2023ರ ಏಷ್ಯಾಕಪ್‌ಗಾಗಿ (Asia Cup 2023) ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ಮುಂಬೈನಲ್ಲಿ ನಡೆದ 91ನೇ ಬಿಸಿಸಿಐ (BCCI) ವಾರ್ಷಿಕ ಸಾಮಾನ್ಯ ಸಭೆಯ (AGM) ಬಳಿಕ ಮಾತನಾಡಿದ ಜಯ್ ಶಾ, ಮುಂದಿನ ಏಷ್ಯಾಕಪ್‌ಗಾಗಿ ಭಾರತ ತಂಡವು ಪಾಕಿಸ್ತಾನ್ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ತಿಳಿಸಿದರು. 2023ರ ಏಷ್ಯಾ ಕಪ್ ಟೂರ್ನಿಯನ್ನು ಪಾಕಿಸ್ತಾನವು ಆಯೋಜಿಸಲಿದೆ. ಆದರೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಟೀಮ್ ಇಂಡಿಯಾವನ್ನು ಕಳುಹಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲದೆ ಏಷ್ಯಾಕಪ್ 2023 ಅನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವಂತೆ ಮನವಿ ಮಾಡಲಾಗಿದೆ.
ಪಾಕಿಸ್ತಾನದಲ್ಲಿ ಏಷ್ಯಾಕಪ್ ಆಯೋಜಿಸಿದರೆ ಭಾರತ ತಂಡವು ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ. ಬದಲಾಗಿ ಪಾಕ್ ಕ್ರಿಕೆಟ್ ಮಂಡಳಿ ಬೇರೆ ದೇಶದಲ್ಲಿ ಟೂರ್ನಿಯನ್ನು ಆಯೋಜಿಸಿದರೆ ಮಾತ್ರ ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ಭಾಗವಹಿಸಲಿದೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಪಿಸಿಬಿ ಇನ್ನೂ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದಾಗ್ಯೂ ಈ ಸಂಬಂಧ ಏಷ್ಯನ್ ಕ್ರಿಕೆಟ್ ಕೌನ್ಸಿಲ್ನಲ್ಲಿ ಸಭೆ ನಡೆಯುವ ಸಾಧ್ಯತೆಯಿದೆ.
ಭಾರತ ಕೊನೆಯದಾಗಿ 2005-06ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ದ್ವಿಪಕ್ಷೀಯ ಸರಣಿಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿತ್ತು. ಇನ್ನು ಪಾಕಿಸ್ತಾನ್ ತಂಡವು 2012-13ರಲ್ಲಿ ಕೊನೆಯ ಬಾರಿ ಭಾರತದಲ್ಲಿ ಸರಣಿ ಆಡಿತ್ತು. ಇದಾದ ಬಳಿಕ ಉಭಯ ದೇಶಗಳು ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಿಲ್ಲ.
ಇದಾಗ್ಯೂ ಏಷ್ಯಾಕಪ್ ಹಾಗೂ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿತ್ತು. ಆದರೆ ಮುಂದಿನ ವರ್ಷ ಪಾಕಿಸ್ತಾನದಲ್ಲಿ ಏಷ್ಯಾಕಪ್ ನಡೆಯಲಿದ್ದು, ಆದರೆ ಅದಕ್ಕೂ ಮುನ್ನ ಭಾರತ ತಂಡವು ಟೂರ್ನಿಯಿಂದ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿದೆ.
ಹೀಗಾಗಿ ಪಾಕ್ ಕ್ರಿಕೆಟ್ ಬೋರ್ಡ್ ಟೂರ್ನಿಯನ್ನು ಯುಎಇ ನಲ್ಲಿ ಆಯೋಜಿಸುವ ಸಾಧ್ಯತೆಯಿದೆ. ಏಕೆಂದರೆ ಈ ಬಾರಿ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ರಾಜಕೀಯ ಅರಾಜಕತೆಯ ಕಾರಣ ಟೂರ್ನಿಯನ್ನು ಯುಎಇ ಗೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಭಾರತ-ಪಾಕಿಸ್ತಾನ್ ನಡುವೆ ಯಾವುದೇ ರಾಜತಾಂತ್ರಿಕ ಸಂಬಂಧಗಳು ಸುಧಾರಣೆಯಾಗಿಲ್ಲ. ಅಷ್ಟೇ ಅಲ್ಲದೆ ಆಟಗಾರರ ಭದ್ರತೆಯ ಹಿತಾದೃಷ್ಟಿಯಿಂದ ಟೀಮ್ ಇಂಡಿಯಾ ಟೂರ್ನಿಯಿಂದ ಹಿಂದೆ ಸರಿಯಲು ನಿರ್ಧರಿಸಿದೆ.
ಇತ್ತ ಏಷ್ಯಾದ ಬಲಿಷ್ಠ ತಂಡವಾಗಿರುವ ಟೀಮ್ ಇಂಡಿಯಾ ಹೊರಗುಳಿದರೆ ವೀಕ್ಷಕರ ಕೊರತೆ ಎದುರಿಸಲಿದೆ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತಟಸ್ಥ ಸ್ಥಳದಲ್ಲಿ ಟೂರ್ನಿಯನ್ನು ಆಯೋಜಿಸಲು ಮುಂದಾಗಲಿದೆಯಾ ಕಾದು ನೋಡಬೇಕಿದೆ.
Published On - 2:41 pm, Tue, 18 October 22