೀಗ ಅಡಿಲೇಡ್ ಟೆಸ್ಟ್‌ನಲ್ಲಿ ಹೀನಾಯ ಸೋಲು ಕಂಡಿದೆ. ಅಡಿಲೇಡ್‌ನಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್‌ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣವಾಗಿದ್ದರೂ, ಆಸೀಸ್​ಗೆ ಬೃಹತ್ ಮೊತ್ತ ಕಲೆಹಾಕಲು ನೆರವಾದ ಬೌಲಿಂಗ್ ವಿಭಾಗವೂ ಒಂದು ರೀತಿಯಲ್ಲಿ ಸೋಲಿಗೆ ಕಾರಣವಾಯಿತು. ಪಂದ್ಯದ ಮೊದಲ ಮತ್ತು ಎರಡನೇ ದಿನದಲ್ಲಿ ಟೀಮ್ ಇಂಡಿಯಾ ಬೌಲಿಂಗ್‌ನಲ್ಲಿ ಅನುಭವದ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ತಂಡದ ಜಸ್ಪ್ರೀತ್ ಬುಮ್ರಾ ಮಾತ್ರ ತಮ್ಮ ಅನುಭವವನ್ನು ಧಾರೆ ಎರೆದರೆ, ಮೊಹಮ್ಮದ್ ಸಿರಾಜ್ ಸ್ಥಿರತೆಯ ಕೊರತೆಯನ್ನು ತೋರಿದರು. ಆದರೆ ಯುವ ವೇಗಿ ಹರ್ಷಿತ್ ರಾಣಾ ಸಂಪೂರ್ಣವಾಗಿ ನಿಷ್ಪರಿಣಾಮಕಾರಿಯಾಗಿದ್ದರು. ಹೀಗಾಗಿ ಎರಡನೇ ಟೆಸ್ಟ್‌ನಲ್ಲಿ ಅನುಭವಿ ವೇಗಿಯ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇದೀಗ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ ಟೀಂ ಇಂಡಿಯಾವನ್ನು ಕೂಡಿಕೊಳ್ಳುವ ಬಗ್ಗೆ ನಾಯಕ ರೋಹಿತ್ ಶರ್ಮಾ ಆಘಾತಕ್ಕಾರಿ ಮಾಹಿತಿ ನೀಡಿದ್ದಾರೆ.

ವಾಸ್ತವವಾಗಿ ಕಳೆದೆರಡು ದಿನಗಳಿಂದ ಮೊಹಮ್ಮದ್ ಶಮಿ ಇಷ್ಟರಲ್ಲೇ ಟೀಂ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಎಲ್ಲವೂ ಅಂದುಕೊಂಡತೆ ನಡೆದರೆ ಶಮಿ ಉಭಯ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ತಂಡದ ಪರ ಕಣಕ್ಕಿಳಿಯಬಹುದು ಎಂದು ಹೇಳಲಾಗುತ್ತಿದೆ. ಆದರೀಗ ಶಮಿಯ ಲಭ್ಯತೆಯ ಬಗ್ಗೆ ಮಾಹಿತಿ ನೀಡಿರುವ ರೋಹಿತ್, ಅಭಿಮಾನಿಗಳ ಆತಂಕವನ್ನು ಇನ್ನಷ್ಟು ಹೆಚ್ಚಿಸಿದ್ದಾರೆ.

ಶಮಿ ಫಿಟ್ನೆಸ್ ಬಗ್ಗೆ ರೋಹಿತ್ ಮಾಹಿತಿ

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಶಮಿ ಮೂರನೇ ಟೆಸ್ಟ್‌ನಲ್ಲಿ ಆಡುವುದು ಬಹುತೇಕ ಅಸಾಧ್ಯ. ಆದರೆ ಅವರು ಯಾವಾಗ ಟೀಂ ಇಂಡಿಯಾಕ್ಕೆ ಮರಳುತ್ತಾರೆ ಎಂಬುದು ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆ. ಅಡಿಲೇಡ್‌ನಲ್ಲಿನ ಸೋಲಿನ ನಂತರ, ರೋಹಿತ್‌ಗೆ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ನಾಯಕ ರೋಹಿತ್, ಶಮಿ ಸರಣಿಯ ಮಧ್ಯದಲ್ಲಿ ತಂಡವನ್ನು ಸೇರಿಕೊಳ್ಳಲು ಬಾಗಿಲು ತೆರೆದಿದೆ. ಆದರೆ ತಂಡವು ಅವರ ಮೇಲೆ ಯಾವುದೇ ರೀತಿಯ ಒತ್ತಡವನ್ನು ಹಾಕಲು ಬಯಸುವುದಿಲ್ಲ. ಏಕೆಂದರೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯ ಆಡುವಾಗ ಶಮಿ ಮೊಣಕಾಲಿನಲ್ಲಿ ಊತ ಕಂಡುಬಂದಿದೆ.

ಹೀಗಾಗಿ ಬಿಸಿಸಿಐ ವೈದ್ಯಕೀಯ ತಂಡ ಶಮಿ ಮೇಲೆ ನಿರಂತರವಾಗಿ ನಿಗಾ ವಹಿಸುತ್ತಿದ್ದು, ಅವರ ಸಲಹೆಯ ಮೇರೆಗೆ ಟೀಂ ಇಂಡಿಯಾ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ಶಮಿ ಸಂಪೂರ್ಣ ಫಿಟ್ ಆಗಿ ಬಂದರೆ ತಂಡಕ್ಕೆ ಮತ್ತು ಬೌಲಿಂಗ್ ವಿಭಾಗಕ್ಕೆ ಬಲ ಬರಲಿದೆ ಎಂದು ರೋಹಿತ್ ಹೇಳಿದ್ದಾರೆ.

ಸುಮಾರು ಒಂದು ವರ್ಷ ಕ್ರಿಕೆಟ್ ಮೈದಾನದಿಂದ ಹೊರಗುಳಿದ ಶಮಿ ಕಳೆದ ತಿಂಗಳಷ್ಟೇ ರಣಜಿ ಟ್ರೋಫಿ ಪಂದ್ಯ ಆಡುವ ಮೂಲಕ ತಂಡಕ್ಕೆ ಮರಳಿದ್ದರು. ಅಂದಿನಿಂದ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಸತತ 7 ಪಂದ್ಯಗಳನ್ನು ಆಡಿದ್ದಾರೆ. ಇಲ್ಲಿ ಶಮಿ ಅವರ ಪ್ರದರ್ಶನ ಅಮೋಘವಾಗಿದ್ದು, ತಂಡವನ್ನು ಪ್ರಿ ಕ್ವಾರ್ಟರ್‌ಫೈನಲ್‌ಗೆ ಕೊಂಡೊಯ್ದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