ENG vs PAK: 2ನೇ ಟೆಸ್ಟ್‌ಗೆ ಪಾಕ್ ಪ್ಲೇಯಿಂಗ್ 11 ಪ್ರಕಟ; ಬಾಬರ್, ಆಫ್ರಿದಿ ಸ್ಥಾನಕ್ಕೆ ಬಂದಿದ್ಯಾರು?
ENG vs PAK: ನಾಳೆಯಿಂದ ಅಂದರೆ ಅಕ್ಟೋಬರ್ 15 ರಿಂದ ಮುಲ್ತಾನ್ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಪಾಕಿಸ್ತಾನ ಕೂಡ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಕೆಲವೇ ಗಂಟೆಗಳ ಹಿಂದೆ ಇಂಗ್ಲೆಂಡ್ ಕೂಡ ತನ್ನ ಪ್ಲೇಯಿಂಗ್ 11 ಅನ್ನು ಪ್ರಕಟಿಸಿತ್ತು.
ನಾಳೆಯಿಂದ ಅಂದರೆ ಅಕ್ಟೋಬರ್ 15 ರಿಂದ ಮುಲ್ತಾನ್ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಆತಿಥೇಯ ಪಾಕಿಸ್ತಾನ ಕೂಡ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದೆ. ಕೆಲವೇ ಗಂಟೆಗಳ ಹಿಂದೆ ಇಂಗ್ಲೆಂಡ್ ಕೂಡ ತನ್ನ ಪ್ಲೇಯಿಂಗ್ 11 ಅನ್ನು ಪ್ರಕಟಿಸಿತ್ತು. ಇದೀಗ ಎರಡನೇ ಟೆಸ್ಟ್‌ಗೆ ಆಯ್ಕೆಯಾಗಿರುವ ಪ್ಲೇಯಿಂಗ್ 11ನಲ್ಲಿ ಪಾಕ್ ಮಂಡಳಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಅನುಭವಿ ಬಾಬರ್ ಆಝಂ ಬದಲಿಗೆ ಅನಾನುಭುವಿ ಆಟಗಾರನಿಗೆ ತಂಡದಲ್ಲಿ ಸ್ಥಾನ ನೀಡಿದೆ. ಹಾಗೆಯೇ ಬೌಲಿಂಗ್ ಜೀವಾಳ ಎನಿಸಿಕೊಂಡಿದ್ದ ಶಾಹೀನ್ ಆಫ್ರಿದಿ ಬದಲಿಗೆ ಮತ್ತೊರ್ವ ಯುವ ಆಟಗಾರನಿಗೆ ಅವಕಾಶ ನೀಡಲಾಗಿದೆ. ಒಟ್ಟಾರೆಯಾಗಿ ತಂಡದಲ್ಲಿ 4 ಬದಲಾವಣೆಗಳಾಗಿದ್ದು, ಅನುಭವಿಗಳ ಸ್ಥಾನಕ್ಕೆ ಯುವ ಆಟಗಾರರನ್ನು ಪಾಕ್ ಮಂಡಳಿ ಆಯ್ಕೆ ಮಾಡಿದೆ.
ವಾಸ್ತವವಾಗಿ ಇದೇ ಮುಲ್ತಾನ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕ್ ಪಡೆ ಹೀನಾಯ ಸೋಲು ಕಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಬರೋಬ್ಬರಿ 556 ರನ್ ಕಲೆಹಾಕಿಯೂ ಪಾಕ್ ತಂಡ ಇನ್ನಿಂಗ್ಸ್ ಸೋಲನ್ನು ಎದುರಿಸಿತ್ತು. ಈ ಅವಮಾನಕರ ಸೋಲಿನ ನಂತರ ಪಾಕ್ ಕ್ರಿಕೆಟ್ ಮಂಡಳಿ ಉಳಿದೆರಡು ಟೆಸ್ಟ್ ಪಂದ್ಯಗಳಿಂದ ತಂಡದ ಸ್ಟಾರ್ ಆಟಗಾರರಾದ ಬಾಬರ್ ಆಝಂ, ಶಾಹೀನ್ ಆಫ್ರಿದಿ ಹಾಗೂ ನಸೀಮ್ ಶಾರನ್ನು ಕೈಬಿಟ್ಟಿತ್ತು. ಅವರ ಸ್ಥಾನದಲ್ಲಿ ದೇಶೀ ಟೂರ್ನಿಯಲ್ಲಿ ಮಿಂಚಿದ್ದ ಅನಾನುಭವಿಗಳಿಗೆ ಸ್ಥಾನ ನೀಡಿತ್ತು.
