ಟೀಂ ಇಂಡಿಯಾದ ವೇಗದ ಜಸ್ಪ್ರೀತ್ ಬುಮ್ರಾ (Jasprit Bumrah) ಮತ್ತು ಅವರ ಪತ್ನಿ ಸಂಜನಾ ಗಣೇಶನ್ (Sanjana Ganesan) ದಂಪತಿಗಳಿಗೆ ಗಂಡು ಮಗು ಜನಿಸಿದೆ. ಸ್ವತಃ ಈ ವಿಚಾರವನ್ನು ಬುಮ್ರಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಾಸ್ತವವಾಗಿ ಏಷ್ಯಾಕಪ್‌ನಲ್ಲಿ (Asia Cup 2023) ಟೀಂ ಇಂಡಿಯಾದ ವೇಗದ ಬೌಲಿಂಗ್ ವಿಭಾಗವನ್ನು ನಿರ್ವಹಿಸುತ್ತಿದ್ದ ಯಾರ್ಕರ್ ಕಿಂಗ್ ಖ್ಯಾತಿಯ ಬುಮ್ರಾ ನಿನ್ನೆ ಅಂದರೆ ಸೆಪ್ಟಂಬರ್ 3 ರಂದು ಇದ್ದಕ್ಕಿದ್ದಂತೆ ಟೀಂ ಇಂಡಿಯಾವನ್ನು ತೊರೆದು ಮುಂಬೈಗೆ ವಾಪಸ್ಸಾಗಿದ್ದರು. ತಂಡದ ಟ್ರಂಪ್ ಕಾರ್ಡ್ ಆಗಿರುವ ಬುಮ್ರಾ ಹಠಾತ್ ಆಗಿ ಟೀಂ ಇಂಡಿಯಾವನ್ನು (Team India) ತೊರೆದಿದ್ದರಿಂದ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಆ ಬಳಿಕ ರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಬುಮ್ರಾ ದಂಪತಿಗಳು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಹೀಗಾಗಿ ಬುಮ್ರಾ ತಂಡವನ್ನು ಬಿಟ್ಟು ದೇಶಕ್ಕೆ ಮರಳಿದ್ದಾರೆ ಎಂದು ವರದಿಯಾಗಿತ್ತು.
ತಮ್ಮ ಟ್ವಿಟರ್ ಖಾತೆಯಲ್ಲಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿರುವ ಬುಮ್ರಾ ಇಂದು ಮುಂಜಾನೆ ನಮ್ಮ ಮನೆಗೆ ಪುಟ್ಟ ಅತಿಥಿಯ ಆಗಮನವಾಗಿದೆ. ನಾವೀಗ ಚಂದ್ರನ ಮೇಲೆ ತೇಲುತ್ತಿದ್ದೇವೆ. ಹೊಸ ಸದಸ್ಯರೊಂದಿಗೆ ಬದುಕಿನ ಹೊಸ ಅಧ್ಯಾಯವನ್ನು ಆರಂಭಿಸಲು ಕಾತುರರಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇನ್ನು ಇದೇ ಪೋಸ್ಟ್ನಲ್ಲಿ ತಮ್ಮ ಮಗನ ಹೆಸರನ್ನು ಬಹಿರಂಗಗೊಳಿಸಿರುವ ಬುಮ್ರಾ, ಮಗುವಿಗೆ ‘ಅಂಗದ್ ಜಸ್ಪ್ರೀತ್ ಬುಮ್ರಾ’ ಎಂದು ಹೆಸರಿಟ್ಟಿರುವುದಾಗಿ ಬರೆದುಕೊಂಡಿದ್ದಾರೆ.
Our little family has grown & our hearts are fuller than we could ever imagine! This morning we welcomed our little boy, Angad Jasprit Bumrah into the world. We are over the moon and can’t wait for everything this new chapter of our lives brings with it ❤️ – Jasprit and Sanjana pic.twitter.com/j3RFOSpB8Q
— Jasprit Bumrah (@Jaspritbumrah93) September 4, 2023
ಏತನ್ಮಧ್ಯೆ, ಮೊದಲ ಮಗುವಿನ ಸಂತಸದಲ್ಲಿರುವ ಬುಮ್ರಾ ಬದಲಿಗೆ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾದಲ್ಲಿ ಯಾರು ಸ್ಥಾನ ಪಡೆಯಲ್ಲಿದ್ದಾರೆ ಎಂದು ಕಾದುನೋಡಬೇಕಿದೆ. ನೇಪಾಳ ವಿರುದ್ಧದ ಈ ಪಂದ್ಯಕ್ಕೆ ಮೊಹಮ್ಮದ್ ಶಮಿ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಆದರೆ ಪ್ರಸಿದ್ಧ್ ಕೃಷ್ಣ ಕೂಡ ಈ ಸ್ಥಾನಕ್ಕೆ ಪೈಪೋಟಿ ನೀಡುತ್ತಿದ್ದಾರೆ. ಇನ್ನು ಬುಮ್ರಾ ಮತ್ತೆ ಯಾವಾಗ ತಂಡ ಕೂಡಿಕೊಳ್ಳಲಿದ್ದಾರೆ ಎಂಬುದನ್ನು ನೋಡುವುದಾದರೆ, ಸೆಪ್ಟೆಂಬರ್ 10 ರ ಭಾನುವಾರದಂದು ಪಾಕಿಸ್ತಾನ ವಿರುದ್ಧ ನಡೆಯಲ್ಲಿರುವ ಸೂಪರ್ ಫೋರ್ ಪಂದ್ಯಕ್ಕೂ ಮುನ್ನ ಬುಮ್ರಾ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:52 am, Mon, 4 September 23