Virat Kohli: ನೆಟ್ನಲ್ಲಿ ಜೊತೆಯಾಗಿ ಅಭ್ಯಾಸ ನಡೆಸಿದ ವಿರಾಟ್ ಕೊಹ್ಲಿ, ಬಾಬರ್ ಅಜಮ್: ವೈರಲ್ ವಿಡಿಯೋ ನೋಡಿ
India vs Australia: ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವಾಗ ವಿರಾಟ್ ಕೊಹ್ಲಿ ಜೊತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಕೂಡ ಜೊತೆಗಿದ್ದರು. ಕೊಹ್ಲಿ ಪ್ರ್ಯಾಕ್ಟೀಸ್ ನಡೆಸುತ್ತಿದ್ದ ನೆಟ್ ಪಕ್ಕದಲ್ಲೇ ಬಾಬರ್ ಕೂಡ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿದೆ.
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ಗಾಗಿ (T20I World Cup) ಕಾಂಗರೂಗಳ ನಾಡಿನಲ್ಲಿ ಬೀಡುಬಿಟ್ಟಿರುವ ಭಾರತ ಕ್ರಿಕೆಟ್ ತಂಡ ಕಠಿಣ ಅಭ್ಯಾಸ ನಡೆಸುತ್ತಿದೆ. ಇದೀಗ ಆಸ್ಟ್ರೇಲಿಯಾ (India vs Australia) ವಿರುದ್ಧದ ವಾರ್ಮ್-ಅಪ್ ಮ್ಯಾಚ್ನಲ್ಲಿ ಗೆದ್ದು ಆತ್ಮವಿಶ್ವಾಸದಲ್ಲಿದೆ. ಸೋಲಿನ ಸುಳಿಗೆ ಸಿಲುಕಿದ ಭಾರತವನ್ನು ಮೊಹಮ್ಮದ್ ಶಮಿ ಕೊನೆಯ 20ನೇ ಓವರ್ ಬೌಲಿಂಗ್ ಮಾಡಿ ಗೆಲುವು ತಂದುಕೊಟ್ಟರು. ಈ ಮೂಲಕ ಜಸ್ಪ್ರೀತ್ ಬುಮ್ರಾ ಜಾಗಕ್ಕೆ ಆಯ್ಕೆಯಾದ ಶಮಿ ತಂಡಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸುವ ನಿರೀಕ್ಷೆ ಮೂಡಿಸಿದ್ದಾರೆ. ಟೀಮ್ ಇಂಡಿಯಾ ಗೆಲುವಿಗೆ ವಿರಾಟ್ ಕೊಹ್ಲಿ (Virat Kohli) ಕೂಡ ಕಾರಣರಾದರು. ಬ್ಯಾಟಿಂಗ್ನಲ್ಲಿ ಕೊಹ್ಲಿ ಬ್ಯಾಟ್ ಸದ್ದು ಮಾಡಿಲ್ಲವಾದರೂ ಫೀಲ್ಡಿಂಗ್ನಲ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದರು. ಒಂದು ರನೌಟ್ ಹಾಗೂ ಮತ್ತೊಂದು ರೋಚಕ ಕ್ಯಾಚ್ ಪಡೆದು ಭಾರತ 6 ರನ್ ಗಳಿಂದ ಗೆಲುವು ಸಾಧಿಸಲು ಸಹಾಯ ಮಾಡಿದರು.
ವಿರಾಟ್ ಕೊಹ್ಲಿ 13 ಎಸೆತಗಳಲ್ಲಿ ತಲಾ 1 ಫೋರ್ ಸಿಕ್ಸರ್ನೊಂದಿಗೆ 19 ರನ್ ಬಾರಿಸಿ ಔಟಾದರು. ಹೀಗಾಗಿ ಬ್ಯಾಟಿಂಗ್ನಲ್ಲಿ ಹೆಚ್ಚಿನ ಕೊಡುಗೆ ನೀಡಲಾಗದ ಕೊಹ್ಲಿ ಪಂದ್ಯ ಮುಗಿದ ಬಳಿಕ ವಿಶ್ರಾಂತಿಯನ್ನು ಕೂಡ ಪಡೆದುಕೊಳ್ಳದೆ ನೆಟ್ನಲ್ಲಿ 40 ನಿಮಿಷಗಳ ಕಾಲ ಬ್ಯಾಟಿಂಗ್ ಅಭ್ಯಾಸ ಮಾಡಿದ್ದಾರೆ. ವಿಶೇಷ ಎಂದರೆ ಕೊಹ್ಲಿ ಜೊತೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಕೂಡ ಜೊತೆಗಿದ್ದರು. ಕೊಹ್ಲಿ ಪ್ರ್ಯಾಕ್ಟೀಸ್ ನಡೆಸುತ್ತಿದ್ದ ನೆಟ್ ಪಕ್ಕದಲ್ಲೇ ಬಾಬರ್ ಕೂಡ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿದೆ. ಇವರ ಜೊತೆಗೆ ಮೊಹಮ್ಮದ್ ರಿಜ್ವಾನ್ ಕೂಡ ಇದ್ದರು.
