IPL 2023: CSK ಕೊನೆಯ ಕಸರತ್ತು: ಮಿನಿ ಹರಾಜಿನತ್ತ ರವೀಂದ್ರ ಜಡೇಜಾ
IPL 2023 Retention: ಇತರೆ ಫ್ರಾಂಚೈಸಿಗಳು ಕೂಡ ಸಿಎಸ್‌ಕೆ ತಂಡದಿಂದ ಜಡೇಜಾ ಹೊರಬರುವುದನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಹರಾಜಿನಲ್ಲಿ ಕಾಣಿಸಿಕೊಂಡರೆ ಎಡಗೈ ಆಲ್ರೌಂಡರ್ ಕೋಟಿ ಮೊತ್ತಕ್ಕೆ ಬಿಕರಿಯಾಗುವುದರಲ್ಲಿ ಅನುಮಾನವೇ ಇಲ್ಲ.
IPL 2023: ಐಪಿಎಲ್ ಸೀಸನ್ 16 ಸಿದ್ಧತೆಗಳು ಶುರುವಾದ ಬೆನ್ನಲ್ಲೇ ಇದೀಗ ಯಾವ ಫ್ರಾಂಚೈಸಿ ಯಾರನ್ನು ತಂಡದಲ್ಲೇ ಉಳಿಸಿ ಯಾರನ್ನು ಬಿಡುಗಡೆ ಮಾಡಲಿದೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ನವೆಂರ್ 15 ರೊಳಗೆ ಎಲ್ಲಾ ತಂಡಗಳು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕೆಂದು ಐಪಿಎಲ್ ಆಡಳಿತ ಮಂಡಳಿ ಸೂಚಿಸಿದೆ. ಇದರ ಬೆನ್ನಲ್ಲೇ ರವೀಂದ್ರ ಜಡೇಜಾ ಅವರ ನಡೆಯೇನು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಏಕೆಂದರೆ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬುದು ಈ ಹಿಂದೆಯೇ ಸುದ್ದಿಯಾಗಿತ್ತು. ಇದನ್ನು ಪುಷ್ಠೀಕರಿಸುವಂತೆ ಅವರು ಕೂಡ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸುವ ತಮ್ಮೆಲ್ಲಾ ಪೋಸ್ಟ್ಗಳನ್ನು ಸೋಷಿಯಲ್ ಮೀಡಿಯಾದಿಂದ ಅಳಿಸಿ ಹಾಕಿದ್ದರು. ಹೀಗಾಗಿಯೇ ರವೀಂದ್ರ ಜಡೇಜಾ ಸಿಎಸ್‌ಕೆ ತಂಡದಲ್ಲೇ ಉಳಿದುಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ.
ಇತ್ತ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ದಿನಾಂಕ ನಿಗದಿಯಾಗುತ್ತಿದ್ದಂತೆ ಸಿಎಸ್‌ಕೆ ಫ್ರಾಂಚೈಸಿಯು ಜಡೇಜಾ ಅವರ ಮನವೊಲಿಸಲು ಕಸರತ್ತು ನಡೆಸಲು ಮುಂದಾಗಿದೆ ಎಂದು ವರದಿಯಾಗಿದೆ. ಏಕೆಂದರೆ ಜಡೇಜಾ ಸದ್ಯ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇದೇ ವೇಳೆ ಅವರ ಮನವೊಲಿಸಿ ತಂಡದಲ್ಲೇ ಉಳಿಸಿಕೊಳ್ಳಲು ಸಿಎಸ್‌ಕೆ ಫ್ರಾಂಚೈಸಿ ತೆರೆಮರೆಯ ಪ್ರಯತ್ನಕ್ಕೆ ಕೈಹಾಕಿದೆ.
