ಚೇತನ್ ಶರ್ಮಾ ನೇತೃತ್ವದ ಬಿಸಿಸಿಐ (BCCI)ನ ಹಿರಿಯ ಆಯ್ಕೆ ಸಮಿತಿಯು ಶ್ರೀಲಂಕಾ (Sri Lanka)ವಿರುದ್ಧದ ಸರಣಿಗೆ ಭಾರತ ತಂಡ ( Indian team)ವನ್ನು ಶನಿವಾರ ಪ್ರಕಟಿಸಿದೆ. ಭಾರತ ಪ್ರವಾಸದಲ್ಲಿ ಶ್ರೀಲಂಕಾ ತಂಡ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಟಿ20 ಸರಣಿಯೊಂದಿಗೆ ಪ್ರವಾಸ ಆರಂಭವಾಗಲಿದೆ. ಮೊದಲ ಪಂದ್ಯ ಫೆಬ್ರವರಿ 24 ರಂದು, ಎರಡನೇ ಪಂದ್ಯ 26 ರಂದು ಮತ್ತು ಮೂರನೇ ಪಂದ್ಯ ಫೆಬ್ರವರಿ 27 ರಂದು ನಡೆಯಲಿದೆ. ಈ ಮೂರು ಪಂದ್ಯಗಳು ಧರ್ಮಶಾಲಾ (Dharamsala)ದಲ್ಲಿರುವ ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇದಾದ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಪಂದ್ಯ ಮೊಹಾಲಿಯಲ್ಲಿ ಮಾರ್ಚ್ 4 ರಿಂದ 8 ರವರೆಗೆ ನಡೆಯಲಿದ್ದು, ಅದೇ ಸಮಯದಲ್ಲಿ ಬೆಂಗಳೂರಿನಲ್ಲಿ ಎರಡನೇ ಪಂದ್ಯ ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಲಿದೆ. ಭಾರತ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ T20I ಸರಣಿಯನ್ನು ಆಡುತ್ತಿದ್ದು, ಇದರಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಸರಣಿಯ ಮೂರನೇ ಪಂದ್ಯದ ಮೊದಲು, ಮಂಡಳಿಯು ರಿಷಬ್ ಪಂತ್ ಮತ್ತು ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿದ್ದು, ಇಬ್ಬರೂ ಶ್ರೀಲಂಕಾ ವಿರುದ್ಧದ ಟಿ 20 ಸರಣಿಯನ್ನು ಆಡುವುದಿಲ್ಲ.
ರಹಾನೆ ಮತ್ತು ಪೂಜಾರರನ್ನು ಕೈಬಿಟ್ಟಿದ್ಯಾಕೆ?
ರಹಾನೆ ಮತ್ತು ಪೂಜಾರ ಅವರನ್ನು ಕೈಬಿಟ್ಟಿರುವ ಕುರಿತು ಹೇಳಿಕೆ ನೀಡಿರುವ ಚೇತನ್, “ಆಯ್ಕೆ ಸಮಿತಿಯು ಈ ನಿರ್ಧಾರವನ್ನು ಚಿಂತನಶೀಲವಾಗಿ ತೆಗೆದುಕೊಂಡಿದೆ. ನಾವು ಇಬ್ಬರೊಂದಿಗೆ ಮಾತನಾಡಿದ್ದೇವೆ. ಶ್ರೀಲಂಕಾ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಿಗೆ ಇಬ್ಬರನ್ನೂ ಕೈಬಿಡಲಾಗಿದೆ. ಅವರಿಗೆ ಬಾಗಿಲು ಸಂಪೂರ್ಣವಾಗಿ ತೆರೆದಿದೆ. ರಣಜಿ ಟ್ರೋಫಿಯಲ್ಲಿ ಆಡುವ ಮೂಲಕ ಅವರು ಪುನರಾಗಮನ ಮಾಡಬಹುದು ಎಂದಿದ್ದಾರೆ.
ರಹಾನೆ ಮತ್ತು ಪೂಜಾರ ಹೊರತಾಗಿ ಇಶಾಂತ್ ಶರ್ಮಾ ಮತ್ತು ವೃದ್ಧಿಮಾನ್ ಸಹಾ ಕೂಡ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿಲ್ಲ. ಸಾಹಾ ಬದಲಿಗೆ ಕೆಎಸ್ ಭರತ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಕಾನ್ಪುರ ಟೆಸ್ಟ್‌ನಲ್ಲಿ ಸಹಾ ಬದಲಿಗೆ ಭರತ್ ಆಡಿದ್ದರು. ಅಂದಿನಿಂದ ಅವರು ಪಂತ್ ಅವರ ಬ್ಯಾಕಪ್ ಆಗಿ ಕಾಣಿಸಿಕೊಂಡಿದ್ದಾರೆ.
ಸೌರಭ್ ಕುಮಾರ್ ಎಂಟ್ರಿ
ತಂಡದಲ್ಲಿ ಹೊಸ ಮುಖ ಕಾಣಿಸಿಕೊಂಡಿದೆ. ಆಯ್ಕೆಗಾರರು ಸೌರಭ್ ಕುಮಾರ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿದ್ದಾರೆ. ಸೌರಭ್ ಉತ್ತರ ಪ್ರದೇಶದವರಾಗಿದ್ದು, ಎಡಗೈ ಸ್ಪಿನ್ನರ್ ಆಗಿದ್ದಾರೆ. ಅವರು ನೆಟ್ ಬೌಲರ್ ಆಗಿ ಟೀಮ್ ಇಂಡಿಯಾದಲ್ಲಿದ್ದಾರೆ.
ಕೆಎಲ್ ರಾಹುಲ್, ಸುಂದರ್ ತಂಡದಲ್ಲಿಲ್ಲ
ಈ ಸರಣಿಯಲ್ಲಿ ಕೆಎಲ್ ರಾಹುಲ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಆಯ್ಕೆಯಾಗಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೂ ಮುನ್ನ ಇಬ್ಬರೂ ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಇಬ್ಬರೂ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಈ ಸರಣಿಯಲ್ಲಿ ಆಯ್ಕೆಯಾಗಿಲ್ಲ.
ಭಾರತ ತಂಡ ಇಂತಿದೆ:
ಟಿ20 ತಂಡ- ರೋಹಿತ್ ಶರ್ಮಾ, ರಿತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ರವಿ ಬಿಷ್ನೋರ್, ಅವೇಶ್ ಖಾನ್
ಟೆಸ್ಟ್ ತಂಡ: ರೋಹಿತ್ (ನಾಯಕ), ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪಂತ್, ಗಿಲ್, ಕೆಎಸ್ ಭರತ್, ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಶಮಿ, ಸಿರಾಜ್ , ಉಮೇಶ್, ಸೌರಭ್ ಕುಮಾರ್
ಇದನ್ನೂ ಓದಿ:IND vs WI: ಭಾರತಕ್ಕೆ ಡಬಲ್ ಶಾಕ್! ಕೊಹ್ಲಿ ಜೊತೆಗೆ ಪಂತ್ ಕೂಡ ಅಂತಿಮ ಟಿ20ಗೆ ಗೈರು; ಲಂಕಾ ಸರಣಿಗೂ ಅಲಭ್ಯ
Published On - 4:17 pm, Sat, 19 February 22