ಟೀಮ್ ಇಂಡಿಯಾ ತನ್ನ ಎರಡನೇ ಹಾಗೂ ಕೊನೆಯ ವಾರ್ಮ್-ಅಪ್ ಮ್ಯಾಚ್ ಅನ್ನು ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ಧ ಆಡಲಿದೆ. ಇದು ಮಧ್ಯಾಹ್ನ 1:30 ಕ್ಕೆ ಶುರುವಾಗಲಿದೆ. ರೋಹಿತ್ ಪಡೆ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಭಾರತ- ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ:
ಅಭ್ಯಾಸ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಪರ ಕೆ.ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 186 ರನ್ ಕಲೆಹಾಕಿತು. ಆರಂಭಿಕರಾಗಿ ರಾಹುಲ್ ಅಬ್ಬರಿಸಿದ್ರೆ, ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಭರ್ಜರಿ ಫಾರ್ಮ್ ಮುಂದುವರಿಸಿದರು. 33 ಎಸೆತಗಳಲ್ಲಿ 57 ರನ್ ಗಳಿಸಿದ ರಾಹುಲ್ ಇನ್ನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡಿದ್ದವು. ಸೂರ್ಯಕುಮಾರ್ 33 ಎಸೆತಗಳಲ್ಲಿ 6 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿ 50 ರನ್ಗೆ ನಿರ್ಗಮಿಸಿದರು.
187 ರನ್ಗಳ ಟಾರ್ಗೆಟ್ ಬೆನ್ನತ್ತಿದ್ದ ಆಸ್ಟ್ರೇಲಿಯಾ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿತು. ನಾಯಕ ಆ್ಯರೋನ್ ಫಿಂಚ್ ಮತ್ತು ಮಿಚೆಲ್ ಮಾರ್ಷ್ ಜೊಡಿ 41ರನ್ ಕಲೆಹಾಕಿತು. ಅದರಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ ಫಿಂಚ್ 54 ಎಸೆತಗಳಲ್ಲಿ 76 ರನ್ ಕಲೆಹಾಕಿದರು. ಆಸ್ಟ್ರೇಲಿಯಾ 18 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿ ಜಯದ ಹಾದಿಯಲ್ಲಿದ್ದಾಗ ಡೇವಿಸ್ ರನೌಟ್ ಮತ್ತು ಪ್ಯಾಟ್ ಕಮ್ಮಿನ್ಸ್ ಕ್ಯಾಚ್ ಪಂದ್ಯಕ್ಕೆ ರೋಚಕ ತಿರುವು ನೀಡಿತು.
ಕೊನೆಯ ಓವರ್ನಲ್ಲಿ ಆಸ್ಟ್ರೇಲಿಯಾ ಗೆಲುವಿಗೆ 11 ರನ್ಗಳು ಬೇಕಾಯಿತು. ಈ ಸಂದರ್ಭ ರೋಹಿತ್ ಅಚ್ಚರಿ ಎಂಬಂತೆ ಮೊಹಮ್ಮದ್ ಶಮಿಗೆ ಬೌಲಿಂಗ್ ಕೊಟ್ಟರು. ಈ ಓವರ್ನಲ್ಲಿ ಶಮಿ ಕೇವಲ 4 ರನ್ ನೀಡಿ ಒಂದು ರನೌಟ್ ಜೊತೆಗೆ 3 ವಿಕೆಟ್ ಪಡೆದುಕೊಂಡರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್ನಲ್ಲಿ 180 ರನ್ಗೆ ಆಲೌಟ್ ಆಗುವ ಮೂಲಕ ಭಾರತ 6 ರನ್ಗಳ ರೋಚಕ ಜಯ ಸಾಧಿಸಿತು. ಶಮಿ 3 ವಿಕೆಟ್ ಕಿತ್ತರೆ, ಭುವನೇಶ್ವರ್ 2 ವಿಕೆಟ್ ಪಡೆದರು.
Published On - 9:10 am, Tue, 18 October 22