ನಾಯಕತ್ವ ತೊರೆದಿದ್ದ ಜಡ್ಡು:
ಐಪಿಎಲ್ ಸೀಸನ್ 15 ನಲ್ಲಿ ಸಿಎಸ್‌ಕೆ ಫ್ರಾಂಚೈಸಿ ಜಡೇಜಾರನ್ನು ನಾಯಕರಾಗಿ ಆಯ್ಕೆ ಮಾಡಿಕೊಂಡಿತು. ಆದರೆ ತಂಡದ ಕಳಪೆ ಪ್ರದರ್ಶನದ ನಂತರ ಅವರು ನಾಯಕತ್ವವನ್ನು ತೊರೆದರು. ಇದಾದ ಬಳಿಕ ಎಂಎಸ್ ಧೋನಿ ಮತ್ತೆ ತಂಡವನ್ನು ಮುನ್ನಡೆಸಿದರು. ಆದರೆ ನಾಯಕತ್ವ ತೊರೆದ ಬಳಿಕ ಜಡೇಜಾ ಗಾಯದ ಕಾರಣ ಸಂಪೂರ್ಣ ಟೂರ್ನಿಯನ್ನು ಆಡಿರಲಿಲ್ಲ. ಇದೀಗ ಜಡೇಜಾ ಹಾಗೂ ಸಿಎಸ್‌ಕೆ ಫ್ರಾಂಚೈಸಿ ಮುನಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಏಕೆಂದರೆ ರವೀಂದ್ರ ಜಡೇಜಾ ಮತ್ತು ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಐಪಿಎಲ್ 2022 ರ ಬಳಿಕ ಪರಸ್ಪರ ಸಂಪರ್ಕದಲ್ಲಿಲ್ಲ. ಐಪಿಎಲ್ 15ನೇ ಸೀಸನ್ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಸಿಎಸ್‌ಕೆ ತಂಡಕ್ಕೆ ಸಂಬಂಧಿಸಿದ ಪೋಸ್ಟ್ಗಳನ್ನು ಜಡೇಜಾ ಡಿಲೀಟ್ ಕೂಡ ಮಾಡಿದ್ದರು. ಇದೀಗ ಸಿಎಸ್‌ಕೆ ಫ್ರಾಂಚೈಸಿ ಜೊತೆ ಜಡ್ಡು ಯಾವುದೇ ಸಂಪರ್ಕದಲ್ಲಿ ಇರದ ಕಾರಣ ತಂಡವನ್ನು ತೊರೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
16 ಕೋಟಿಗೆ ಬಿಗ್ ಡೀಲ್:
ಐಪಿಎಲ್2022 ರ ಮೆಗಾ ಹರಾಜಿಗೂ ಮುನ್ನ ಸಿಎಸ್‌ಕೆ ರವೀಂದ್ರ ಜಡೇಜಾ ಅವರನ್ನು ಗರಿಷ್ಠ 16 ಕೋಟಿ ರೂ.ಗೆ ಉಳಿಸಿಕೊಂಡಿತ್ತು. ಮತ್ತೊಂದೆಡೆ ಎಂಎಸ್ ಧೋನಿ ಪಡೆದದ್ದು ಕೇವಲ 12 ಕೋಟಿ ರೂ. ಮಾತ್ರ. ಧೋನಿ ಅವರೇ ತಮ್ಮ ಸಂಭಾವನೆ ಕಡಿಮೆ ಮಾಡುವಂತೆ ಕೇಳಿಕೊಂಡಿದ್ದರು. ಅಷ್ಟೇ ಅಲ್ಲದೆ ತಂಡದ ದುಬಾರಿ ಆಟಗಾರ ಜಡೇಜಾ ಅವರಿಗೆ ನಾಯಕನ ಪಟ್ಟ ಕೂಡ ನೀಡಲಾಗಿತ್ತು.
ಆದರೆ ಟೂರ್ನಿಯ ನಡುವೆ ಜಡೇಜಾ ಹಾಗೂ ಸಿಎಸ್‌ಕೆ ಮ್ಯಾನೇಜ್ಮೆಂಟ್ ನಡುವೆ ಅಹಿತಕರ ಘಟನೆಗಳು ನಡೆದಿವೆ ಎನ್ನಲಾಗಿದೆ. ಇದೇ ಕಾರಣದಿಂದಾಗಿ ಜಡೇಜಾ ನಾಯಕತ್ವವನ್ನು ತೊರೆದಿದ್ದರು. ಅಷ್ಟೇ ಅಲ್ಲದೆ ಆ ಬಳಿಕ ತಂಡದಿಂದ ಹೊರಗುಳಿದ ಜಡ್ಡು ಸಿಎಸ್‌ಕೆ ಜೊತೆಗೆ ಯಾವುದೇ ಸಂಪರ್ಕದಲ್ಲಿಲ್ಲ. ಇದೀಗ ಜಡೇಜಾ ಅವರ ಮನವೊಲಿಸಲು ಸಿಎಸ್‌ಕೆ ಮುಂದಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಸ್ಟಾರ್ ಆಟಗಾರನನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೇ ಉಳಿಸಿಕೊಳ್ಳಲು ಕೊನೆಯ ಪ್ರಯತ್ನಕ್ಕೆ ಕೈಹಾಕಿದೆ.
