
ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ (Smriti Mandhana) ನಾಯಕತ್ವದ ಭಾರತ ಮಹಿಳಾ ತಂಡ ಬರೋಬ್ಬರಿ 97 ರನ್‌ಗಳ ದಾಖಲೆಯ ಗೆಲುವು ದಾಖಲಿಸಿದೆ. ಭಾರತ ನೀಡಿದ 210 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ವನಿತಾ ಪಡೆ, ಸ್ಮೃತಿ ಪಡೆಯ ಮಾರಕ ದಾಳಿಗೆ ತತ್ತರಿಸಿ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗದೆ ಕೇವಲ 113 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಏಕಾಂಗಿ ಹೋರಾಟ ನೀಡಿ 66 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗಲಿಲ್ಲ. ಇತ್ತ ಭಾರತದ ಪರ ನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿದರೆ, ಭಾರತದ ಪರ ಚೊಚ್ಚಲ ಪಂದ್ಯವನ್ನಾಡಿದ ಶ್ರೀ ಚರಣಿ (Nallapureddy Charani) 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತಕ್ಕೆ ಉತ್ತಮ ಆರಂಭ ಲಭಿಸಿತು. ನಾಯಕಿ ಸ್ಮೃತಿ ಮಂಧಾನ ಹಾಗೂ ಯುವ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ಮೊದಲ ವಿಕೆಟ್ಗೆ 77 ರನ್‌ಗಳ ಸ್ಫೋಟಕ ಜೊತೆಯಾಟ ಹಂಚಿಕೊಂಡರು. ಆದಾಗ್ಯೂ, 8 ತಿಂಗಳ ನಂತರ ತಂಡಕ್ಕೆ ಮರಳಿದ ಶೆಫಾಲಿ ಈ ಬಾರಿಯೂ ತಮ್ಮ ಬ್ಯಾಟಿಂಗ್‌ನಿಂದ ಅದ್ಭುತಗಳನ್ನು ಮಾಡಲು ಸಾಧ್ಯವಾಗದೆ 22 ಎಸೆತಗಳಲ್ಲಿ ಕೇವಲ 20 ರನ್ ಗಳಿಸಿ ಔಟಾದರು. ಆದರೆ ಶೆಫಾಲಿ ವಿಕೆಟ್ ಪತನದ ಬಳಿಕ ಬಂದ ಹರ್ಲೀನ್ ಡಿಯೋಲ್, ಮಂಧಾನಗೆ ಉತ್ತಮ ಸಾಥ್ ನೀಡಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಸುಮಾರು 200 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿ 94 ರನ್ ಕಲೆಹಾಕಿದರು.
ಇದೇ ವೇಳೆ ನಾಯಕಿ ಮಂಧಾನ ಕೇವಲ 51 ಎಸೆತಗಳಲ್ಲಿ ತಮ್ಮ ಮೊದಲ ಟಿ20 ಅಂತರರಾಷ್ಟ್ರೀಯ ಶತಕ ಪೂರೈಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಅರ್ಧಶತಕದಂಚಿನಲ್ಲಿ ಎಡವಿದ ಹರ್ಲೀನ್ ಡಿಯೋಲ್ 43 ರನ್ ಗಳಿಸಿ ಔಟಾದರು. ಡಿಯೋಲ್ ವಿಕೆಟ್ ಪತನದ ಬಳಿಕ ಬಂದ ಕೆಳ ಕ್ರಮಾಂಕದ ಬ್ಯಾಟರ್ಗಳಿಗೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಸ್ಮೃತಿ ಅವರ ಸ್ಫೋಟಕ ಶತಕದಿಂದಾಗಿ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 210 ರನ್ ಗಳಿಸಿ ಇಂಗ್ಲೆಂಡ್ ವಿರುದ್ಧ ಎರಡನೇ ಅತ್ಯಧಿಕ ಮತ್ತು ಅತ್ಯಧಿಕ ಟಿ20 ಸ್ಕೋರ್ ದಾಖಲಿಸಿತು. ಇಂಗ್ಲೆಂಡ್ ಪರ, ವೇಗಿ ಲಾರೆನ್ ಬೆಲ್ 27 ರನ್‌ಗಳಿಗೆ 3 ವಿಕೆಟ್ ಪಡೆದರು.
ಭಾರತ ನೀಡಿದ 210 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ಗೆ ಉತ್ತಮ ಆರಂಭ ಸಿಗಲಿಲ್ಲ. ಯುವ ಬೌಲರ್ ಅಮನ್‌ಜೋತ್ ಕೌರ್, ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಸೋಫಿಯಾ ಡಂಕ್ಲಿ ಅವರ ವಿಕೆಟ್ ಪಡೆದು ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಿದರು. ಆ ನಂತರ ದೀಪ್ತಿ ಶರ್ಮಾ ಮುಂದಿನ ಓವರ್‌ನಲ್ಲಿ ಎರಡನೇ ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್-ಹಾಡ್ಜ್ ಅವರನ್ನು ಸಹ ಔಟ್ ಮಾಡಿದರು. ಇದಾದ ನಂತರವೂ ಇಂಗ್ಲೆಂಡ್ ತಂಡದ ವಿಕೆಟ್‌ಗಳು ನಿಗದಿತ ಅಂತರದಲ್ಲಿ ಬೀಳುತ್ತಲೇ ಇದ್ದವು.
IND vs ENG: ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಸ್ಮೃತಿ ಮಂಧಾನ
ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನೀಡಿದ ನಾಯಕಿ ಸಿವರ್-ಬ್ರಂಟ್ 66 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆದರೆ 13 ನೇ ಓವರ್‌ನಲ್ಲಿ ಚರಣಿ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸುವ ಮೂಲಕ ಸಿವರ್-ಬ್ರಂಟ್ ಭಾರತದ ಗೆಲುವನ್ನು ಖಚಿತಪಡಿಸಿದರು. ಚರಣಿ ಒಂದೇ ಓವರ್‌ನಲ್ಲಿ ಕೊನೆಯ 2 ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್ ಆಟವನ್ನು ಕೊನೆಗೊಳಿಸಿದರು. ಭಾರತದ ಪರ ಚೊಚ್ಚಲ ಪಂದ್ಯವನ್ನಾಡಿದ 20 ವರ್ಷದ ಯುವ ಸ್ಪಿನ್ನರ್ ಶ್ರೀ ಚರಣಿ 3.5 ಓವರ್‌ಗಳಲ್ಲಿ ಕೇವಲ 20 ರನ್ ನೀಡಿ 4 ವಿಕೆಟ್‌ಗಳನ್ನು ಪಡೆದರು. ಅಂತಿಮವಾಗಿ 113 ರನ್‌ಗಳಿಗೆ ಆಲೌಟ್ ಆದ ಇಂಗ್ಲೆಂಡ್ ತಂಡ ಈ ಸೋಲಿನೊಂದಿಗೆ ಸತತ 11 ಟಿ20 ಪಂದ್ಯಗಳ ಗೆಲುವಿನ ಸರಣಿಗೆ ಅಂತ್ಯ ಹಾಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:16 pm, Sat, 28 June 25