IND vs NZ: ಟಿ20 ವಿಶ್ವಕಪ್ ಬಳಿಕ ಭಾರತ- ಕಿವೀಸ್ ನಡುವೆ ಏಕದಿನ ಸರಣಿ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

|

Updated on: Oct 14, 2024 | 7:19 PM

IND vs NZ: ಟಿ20 ವಿಶ್ವಕಪ್ ಬಳಿಕ ನಡೆಯಲ್ಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ವೇಳಾಪಟ್ಟಿಯನ್ನು ಇಂದು ಪ್ರಕಟಿಸಿದೆ. ಉಭಯ ತಂಡಗಳ ಈ ಮುಖಾಮುಖಿಯಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲ್ಲಿದ್ದು, ಈ ಸರಣಿಯು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಭಾಗವಾಗಿದೆ. ಹೀಗಾಗಿ ಈ ಸರಣಿ ಗೆಲುವು ಎರಡೂ ತಂಡಗಳಿಗೂ ಅತ್ಯಂತ ಅವಶ್ಯಕವಾಗಿದೆ.

IND vs NZ: ಟಿ20 ವಿಶ್ವಕಪ್ ಬಳಿಕ ಭಾರತ- ಕಿವೀಸ್ ನಡುವೆ ಏಕದಿನ ಸರಣಿ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
ಭಾರತ- ನ್ಯೂಜಿಲೆಂಡ್ ವನಿತಾ ಪಡೆ
Follow us on

ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಭಾರತ ವನಿತಾ ಪಡೆ ಸೆಮಿಫೈನಲ್ ರೇಸ್​ನಿಂದ ಹೊರಬೀಳುವುದು ಭಾಗಶಃ ಖಚಿತವಾಗಿದೆ. ಆದಾಗ್ಯೂ ಇಂದು ನಡೆಯುತ್ತಿರುವ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಸೋತರೆ, ಟೀಂ ಇಂಡಿಯಾಗೆ ಸೆಮೀಸ್ ಕದ ತೆರೆಯಲಿದೆ. ಇಲ್ಲದಿದ್ದರೆ ಹರ್ಮನ್‌ಪ್ರೀತ್ ಪಡೆ ಲೀಗ್​ ಹಂತದಲ್ಲೇ ಟೂರ್ನಿಯಿಂದ ಹೊರ ಬೀಳಲಿದೆ. ಇದೆಲ್ಲದರ ನಡುವೆ ಭಾರತ ವನಿತಾ ತಂಡದ ಮುಂದಿನ ಸರಣಿಯ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ಟಿ20 ವಿಶ್ವಕಪ್ ಬಳಿಕ ನಡೆಯಲ್ಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ವೇಳಾಪಟ್ಟಿಯನ್ನು ಇಂದು ಪ್ರಕಟಿಸಿದೆ.

ಮೂರು ಪಂದ್ಯಗಳ ಏಕದಿನ ಸರಣಿ

ಉಭಯ ತಂಡಗಳ ಈ ಮುಖಾಮುಖಿಯಲ್ಲಿ ಮೂರು ಏಕದಿನ ಪಂದ್ಯಗಳು ನಡೆಯಲ್ಲಿದ್ದು, ಈ ಸರಣಿಯು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನ ಭಾಗವಾಗಿದೆ. ಹೀಗಾಗಿ ಈ ಸರಣಿ ಗೆಲುವು ಎರಡೂ ತಂಡಗಳಿಗೂ ಅತ್ಯಂತ ಅವಶ್ಯಕವಾಗಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಯ ಎಲ್ಲಾ ಮೂರು ಪಂದ್ಯಗಳು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದಲ್ಲದೆ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ ತಯಾರಿಗೆ ಈ ಸರಣಿಯು ಅತ್ಯಂತ ಮಹತ್ವದ್ದಾಗಿದ್ದು, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಅಕ್ಟೋಬರ್ 24 ರಿಂದ ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು ಆಡಲಿದೆ. ಈ ಸರಣಿಯ ಮುಂದಿನ ಎರಡು ಪಂದ್ಯಗಳು ಅಕ್ಟೋಬರ್ 27 ಮತ್ತು 29 ರಂದು ನಡೆಯಲಿದೆ. ಮುಂಬರುವ ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ತನ್ನ ಕೌಶಲ ವೃದ್ಧಿಸಿಕೊಳ್ಳಲು ಈ ಸರಣಿ ಉತ್ತಮ ಅವಕಾಶವಾಗಿದೆ.

ಉಭಯ ತಂಡಗಳಿಗೂ ಅತ್ಯಂತ ಮಹತ್ವದ ಸರಣಿ

ಇತ್ತ 2025ರ ಏಕದಿನ ವಿಶ್ವಕಪ್‌ಗೆ ಅರ್ಹತೆಯ ಮೇಲೆ ಕಣ್ಣಿಟ್ಟಿರುವ ನ್ಯೂಜಿಲೆಂಡ್‌ಗೆ ಭಾರತದ ವಿರುದ್ಧದ ಸರಣಿಯೂ ಮಹತ್ವದ್ದಾಗಿದೆ. ಪ್ರಸ್ತುತ, ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಈ ಜಾಗತಿಕ ಟೂರ್ನಿಗೆ ಅರ್ಹತೆ ಪಡೆದಿವೆ.
ಹೀಗಾಗಿ ನ್ಯೂಜಿಲೆಂಡ್ ಮಹಿಳಾ ತಂಡವು ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ ಅಂಕ ಕಲೆಹಾಕುವ ಮೂಲಕ ತಮ್ಮ ಸ್ಥಾನವನ್ನು ಬಲಪಡಿಸುವ ಇರಾದೆಯಲ್ಲಿದೆ. ಕುತೂಹಲಕಾರಿಯಾಗಿ, ಭಾರತ ಮತ್ತು ನ್ಯೂಜಿಲೆಂಡ್‌ನ ಪುರುಷರ ಮತ್ತು ಮಹಿಳಾ ತಂಡಗಳ ನಡುವೆ ಏಕಕಾಲದಲ್ಲಿ ಸರಣಿ ನಡೆಯಲಿದೆ. ಪುರುಷರ ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಅಕ್ಟೋಬರ್ 16 ರಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ.

ಏಕದಿನ ಸರಣಿಯ ವೇಳಾಪಟ್ಟಿ

  • ಮೊದಲ ಏಕದಿನ: 24 ಅಕ್ಟೋಬರ್
  • ಎರಡನೇ ಏಕದಿನ: 27 ಅಕ್ಟೋಬರ್
  • ಮೂರನೇ ಏಕದಿನ: 29 ಅಕ್ಟೋಬರ್

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