ತಂಡದಲ್ಲಿ 4 ಬದಲಾವಣೆ
ಅದರಂತೆ ತಂಡದಿಂದ ಹೊರಬಿದ್ದ ಮಾಜಿ ನಾಯಕ ಬಾಬರ್ ಆಝಂ ಸ್ಥಾನದಲ್ಲಿ ಕಮ್ರಾನ್ ಗುಲಾಮ್ ಅವರಿಗೆ ಅವಕಾಶ ನೀಡಲಾಗಿದೆ. ಕಮ್ರಾನ್ ಗುಲಾಮ್ ಇದುವರೆಗೆ ಪಾಕಿಸ್ತಾನ ಪರ ಕೇವಲ 1 ಏಕದಿನ ಪಂದ್ಯವನ್ನಾಡಿದ್ದಾರೆ. ಅಂದರೆ ಈ ಪಂದ್ಯದಲ್ಲಿ ಅವರು ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಶಾಹೀನ್ ಶಾ ಆಫ್ರಿದಿ ಬದಲಿಗೆ ನೋಮನ್ ಅಲಿ ಬೌಲಿಂಗ್ ವಿಭಾಗಕ್ಕೆ ಸೇರ್ಪಡೆಗೊಂಡಿದ್ದಾರೆ. ಪ್ಲೇಯಿಂಗ್ 11ರಲ್ಲಿ ಸಾಜಿದ್ ಖಾನ್ ಮತ್ತು ಜಾಹಿದ್ ಮೆಹಮೂದ್ ಕೂಡ ಸ್ಥಾನ ಪಡೆದಿದ್ದಾರೆ. ಇವರಲ್ಲದೆ, ಮೊದಲ ಪಂದ್ಯದಲ್ಲಿ ಆಡಿದ ಸ್ಯಾಮ್ ಅಯೂಬ್, ಅಬ್ದುಲ್ಲಾ ಶಫೀಕ್, ಶಾನ್ ಮಸೂದ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಅಗಾ ಮತ್ತು ಅಮೀರ್ ಜಮಾಲ್ ಕೂಡ ಎರಡನೇ ಟೆಸ್ಟ್‌ನ ಭಾಗವಾಗಿದ್ದಾರೆ.
The men’s national selection committee has confirmed Pakistan’s playing XI for the second Test against England, starting in Multan on Tuesday, 15 October.#PAKvENG | #TestAtHome pic.twitter.com/WzLnC0lfYQ
— Pakistan Cricket (@TheRealPCB) October 14, 2024
ಉಭಯ ತಂಡಗಳು
ಎರಡನೇ ಟೆಸ್ಟ್‌ಗೆ ಪಾಕಿಸ್ತಾನ ತಂಡ: ಸ್ಯಾಮ್ ಅಯೂಬ್, ಅಬ್ದುಲ್ಲಾ ಶಫೀಕ್, ಶಾನ್ ಮಸೂದ್ (ನಾಯಕ), ಕಮ್ರಾನ್ ಗುಲಾಮ್, ಸೌದ್ ಶಕೀಲ್ (ಉಪನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಸಲ್ಮಾನ್ ಅಲಿ ಆಗಾ, ಅಮೀರ್ ಜಮಾಲ್, ನೋಮನ್ ಅಲಿ, ಸಾಜಿದ್ ಖಾನ್ ಮತ್ತು ಜಾಹಿದ್ ಮೆಹಮೂದ್.
ಎರಡನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ: ಜ್ಯಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಬ್ರೈಡನ್ ಕಾರ್ಸೆ, ಮ್ಯಾಟ್ ಪಾಟ್ಸ್, ಜ್ಯಾಕ್ ಲೀಚ್, ಶೋಯೆಬ್ ಬಶೀರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:21 pm, Mon, 14 October 24