T20 World Cup 2022: ಅಭ್ಯಾಸ ಪಂದ್ಯದಲ್ಲೇ ಪಾಕ್ಗೆ ಹೀನಾಯ ಸೋಲು
T20 World Cup 2022: ಮೊದಲೆರಡು ವಿಕೆಟ್ ಪಡೆದ ಹುಮ್ಮಸ್ಸಿನಲ್ಲಿದ್ದ ಪಾಕ್ ತಂಡಕ್ಕೆ ಆ ಬಳಿಕ ಎದುರಾಗಿದ್ದ ಬೆನ್ ಸ್ಟೋಕ್ಸ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ರ ಉತ್ತಮ ಜೊತೆಯಾಟ.
T20 World Cup 2022: ಟಿ20 ವಿಶ್ವಕಪ್ನಲ್ಲಿ ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲೇ ಪಾಕಿಸ್ತಾನ್ (Pakistan) ತಂಡವು ಹೀನಾಯ ಸೋಲನುಭವಿಸಿದೆ. ಬ್ರಿಸ್ಬೇನ್ನ ಗಾಬಾ ಮೈದಾನದಲ್ಲಿ ನಡೆದ 11ನೇ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬೌಲಿಂಗ್ ಆಯ್ದುಕೊಂಡರು. ಆದರೆ ಮಳೆಯ ಕಾರಣ ಪಂದ್ಯವನ್ನು 19 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ಪರ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಆಜಂ ಕಣಕ್ಕಿಳಿದಿರಲಿಲ್ಲ. ಬದಲಾಗಿ ಶಾನ್ ಮಸೂದ್ ಹಾಗೂ ಹೈದರ್ ಅಲಿಯನ್ನು ಓಪನರ್ಗಳಾಗಿ ಕಣಕ್ಕಿಳಿಸಲಾಗಿತ್ತು. ಆದರೆ ಸಿಕ್ಕ ಅವಕಾಶದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಈ ಜೋಡಿಯು ಮೊದಲ 4 ಓವರ್ಗಳ ವೇಳೆ ತಂಡದ ಮೊತ್ತವನ್ನು 40 ರ ಗಡಿದಾಟಿಸಿದರು.
ಆದರೆ ಈ ಹಂತದಲ್ಲಿ 18 ರನ್ಗಳಿಸಿದ್ದ ಹೈದರ್ ಅಲಿ ಬೆನ್ ಸ್ಟೋಕ್ಸ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಲಿವಿಂಗ್ಸ್ಟೋನ್ರ ಸ್ಪಿನ್ ಮೋಡಿಗೆ ಶಾನ್ ಮಸೂದ್ (39) ಕೂಡ ಬಲಿಯಾದರು. ಉತ್ತಮ ಆರಂಭದ ಹೊರತಾಗಿಯೂ ಆ ಬಳಿಕ ಪಾಕ್ ತಂಡವು ಕಳಪೆ ಬ್ಯಾಟಿಂಗ್ ಪ್ರದರ್ಶಿಸಿತು.
ಮೊದಲ 10 ಓವರ್ಗಳಲ್ಲಿ 96 ರನ್ ಬಾರಿಸಿದ್ದ ಪಾಕ್ ತಂಡದ ವಿರುದ್ದ ದ್ವಿತಿಯಾರ್ಧದಲ್ಲಿ ಇಂಗ್ಲೆಂಡ್ ಬೌಲರ್ಗಳು ಮೇಲುಗೈ ಸಾಧಿಸಿದರು. ಪರಿಣಾಮ ಕೊನೆಯ 9 ಓವರ್ಗಳಲ್ಲಿ ಪಾಕ್ ತಂಡ ಕಲೆಹಾಕಿದ್ದು ಕೇವಲ 64 ರನ್ಗಳು ಮಾತ್ರ. ಅದರಂತೆ ನಿಗದಿತ 19 ಓವರ್ಗಳಲ್ಲಿ ಪಾಕಿಸ್ತಾನ್ ತಂಡವು 8 ವಿಕೆಟ್ ನಷ್ಟಕ್ಕೆ 160 ರನ್ ಪೇರಿಸಿತು.