ಇತ್ತ ಸಿಎಸ್‌ಕೆ ಫ್ರಾಂಚೈಸಿ ರವೀಂದ್ರ ಜಡೇಜಾರನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಯಸಿದರೂ ಅವರು ಅದರ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಇದೇ ಕಾರಣದಿಂದಾಗಿ ಸಿಎಸ್‌ಕೆ ಮ್ಯಾನೇಜ್ಮೆಂಟ್ ಜೊತೆಗಿನ ಎಲ್ಲಾ ರೀತಿಯ ಸಂಪರ್ಕಗಳನ್ನು ಅವರು ಕಡಿದುಕೊಂಡಿದ್ದಾರು.
ಹೀಗಾಗಿ ರವೀಂದ್ರ ಜಡೇಜಾ ಮುಂದಿನ ಐಪಿಎಲ್ಗಾಗಿ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದೇ ಈಗ ಕೌತುಕವಾಗಿದೆ. ಇತ್ತ ಇತರೆ ಫ್ರಾಂಚೈಸಿಗಳು ಕೂಡ ಸಿಎಸ್‌ಕೆ ತಂಡದಿಂದ ಜಡೇಜಾ ಹೊರಬರುವುದನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಹರಾಜಿನಲ್ಲಿ ಕಾಣಿಸಿಕೊಂಡರೆ ಎಡಗೈ ಆಲ್ರೌಂಡರ್ ಕೋಟಿ ಮೊತ್ತಕ್ಕೆ ಬಿಕರಿಯಾಗುವುದರಲ್ಲಿ ಅನುಮಾನವೇ ಇಲ್ಲ.
ಐಪಿಎಲ್ನ ಸ್ಟಾರ್ ಆಟಗಾರ:
ಐಪಿಎಲ್ನಲ್ಲಿ ಇದುವರೆಗೆ 210 ಪಂದ್ಯಗಳನ್ನು ಆಡಿರುವ ಜಡೇಜಾ 132 ವಿಕೆಟ್ ಪಡೆದಿದ್ದಾರೆ. 16 ರನ್‌ಗೆ 5 ವಿಕೆಟ್ ಪಡೆದದ್ದು ಅತ್ಯುತ್ತಮ ಪ್ರದರ್ಶನ. ಹಾಗೆಯೇ 2502 ರನ್ ಕೂಡ ಗಳಿಸಿದ್ದಾರೆ. ಈ ವೇಳೆ 2 ಅರ್ಧಶತಕಗಳನ್ನು ಬಾರಿಸಿದ್ದರು. ಅಂದರೆ 100 ಕ್ಕೂ ಅಧಿಕ ವಿಕೆಟ್ ಹಾಗೂ 2 ಸಾವಿರಕ್ಕೂ ಅಧಿಕ ರನ್ ಕಲೆಹಾಕುವ ಮೂಲಕ ರವೀಂದ್ರ ಜಡೇಜಾ ಐಪಿಎಲ್ನಲ್ಲಿ ಪರಿಪೂರ್ಣ ಆಲ್ರೌಂಡರ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಸಿಎಸ್‌ಕೆ ತಂಡದಿಂದ ಜಡೇಜಾ ಹೊರಬಂದರೆ 9 ಫ್ರಾಂಚೈಸಿಗಳು ಟೀಮ್ ಇಂಡಿಯಾ ಆಲ್ರೌಂಡರ್ನ ಖರೀದಿಗಾಗಿ ಭರ್ಜರಿ ಪೈಪೋಟಿ ನಡೆಸುವುದಂತು ಖಚಿತ.