T20 World Cup 2022: ಟೀಮ್ ಇಂಡಿಯಾದ ಮತ್ತೋರ್ವ ಆಟಗಾರನಿಗೆ ಗಾಯ..!
T20 World Cup 2022: ಇದೀಗ ಜಸ್ಪ್ರೀತ್ ಬುಮ್ರಾ ಬದಲಿಗೆ ಮುಖ್ಯ ತಂಡಕ್ಕೆ ಮೊಹಮ್ಮದ್ ಶಮಿ ಆಯ್ಕೆಯಾಗಿದ್ದಾರೆ. ಇನ್ನು ಶಮಿ ಸ್ಥಾನಕ್ಕೆ ಮೀಸಲು ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ.
T20 World Cup 2022: ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಶುರುವಾದ ಟೀಮ್ ಇಂಡಿಯಾದ (Team India) ಗಾಯದ ಸಮಸ್ಯೆ ಮುಂದುವರೆದಿದೆ. ಈ ಹಿಂದೆ ಟಿ20 ವಿಶ್ವಕಪ್ ತಂಡ ಪ್ರಕಟವಾದ ಬೆನ್ನಲ್ಲೇ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಗಾಯಗೊಂಡು ತಂಡದಿಂದ ಹೊರಬಿದ್ದಿದ್ದರು. ಹಾಗೆಯೇ ತಂಡ ಇನ್ನೇನು ಆಸ್ಟ್ರೇಲಿಯಾದತ್ತ ಪ್ರಯಾಣ ಬೆಳೆಸಲಿದೆ ಅನ್ನುವಷ್ಟರಲ್ಲಿ ದೀಪಕ್ ಚಹರ್ (Deepak Chahar) ಕೂಡ ಗಾಯಗೊಂಡಿದ್ದರು. ಇದರಿಂದ ಭಾರತವು ಟಿ20 ವಿಶ್ವಕಪ್ ತಂಡದಲ್ಲಿ ಮೂರು ಪ್ರಮುಖ ಬದಲಾವಣೆ ಮಾಡಿಕೊಳ್ಳಬೇಕಾಯಿತು. ಅದರಂತೆ ಇದೀಗ ಜಸ್ಪ್ರೀತ್ ಬುಮ್ರಾ ಬದಲಿಗೆ ಮುಖ್ಯ ತಂಡಕ್ಕೆ ಮೊಹಮ್ಮದ್ ಶಮಿ (Mohammed Shami) ಆಯ್ಕೆಯಾಗಿದ್ದಾರೆ. ಇನ್ನು ಶಮಿ ಸ್ಥಾನಕ್ಕೆ ಮೀಸಲು ಆಟಗಾರರ ಪಟ್ಟಿಯಲ್ಲಿ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದಿದ್ದಾರೆ. ಹಾಗೆಯೇ ದೀಪಕ್ ಚಹರ್ ಸ್ಥಾನದಲ್ಲಿ ಶಾರ್ದೂಲ್ ಠಾಕೂರ್ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಅಲ್ಲಿಗೆ ಗಾಯದ ಸಮಸ್ಯೆ ಕೊನೆಗೊಂಡಿತು ಅನ್ನುಷ್ಟರಲ್ಲಿ ಇದೀಗ ಮುಖ್ಯ ಬಳಗದಲ್ಲಿರುವ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಕೂಡ ಗಾಯಾಳುವಾಗಿದ್ದಾರೆ.
ಬ್ರಿಸ್ಬೇನ್ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯಕ್ಕೂ ಮುನ್ನ ರಿಷಭ್ ಪಂತ್ ಅವರ ಮೊಣಕಾಲಿಗೆ ಗಾಯವಾಗಿದೆ. ಹೀಗಾಗಿ ಅವರು ಮೊಣಕಾಲಿನ ಮೇಲೆ ಐಸ್ ಕ್ಯಾಪ್ನೊಂದಿಗೆ ಡಗೌಟ್‌ನಲ್ಲಿ ಕುಳಿತಿರುವುದು ಕಂಡುಬಂದಿದೆ. ಇದಾಗ್ಯೂ ಈ ಗಾಯವು ಗಂಭೀರವಲ್ಲ ಎಂದು ತಿಳಿದು ಬಂದಿದೆ.
ಇತ್ತ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳಾಗಿ ಕೆಎಲ್ ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಇದ್ದಾರೆ. ಹೀಗಾಗಿ ರಿಷಭ್ ಪಂತ್ ಅವರ ಗಾಯದ ಬಗ್ಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಕೂಡ ಹೆಚ್ಚು ಚಿಂತಿತವಾಗಿಲ್ಲ. ಏಕೆಂದರೆ ಪಾಕಿಸ್ತಾನ್ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ನಲ್ಲಿ ದಿನೇಶ್ ಕಾರ್ತಿಕ್ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಮಹತ್ವದ ಬದಲಾವಣೆ ಕಂಡು ಬರುವುದಿಲ್ಲ ಎಂದೇ ಹೇಳಬಹುದು.
ಭಾರತ ತಂಡ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಆರ್ ಅಶ್ವಿನ್, ಮೊಹಮ್ಮದ್ ಶಮಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಸಿರಾಜ್, ರವಿ ಬಿಷ್ಣೋಯ್, ಶ್ರೇಯಸ್ ಅಯ್ಯರ್, ಶಾರ್ದೂಲ್ ಠಾಕೂರ್