IND vs NZ: ದ್ವಿತೀಯ ಅಭ್ಯಾಸ ಪಂದ್ಯಕ್ಕೆ ಭಾರತ ಸಿದ್ಧತೆ: ತಂಡದಲ್ಲಿ ಬಹುದೊಡ್ಡ ಬದಲಾವಣೆ?
T20 World Cup 2022: ಆಸ್ಟ್ರೇಲಿಯಾ ವಿರುದ್ಧದ ಮೊದಲ ಅಭ್ಯಾಸ ಪಂದ್ಯ ಗೆದ್ದಿರುವ ಭಾರತ ಇದೀಗ ದ್ವಿತೀಯ ವಾರ್ಮ್-ಅಪ್ ಮ್ಯಾಚ್ಗೆ ಸಜ್ಜಾಗುತ್ತಿದೆ. ಅಕ್ಟೋಬರ್ 19 ರಂದು ಟೀಮ್ ಇಂಡಿಯಾ ನ್ಯೂಜಿಲೆಂಡ್ (India vs New Zealand) ವಿರುದ್ಧ ಎರಡನೇ ಪ್ರ್ಯಾಕ್ಟೀಸ್ ಮ್ಯಾಚ್ ಆಡಲಿದೆ.
ಬ್ರಿಸ್ಬೇನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟಿ20 ವಿಶ್ವಕಪ್ 2022ರ (T20 World Cup) ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದ್ದಾಗಿದೆ. ಕೊನೆಯ ಓವರ್ ವರೆಗೂ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 6 ರನ್ಗಳಿಂದ ಜಯ ಕಂಡಿತು. ಭಾರತ ಪರ ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ನಲ್ಲಿ ಮಿಂಚಿದರೆ, 20ನೇ ಓವರ್ ಬೌಲಿಂಗ್ ಮಾಡಿ ಮೊಹಮ್ಮದ್ ಶಮಿ ಸಂಚಲಸ ಸೃಷ್ಟಿಸಿದರು. ಇದೀಗ ಮೊದಲ ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ ಆತ್ಮವಿಶ್ವಾಸದಲ್ಲಿದ್ದು, ದ್ವಿತೀಯ ವಾರ್ಮ್-ಅಪ್ ಮ್ಯಾಚ್ಗೆ ಸಜ್ಜಾಗುತ್ತಿದೆ. ಅಕ್ಟೋಬರ್ 19 ರಂದು ಇದೇ ಬ್ರಿಸ್ಬೇನ್ನ ಗಬ್ಬಾ ಕ್ರೀಡಾಂಗಣದಲ್ಲಿ ಭಾರತ ತಂಡ ನ್ಯೂಜಿಲೆಂಡ್ (India vs New Zealand) ವಿರುದ್ಧ ಎರಡನೇ ಪ್ರ್ಯಾಕ್ಟೀಸ್ ಮ್ಯಾಚ್ ಆಡಲಿದೆ. ಈ ಪಂದ್ಯದಿಂದ ಕೆಲ ಆಟಗಾರರು ವಿಶ್ರಾಂತಿ ಪಡೆದುಕೊಳ್ಳುವ ನಿರೀಕ್ಷಿಯಿದೆ. ಹೀಗಾಗಿ ರೋಹಿತ್ ಪಡೆಯಲ್ಲಿ ದೊಡ್ಡ ಬದಲಾವಣೆ ನಿರೀಕ್ಷಿಸಲಾಗಿದೆ.
ಸೂರ್ಯಕುಮಾರ್ ಯಾದವ್ಗೆ ವಿಶ್ರಾಂತಿ?:
ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ವಾರ್ಮ್-ಅಪ್ ಪಂದ್ಯಂದ ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇವರ ಜಾಗಕ್ಕೆ ದೀಪಕ್ ಹೂಡ ಅಥವಾ ರಿಷಭ್ ಪಂತ್ ಪ್ಲೇಯಿಂಗ್ ಇಲೆವೆನ್ ಸೇರಿಕೊಳ್ಳಲಿದ್ದಾರೆ. ಸೂರ್ಯಕುಮಾರ್ ಟೀಮ್ ಇಂಡಿಯಾ ಪರ ಎಡೆಬಿಡದೆ ಪಂದ್ಯವನ್ನು ಆಡುತ್ತಿದ್ದಾರೆ. ಅಕ್ಟೋಬರ್ 23 ರಂದು ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯ ಇರುವುದರಿಂದ ಇದರಲ್ಲಿ ಸೂರ್ಯಕುಮಾರ್ ಮಹತ್ವದ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಸೂರ್ಯಗೆ ವಿರಾಮ ನೀಡಬಹುದು.
ಪಂತ್-ಹೂಡ ಪೈಕಿ ಯಾರು ಆಯ್ಕೆ?:
ದೀಪಕ್ ಹೂಡ ಹಾಗೂ ರಿಷಭ್ ಪಂತ್ಗೆ ಫಾರ್ಮ್ ಕಂಡುಕೊಳ್ಳಲು ಸರಿಯಾದ ಪಂದ್ಯವೇ ಸಿಕ್ಕಿಲ್ಲ. ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಅನಧಿಕೃತ ಅಭ್ಯಾಸ ಪಂದ್ಯದಲ್ಲಿ ಒಂದು ಅವಕಾಶ ಸಿಕ್ಕಿತಾದರೂ ಅದರಲ್ಲಿ ಯಶಸ್ಸು ಸಾಧಿಸಲು ಆಗಲಿಲ್ಲ. ಅಲ್ಲದೆ ಪಂತ್ ಕಳೆದ ಕೆಲವು ತಿಂಗಳುಗಳಿಂದ ಮಂಕಾಗಿದ್ದಾರೆ. ಅಗತ್ಯ ಬಿದ್ದಾಗ ಅಬ್ಬರಿಸ ಬೇಕಾಗಿರುವ ಪಂತ್ಗೆ ಫಾರ್ಮ್ ಕಂಡುಕೊಳ್ಳಲು ಒಂದು ಅವಕಾಶ ನೀಡಬಹುದು. ಹೂಡ ಮತ್ತು ಪಂತ್ ಇಬ್ಬರನ್ನೂ ಆಡಿಸಿದರೆ ಟೀಮ್ ಇಂಡಿಯಾದ ಟಾಪ್ ಆರ್ಡರ್ಗಳಾದ ರೋಹಿತ್, ಕೊಹ್ಲಿ ಹಾಗೂ ಕೆಎಲ್ ರಾಹುಲ್ ಪೈಕಿ ಒಬ್ಬರು ವಿಶ್ರಾಂತಿ ಪಡೆದುಕೊಳ್ಳಬೇಕು.
ಭಾರತ ತಂಡ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಕ್ಕೂ ಮುನ್ನ ಕೊನೆಯ ವಾರ್ಮ್-ಅಪ್ ಮ್ಯಾಚ್ನಲ್ಲಿ ಭಾರತ ಕಣಕ್ಕಿಳಿಯಲಿದ್ದು ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಇದು ಮಧ್ಯಾಹ್ನ 1:30 ಕ್ಕೆ ಶುರುವಾಗಲಿದೆ.
ಭಾರತದ ಸಂಭಾವ್ಯ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಕೆಎಲ್ ರಾಹುಲ್/ ದೀಪಕ್ ಹೂಡ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್/ ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವಿಚಂದ್ರನ್ ಅಶ್ವಿನ್, ಅರ್ಶ್ದೀಪ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ.