Asia Cup 2023: ‘ಕ್ರೀಡೆಯಲ್ಲಿ ರಾಜಕೀಯ ಅಕ್ಷಮ್ಯ’; ಜಯ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ನಜಮ್ ಸೇಥಿ
Asia Cup 2023: ಲಂಕಾದಲ್ಲಿ ನಡೆಯುತ್ತಿರುವ ಪಂದ್ಯಗಳಿಗೆ ಮಳೆ ಅಡ್ಡಿಯನ್ನುಂಟು ಮಾಡುತ್ತಿದೆ. ಇದೀಗ ಈ ಬಗ್ಗೆ ಆಕ್ರೋಶ ಹೊರಹಾಕಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ನಜಮ್ ಸೇಥಿ, ಏಷ್ಯಾಕಪ್ ಹೀಗೆ ಅವ್ಯವಸ್ಥೆಯಿಂದ ನಡೆಯುತ್ತಿರುವುದಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಕಾರಣ ಎಂದಿದ್ದಾರೆ.
ಭಾರತ-ಪಾಕಿಸ್ತಾನ (India vs Pakistan) ಕ್ರಿಕೆಟ್ ಮಂಡಳಿಗಳ ಹಗ್ಗ ಜಗ್ಗಾಟದ ಬಳಿಕ ಹೈಬ್ರಿಡ್ ಮಾದರಿಯಲ್ಲಿ ಆರಂಭವಾಗಿರುವ ಏಷ್ಯಾಕಪ್ಗೆ (Asia Cup 2023) ಅದ್ಯಾಕೋ ಮಳೆರಾಯನ ಕೃಪಕಟಾಕ್ಷ ಸಿಗುತ್ತಿಲ್ಲ. ಹೈಬ್ರಿಡ್ ಮಾದರಿಯ ಪ್ರಕಾರ ಕೇವಲ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯುತ್ತಿದ್ದರೆ, ಇನ್ನುಳಿದ 9 ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯುತ್ತಿವೆ. ಇದರಲ್ಲಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಪಂದ್ಯಗಳು ಪ್ರೇಕ್ಷಕರ ಕೊರತೆಯ ನಡುವೆಯೂ ಯಾವುದೇ ಅಡ್ಡಿ ಇಲ್ಲದೆ ನಡೆಯುತ್ತಿದ್ದರೆ, ಇತ್ತ ಶ್ರೀಲಂಕಾದಲ್ಲಿ ನಡೆಯುತ್ತಿರುವ ಎಲ್ಲಾ ಪಂದ್ಯಗಳಿಗೆ ಮಳೆ ಅಡ್ಡಿಯನ್ನುಂಟು ಮಾಡುತ್ತಿದೆ. ಟೂರ್ನಿಯ ಅತ್ಯಂತ ಪ್ರಮುಖ ಪಂದ್ಯವಾಗಿದ್ದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದ ಕೊಚ್ಚಿ ಹೋಯಿತು. ಇದು ಸಾಲದೆಂಬಂತೆ ಮುಂದಿನ ಕೆಲವು ದಿನಗಳಲ್ಲಿ ಪಲ್ಲೆಕೆಲೆ ಮತ್ತು ಕೊಲಂಬೊದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಈ ಬೆಳವಣಿಗೆ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.
ಇದಕ್ಕೆಲ್ಲ ಜಯ್ ಶಾ ಕಾರಣ
ವಾಸ್ತವವಾಗಿ ಈ ಬಾರಿಯ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಟ್ಟಿರುವುದರಿಂದ ಪಂದ್ಯಾವಳಿಯನ್ನುನ ಹೈಬ್ರಿಡ್ ಮಾದರಿಯಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಲಂಕಾದಲ್ಲಿ ನಡೆಯುತ್ತಿರುವ ಪಂದ್ಯಗಳಿಗೆ ಮಳೆ ಅಡ್ಡಿಯನ್ನುಂಟು ಮಾಡುತ್ತಿದೆ. ಇದೀಗ ಈ ಬಗ್ಗೆ ಆಕ್ರೋಶ ಹೊರಹಾಕಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಅಧ್ಯಕ್ಷ ನಜಮ್ ಸೇಥಿ, ಏಷ್ಯಾಕಪ್ ಹೀಗೆ ಅವ್ಯವಸ್ಥೆಯಿಂದ ನಡೆಯುತ್ತಿರುವುದಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಜಯ್ ಶಾ ಕಾರಣ ಎಂದಿದ್ದಾರೆ.
PCB: ನಜಮ್ ಸೇಥಿ ಅಧಿಕಾರಾವಧಿ ಅಂತ್ಯ; ಪಾಕ್ ಕ್ರಿಕೆಟ್ನ ನೂತನ ಅಧ್ಯಕ್ಷ ಯಾರು ಗೊತ್ತಾ?
ಕ್ರೀಡೆಯಲ್ಲಿ ರಾಜಕೀಯ ಅಕ್ಷಮ್ಯ
ಜಯ್ ಶಾರನ್ನು ಗುರಿಯಾಗಿಸಿಕೊಂಡು ಮಾತನಾಡಿರುವ ನಜಮ್ ಸೇಥಿ, ‘ನಾನು ಪಿಸಿಬಿ ಅಧ್ಯಕ್ಷನಾಗಿದ್ದಾಗ ಹೈಬ್ರಿಡ್ ಪ್ರಸ್ತಾಪವನ್ನು ಒಪ್ಪಿಕೊಂಡ ನಂತರ, ಏಷ್ಯಾಕಪ್‌ನ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಲು ಪ್ರಸ್ತಾಪಿಸಿದೆ. ಆದರೆ ಎಸಿಸಿ ಅಧಿಕಾರಿಗಳು ಇತ್ತ ಗಮನಹರಿಸಲಿಲ್ಲ. ಇದೀಗ ಲೀಗ್ನ ಅತಿದೊಡ್ಡ ಪಂದ್ಯವು ಮಳೆಯಿಂದ ಕೊಚ್ಚಿಹೋಗಿದೆ. ಇದು ತುಂಬಾ ನಿರಾಶಾದಾಯಕವಾಗಿದೆ. ಲಂಕಾದಲ್ಲಿ ಮೊದಲೇ ಮಳೆಯ ಮುನ್ಸೂಚನೆ ಇದ್ದಿದ್ದರಿಂದ ಯುಎಇಯಲ್ಲಿ ಪಂದ್ಯಗಳನ್ನು ಆಯೋಜಿಸುವಂತೆ ನಾನು ಎಸಿಸಿ ಅಧಿಕಾರಿಗಳನ್ನು ಕೇಳಿದ್ದೆ. ಆದರೆ ನನ್ನ ಪ್ರಸ್ತಾಪವನ್ನು ತಳ್ಳಿಹಾಕಿದ್ದ ಎಸಿಸಿ, ಆ ಸಮಯದಲ್ಲಿ ದುಬೈನಲ್ಲಿ ಹವಾಮಾನ ತುಂಬಾ ಬಿಸಿಯಾಗಿರುತ್ತದೆ ಹೀಗಾಗಿ ಅಲ್ಲಿ ಏಷ್ಯಾಕಪ್ ಆಯೋಜಿಸಲು ಸಾಧ್ಯವಿಲ್ಲ ಎಂದಿತ್ತು. ಆದರೆ ಕಳೆದ ವರ್ಷ ಅಲ್ಲಿಯೇ ಏಷ್ಯಾಕಪ್ ನಡೆದಿತ್ತು. ಅಲ್ಲದೆ ಐಪಿಎಲ್ ಕೂಡ ದುಬೈನಲ್ಲಿ ನಡೆದಿತ್ತು. ಆಟದಲ್ಲಿ ರಾಜಕೀಯವನ್ನು ಬೇರೆಸಿದ್ದರಿಂದ ಈಗ ಈ ಫಲಿತಾಂಶ ಸಿಗುತ್ತಿದೆ. ಇದನ್ನು ಕ್ಷಮಿಸಲಾಗದು ಎಂದು ಬರೆದುಕೊಂಡಿದ್ದಾರೆ.
How disappointing! Rain mars the greatest contest in cricket. But this was forecast. As PCB Chair, I urged the ACC to play in UAE but poor excuses were made to accommodate Sri Lanka. Too hot in Dubai, they said. But it was as hot when the Asia Cup was played there last time in…
— Najam Sethi (@najamsethi) September 2, 2023
ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದ ರದ್ದಾದ ಬಳಿಕ ಟ್ವೀಟ್ ಮಾಡಿರುವ ಸೇಥಿ, ಶ್ರೀಲಂಕಾಕ್ಕೆ ಜಂಟಿ ಆತಿಥ್ಯ ನೀಡುವುದರ ಹಿಂದೆ ಜಯ್ ಶಾ ಅವರ ರಾಜಕೀಯವನ್ನು ಹೊರತುಪಡಿಸಿ ಬೇರೇನೂ ಇಲ್ಲ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಕೊಲಂಬೊದ ಹವಾಮಾನ ಮುನ್ಸೂಚನೆಯ ಸ್ಕ್ರೀನ್‌ಶಾಟ್ ಅನ್ನು ಟ್ವೀಟ್ ಮಾಡಿದ್ದು, “ಯಾರಾದರೂ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಬಯಸುವಿರಾ? ಹಾಗಿದ್ದರೆ ಛತ್ರಿಯನ್ನು ಖರೀದಿಸಿ” ಎಂದು ಬರೆದುಕೊಂಡಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:54 pm, Mon, 4 September 23