ಟೀಂ ಇಂಡಿಯಾದ (Team India) ಯುವ ವೇಗದ ಬೌಲರ್ ಮುಖೇಶ್ ಕುಮಾರ್ (Mukesh Kumar) ತಮ್ಮ ಬಾಲ್ಯದ ಗೆಳತಿ ಬಿಹಾರದ ದಿವ್ಯಾ ಸಿಂಗ್ (Divya Singh) ಅವರೊಂದಿಗೆ ವೈವಾಹಿಕ ಜೀವನಕ್ಕೆ (wedding) ಕಾಲಿರಿಸಿದ್ದಾರೆ. ನಿನ್ನೆ ಅಂದರೆ ನವೆಂಬರ್ 28 ರ ಮಂಗಳವಾರದಂದು ಗೋರಖ್‌ಪುರದ ಹೋಟೆಲ್‌ನಲ್ಲಿ ಈ ಪ್ರಣಯ ಪಕ್ಷಿಗಳ ವಿವಾಹ ಅದ್ಧೂರಿಯಾಗಿ ನೆರವೇರಿತು. ಇದೀಗ ನವ ಜೋಡಿಗಳ ಮದುವೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಡಿಸೆಂಬರ್ 4 ರಂದು ಗೋರಖ್‌ಪುರದಲ್ಲಿ ಮುಖೇಶ್-ದಿವ್ಯಾ ವಿವಾಹ ಆರತಕ್ಷತೆ ನಡೆಯಲಿದೆ.
ವಾಸ್ತವವಾಗಿ ಪ್ರಸ್ತುತ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ಮುಖೇಶ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಮೊದಲೆರಡು ಪಂದ್ಯಗಳನ್ನು ಆಡಿದ್ದ ಮುಖೇಶ್ ಆ ಬಳಿಕ ಟೀಂ ಇಂಡಿಯಾದಿಂದ ರಜೆ ಪಡೆದಿದ್ದರು. ಮೂರನೇ ಟಿ20 ಪಂದ್ಯ ಆರಂಭವಾಗುವ ಮೊದಲು ಮುಖೇಶ್ ಅಲಭ್ಯತೆಯ ಬಗ್ಗೆ ಮಾಹಿತಿ ನೀಡಿದ್ದ ನಾಯಕ ಸೂರ್ಯ, ಮುಖೇಶ್ ಇಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅವರು ತಂಡದಿಂದ ಹೊರನಡೆದಿದ್ದಾರೆ ಎಂದಿದ್ದರು.
Mukesh Kumar, Caught & Bowled ft. Divya Singh 🫶
Welcome to the DC Family, Divya ♥️ pic.twitter.com/E8Ue3Rglpd
— Delhi Capitals (@DelhiCapitals) November 29, 2023
ಎರಡನೇ ಭಾರತೀಯ: ಮುಖೇಶ್ ಕುಮಾರ್ ವಿಶೇಷ ದಾಖಲೆ
ಮೂರನೇ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದ ಮುಖೇಶ್ ಕುಮಾರ್ ಇದೀಗ, ರಾಯಪುರದಲ್ಲಿ ನಡೆಯಲಿರುವ ನಾಲ್ಕನೇ ಟಿ20ಪಂದ್ಯಕ್ಕೂ ಮುನ್ನ ಶುಕ್ರವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿಯನ್ನು ಬಿಸಿಸಿಐ ಬಹಿರಂಗಪಡಿಸಿದೆ.
ಇನ್ನು ಮುಖೇಶ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ವರ್ಷದ ಹಿಂದೆ ಟೀಂ ಇಂಡಿಯಾವನ್ನು ಸೇರಿಕೊಂಡ ಮುಖೇಶ್ ವರ್ಷದೊಳಗೆ ತಂಡದ ಪರವಾಗಿ ಎಲ್ಲಾ ಮೂರು ಸ್ವರೂಪಗಳಲ್ಲಿ ಪದಾರ್ಪಣೆ ಮಾಡಿರುವುದು ಗಮನಾರ್ಹ. ಈ ವರ್ಷದ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಏಕದಿನ, ಟೆಸ್ಟ್ ಮತ್ತು ಟಿ20 ಸ್ವರೂಪಗಳಲ್ಲಿ ಭಾರತದ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮುಖೇಶ್ ಪಾದಾರ್ಪಣೆ ಮಾಡಿದ್ದರು.
ಮುಖೇಶ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದು, 2022 ರ ಐಪಿಎಲ್ ಹರಾಜಿನಲ್ಲಿ ಮುಖೇಶ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 5 ಕೋಟಿಗೆ ಖರೀದಿಸಿತು. ಮುಖೇಶ್ ಕುಮಾರ್ ಇದುವರೆಗೆ ಭಾರತದ ಪರ ಒಂದು ