IND vs AUS: ಟಿ20 ಸರಣಿ ಗೆದ್ದು, ಏಕದಿನ ಸರಣಿ ಸೋತ ಟೀಂ ಇಂಡಿಯಾ
Australia Dominates India Women in ODI Series: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಭಾರತ ಮಹಿಳಾ ತಂಡ 2-0 ಅಂತರದಿಂದ ಕಳೆದುಕೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ತಪ್ಪು ನಿರ್ಧಾರ ಹಾಗೂ ಬ್ಯಾಟಿಂಗ್ ವೈಫಲ್ಯ ತಂಡದ ಸೋಲಿಗೆ ಪ್ರಮುಖ ಕಾರಣ. ಜಾರ್ಜಿಯಾ ವಾಲ್ ಶತಕದ ನೆರವಿನಿಂದ ಆಸ್ಟ್ರೇಲಿಯಾ ಸರಣಿ ಗೆದ್ದುಕೊಂಡಿತು. ಸರಣಿಯ ಕೊನೆಯ ಪಂದ್ಯ ಮಾರ್ಚ್ 1 ರಂದು ನಡೆಯಲಿದೆ.

ಟಿ20 ಸರಣಿಯ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ಆರಂಭಿಸಿದ್ದ ಭಾರತ ಮಹಿಳಾ ತಂಡ (Australia Women vs India Women), ಇದೀಗ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಎರಡನೇ ಪಂದ್ಯವನ್ನು 5 ವಿಕೆಟ್‌ಗಳಿಂದ ಗೆದ್ದುಕೊಂಡ ಆತಿಥೇಯ ಆಸ್ಟ್ರೇಲಿಯಾ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಿಂದ ಸರಣಿಯನ್ನು ವಶಪಡಿಸಿಕೊಂಡಿದೆ. ಸರಣಿಯ ಎರಡೂ ಪಂದ್ಯಗಳಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ತಪ್ಪು ನಿರ್ಧಾರ ತೆಗೆದುಕೊಂಡು ಎರಡು ಪಂದ್ಯಗಳನ್ನು ಏಕಪಕ್ಷೀಯವಾಗಿ ಸೋತಿತು. ಏಕದಿನ ವಿಶ್ವಕಪ್ ಗೆದ್ದುಕೊಂಡ ಬಳಿಕ ಮೊದಲ ಏಕದಿನ ಸರಣಿಯನ್ನಾಡಿದ ಭಾರತ ವನಿತಾ ಪಡೆ ತಾನು ಮಾಡಿದ ಸ್ವಯಂಕೃತ ಅಪರಾದಗಳಿಂದಲೇ ಸರಣಿ ಸೋತಿತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಬಲಿಷ್ಠ ಬ್ಯಾಟಿಂಗ್ ವಿಭಾಗವನ್ನು ಹೊಂದಿರುವ ಆಸ್ಟ್ರೇಲಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಪಂದ್ಯದಲ್ಲಿ ಕೇವಲ 214 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ, ಆ ಪಂದ್ಯವನ್ನು ಇನ್ನು 70 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳಿಂದ ಸೋತಿತ್ತು. ಇದೀಗ ಎರಡನೇ ಪಂದ್ಯದಲ್ಲೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ 251 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಇನ್ನು 8 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್‌ಗಳಿಂದ ಈ ಪಂದ್ಯವನ್ನೂ ಗೆದ್ದುಕೊಂಡಿತು. ಈ ಎರಡೂ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಮುಕ್ತವಾಗಿ ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ಆದರೆ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಸರಾಗವಾಗಿ ರನ್ ಕಲೆಹಾಕುವ ಮೂಲಕ ಎರಡು ಪಂದ್ಯಗಳನ್ನು ಗೆದ್ದುಕೊಂಡಿತು.
ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯ
ಹೋಬಾರ್ಟ್‌ನಲ್ಲಿ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಮತ್ತೊಮ್ಮೆ ಬ್ಯಾಂಟಿಗ್ ವಿಭಾಗ ಕೈಕೊಟ್ಟಿತು. ಸ್ಮೃತಿ ಮಂಧಾನ (31) ಮತ್ತು ಪ್ರತಿಕಾ ರಾವಲ್ (52) ಮೊದಲ ವಿಕೆಟ್ಗೆ 78 ರನ್‌ಗಳನ್ನು ಸೇರಿಸುವ ಮೂಲಕ ಉತ್ತಮ ಆರಂಭವನ್ನು ನೀಡಿದರು. ಪ್ರತಿಕಾ ಕೂಡ ಅರ್ಧಶತಕ ಪೂರೈಸಿದರು. ಆದರೆ ತಂಡದ ಮೊತ್ತ 100 ರನ್ ದಾಟುವ ಮುನ್ನವೇ ಮೂರು ವಿಕೆಟ್‌ಗಳು ಪತನಗೊಂಡವು. ಅಲ್ಲಿಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟುವ ಕೆಲಸ ಮಾಡಿದರಾದರೂ ಅವರಿಗೆ ಇನ್ನೊಂದು ತುದಿಯಿಂದ ಯಾರಿಂದಲೂ ಬೆಂಬಲ ಸಿಗಲಿಲ್ಲ. ಆದಾಗ್ಯೂ ಹರ್ಮನ್‌ಪ್ರೀತ್ ಮತ್ತು ಕಾಶ್ವಿ ಗೌತಮ್ (25) 55 ರನ್‌ಗಳ ಜೊತೆಯಾಟ ನಡೆಸಿ ತಂಡವನ್ನು 251 ರನ್‌ಗಳಿಗೆ ಕೊಂಡೊಯ್ದರು.
ವಾಲ್-ಲಿಚ್‌ಫೀಲ್ಡ್ ಸ್ಫೋಟಕ ಬ್ಯಾಟಿಂಗ್
ಈ ಗುರಿ ಬೆನ್ನಟ್ಟಿದ ಆಸೀಸ್ಗೆ ಆರಂಭಿಕ ಆಘಾತ ಎದುರಾಯಿತು. ತನ್ನ ಕೊನೆಯ ಸರಣಿಯನ್ನು ಆಡುತ್ತಿರುವ ಆಸ್ಟ್ರೇಲಿಯಾದ ನಾಯಕಿ ಅಲಿಸಾ ಹೀಲಿ (6) ಮತ್ತೊಮ್ಮೆ ಬೇಗನೆ ಔಟಾದರು, ಆದರೆ ಟೀಮ್ ಇಂಡಿಯಾ ಇದರ ಲಾಭವನ್ನು ಪಡೆಯುವಲ್ಲಿ ವಿಫಲವಾಯಿತು. ಫೋಬೆ ಲಿಚ್‌ಫೀಲ್ಡ್ (80 ರನ್‌ಗಳು, 62 ಎಸೆತಗಳು) ಮತ್ತು ಜಾರ್ಜಿಯಾ ವಾಲ್ 119 ರನ್‌ಗಳ ಜೊತೆಯಾಟ ನಡೆಸಿ, ಭಾರತದ ಪುನರಾಗಮನದ ಭರವಸೆಯನ್ನು ಭಗ್ನಗೊಳಿಸಿದರು. ಲಿಚ್‌ಫೀಲ್ಡ್ ಶತಕವನ್ನು ತಪ್ಪಿಸಿಕೊಂಡರಾದರೂ ವಾಲ್ (101 ರನ್‌ಗಳು, 82 ಎಸೆತಗಳು) ಕೇವಲ 80 ಎಸೆತಗಳಲ್ಲಿ ಅದ್ಭುತ ಶತಕ ಬಾರಿಸುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಅಂತಿಮವಾಗಿ ಆಸ್ಟ್ರೇಲಿಯಾ ಕೇವಲ 36.1 ಓವರ್‌ಗಳಲ್ಲಿ ಪಂದ್ಯ ಮತ್ತು ಸರಣಿಯನ್ನು ಐದು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಇದೀಗ ಸರಣಿಯ ಮೂರನೇ ಮತ್ತು ಅಂತಿಮ ಪಂದ್ಯ ಮಾರ್ಚ್ 1 ರಂದು ಹೋಬಾರ್ಟ್‌ನಲ್ಲಿ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