161 ರನ್ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ತಂಡಕ್ಕೆ ಯುವ ವೇಗಿ ನಸೀಮ್ ಶಾ ಆರಂಭಿಕ ಆಘಾತ ನೀಡಿದ್ದರು. 1 ರನ್ಗಳಿಸಿದ್ದ ಆರಂಭಿಕ ಆಟಗಾರ ಫಿಲಿಪ್ ಸಾಲ್ಟ್ ಅವರನ್ನು ಬೌಲ್ಡ್ ಮಾಡುವ ಮೂಲಕ ನಸೀಮ್ ಪಾಕ್ಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಶಾದಾಬ್ ಖಾನ್ ಅಲೆಕ್ಸ್ ಹೇಲ್ಸ್ (9) ವಿಕೆಟ್ ಪಡೆದರು.
ಮೊದಲೆರಡು ವಿಕೆಟ್ ಪಡೆದ ಹುಮ್ಮಸ್ಸಿನಲ್ಲಿದ್ದ ಪಾಕ್ ತಂಡಕ್ಕೆ ಆ ಬಳಿಕ ಎದುರಾಗಿದ್ದು ಬೆನ್ ಸ್ಟೋಕ್ಸ್ ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ರ ಉತ್ತಮ ಜೊತೆಯಾಟ. ಕೇವಲ 18 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 36 ರನ್ ಬಾರಿಸಿ ಸ್ಟೋಕ್ಸ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಮತ್ತೊಂದೆಡೆ ಆರ್ಭಟಿಸಿದ ಲಿವಿಂಗ್ಸ್ಟೋನ್ 2 ಸಿಕ್ಸ್ನೊಂದಿಗೆ 18 ಎಸೆತಗಳಲ್ಲಿ 28 ರನ್ ಬಾರಿಸಿ ವಾಸಿಂ ಜೂನಿಯರ್ಗೆ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಾಗಲೇ ಇಂಗ್ಲೆಂಡ್ ತಂಡವು 10.3 ಓವರ್ಗಳಲ್ಲಿ 104 ರನ್ ಕಲೆಹಾಕಿತ್ತು. ಇನ್ನು ಫಿನಿಶಿಂಗ್ ಜವಾಬ್ದಾರಿವಹಿಸಿಕೊಂಡ ಸ್ಯಾಮ್ ಕರನ್ 14 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 2 ಫೋರ್ನೊಂದಿಗೆ 33 ರನ್ ಬಾರಿಸಿದರೆ, ಹ್ಯಾರಿ ಬ್ರೂಕ್ 24 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್ನೊಂದಿಗೆ ಅಜೇಯ 45 ರನ್ ಚಚ್ಚಿದರು. ಪರಿಣಾಮ 14.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 163 ರನ್ಗಳಿಸಿ ಇಂಗ್ಲೆಂಡ್ ತಂಡವು ಭರ್ಜರಿ ಜಯ ಸಾಧಿಸಿತು.
ಸದ್ಯ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸೋತಿರುವ ಪಾಕಿಸ್ತಾನ್ ತಂಡವು ಅಕ್ಟೋಬರ್ 23 ರಂದು ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ಮೂಲಕ ಟಿ20 ವಿಶ್ವಕಪ್ ಅಭಿಯಾನ ಆರಂಭಿಸಲಿದೆ. ಅತ್ತ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಗೆದ್ದು ಶುಭಾರಂಭ ಮಾಡಿರುವ ಟೀಮ್ ಇಂಡಿಯಾ ಅಕ್ಟೋಬರ್ 19 ರಂದು ನ್ಯೂಜಿಲೆಂಡ್ ವಿರುದ್ಧ 2ನೇ ಅಭ್ಯಾಸ ಪಂದ್ಯವಾಡಲಿದೆ.