T20 World Cup 2022: ಸಿಕಂದರ್ ರಾಝ ಆರ್ಭಟ: ಜಿಂಬಾಬ್ವೆಗೆ ಭರ್ಜರಿ ಜಯ
T20 World Cup 2022: ಈ ಹಂತದದಲ್ಲಿ ಮಧ್ವೆರೆ 22 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಪರಿಣಾಮ ಮೊದಲ 10 ಓವರ್ಗಳಲ್ಲಿ ಜಿಂಬಾಬ್ವೆ ತಂಡವು 4 ವಿಕೆಟ್ ನಷ್ಟಕ್ಕೆ 79 ರನ್ಗಳಿಸಲಷ್ಟೇ ಶಕ್ತರಾದರು.
T20 World Cup 2022: ಐಸಿಸಿ ಟಿ20 ವಿಶ್ವಕಪ್ ಅರ್ಹತಾ ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಐರ್ಲೆಂಡ್ (Zimbabwe vs Ireland) ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಗ್ರೂಪ್- ಬಿ ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಐರ್ಲೆಂಡ್ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇನ್ನು ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಜಿಂಬಾಬ್ವೆ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಚಕಬ್ವಾ ಮೊದಲ ಓವರ್ನ 2ನೇ ಎಸೆತದಲ್ಲೇ ಶೂನ್ಯಕ್ಕೆ ಔಟಾದರು. ಇದರ ಬೆನ್ನಲ್ಲೇ ನಾಯಕ ಕ್ರೇಗ್ ಎರ್ವಿನ್ 9 ರನ್ಗಳಿಸಿ ಸಿಮಿ ಸಿಂಗ್ಗೆ ವಿಕೆಟ್ ಒಪ್ಪಿಸಿದರು.
ಈ ಹಂತದದಲ್ಲಿ ಮಧ್ವೆರೆ 22 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರೂ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು. ಪರಿಣಾಮ ಮೊದಲ 10 ಓವರ್ಗಳಲ್ಲಿ ಜಿಂಬಾಬ್ವೆ ತಂಡವು 4 ವಿಕೆಟ್ ನಷ್ಟಕ್ಕೆ 79 ರನ್ಗಳಿಸಲಷ್ಟೇ ಶಕ್ತರಾದರು. ಆದರೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಿಕಂದರ್ ರಾಝ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿದರು. ಕಣಕ್ಕಿಳಿಯುತ್ತಿದ್ದಂತೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ರಾಝ ಐರ್ಲೆಂಡ್ ಬೌಲರ್ಗಳ ಬೆಂಡೆತ್ತಿದರು. ಅಲ್ಲದೆ 5 ಸಿಕ್ಸ್ ಹಾಗೂ ಐದು ಫೋರ್ನೊಂದಿಗೆ ಕೇವಲ 48 ಎಸೆತಗಳಲ್ಲಿ 82 ರನ್ ಚಚ್ಚಿದರು.
ಸಿಕಂದರ್ ರಾಝ ಅವರ ಈ ಸ್ಪೋಟಕ ಇನಿಂಗ್ಸ್ ನೆರವಿನಿಂದ ಜಿಂಬಾಬ್ವೆ ತಂಡವು ಅಂತಿಮವಾಗಿ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿತು.
175 ರನ್ಗಳ ಬೃಹತ್ ಗುರಿ ಪಡೆದ ಐರ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರ ಪೌಲ್ ಸ್ಟೀರ್ಲಿಂಗ್ ಕೈಕೊಟ್ಟರು. ನಾಗರವ 2ನೇ ಎಸೆತದಲ್ಲೇ ಸ್ಟೀರ್ಲಿಂಗ್ (0) ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇದರ ಬೆನ್ನಲ್ಲೇ ಯುವ ವೇಗಿ ಮುಜರಾಬಾನಿ ಐರ್ಲೆಂಡ್ ನಾಯಕ ಬಾಲ್ಬಿರ್ನಿ (3) ಗೂ ಪೆವಿಲಿಯನ್ ಹಾದಿ ತೋರಿಸಿದರು.
ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಕಳೆದುಕೊಂಡ ಐರ್ಲೆಂಡ್ ತಂಡ ಆ ಬಳಿಕ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿಲ್ಲ ಎಂದೇ ಹೇಳಬಹುದು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಕರ್ಟಿಸ್ ಕ್ಯಾಂಫರ್ 27 ರನ್ ಬಾರಿಸಿದರೂ, ಜಿಂಬಾಬ್ವೆ ತಂಡದ ಕರಾರುವಾಕ್ ದಾಳಿ ಮುಂದೆ ಹೆಚ್ಚು ನಿಲ್ಲಲು ಸಾಧ್ಯವಾಗಲಿಲ್ಲ.
ಅಂತಿಮವಾಗಿ ಐರ್ಲೆಂಡ್ ತಂಡವು ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 143 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲೇ 31 ರನ್ಗಳ ಭರ್ಜರಿ ಜಯ ಸಾಧಿಸಿ ಜಿಂಬಾಬ್ವೆ ತಂಡವು ಶುಭಾರಂಭ ಮಾಡಿದೆ. ಜಿಂಬಾಬ್ವೆ ಪರ ಬ್ಲೆಸಿಂಗ್ ಮುಜರಬಾನಿ 3 ವಿಕೆಟ್ ಪಡೆದರೆ, ಚತಾರ, ರಿಚರ್ಡ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಜಿಂಬಾಬ್ವೆ ಪ್ಲೇಯಿಂಗ್ 11: ರೆಗಿಸ್ ಚಕಬ್ವಾ , ಕ್ರೇಗ್ ಎರ್ವಿನ್ (ನಾಯಕ) , ವೆಸ್ಲಿ ಮಧ್ವೆರೆ , ಸೀನ್ ವಿಲಿಯಮ್ಸ್ , ಸಿಕಂದರ್ ರಾಝ , ಮಿಲ್ಟನ್ ಶುಂಬಾ , ರಿಯಾನ್ ಬರ್ಲ್ , ಲ್ಯೂಕ್ ಜೊಂಗ್ವೆ , ಟೆಂಡೈ ಚಟಾರಾ , ರಿಚರ್ಡ್ ನಾಗರವಾ , ಬ್ಲೆಸ್ಸಿಂಗ್ ಮುಜರಬಾನಿ.
ಐರ್ಲೆಂಡ್ ಪ್ಲೇಯಿಂಗ್ 11: ಆಂಡ್ರ್ಯೂ ಬಾಲ್ಬಿರ್ನಿ (ನಾಯಕ) , ಪೌಲ್ ಸ್ಟಿರ್ಲಿಂಗ್ , ಲೋರ್ಕನ್ ಟಕರ್, ಹ್ಯಾರಿ ಟೆಕ್ಟರ್ , ಜಾರ್ಜ್ ಡಾಕ್ರೆಲ್ , ಕರ್ಟಿಸ್ ಕ್ಯಾಂಫರ್ , ಗರೆಥ್ ಡೆಲಾನಿ , ಮಾರ್ಕ್ ಅಡೈರ್ , ಸಿಮಿ ಸಿಂಗ್ , ಬ್ಯಾರಿ ಮೆಕಾರ್ಥಿ , ಜೋಶುವಾ ಲಿಟಲ್.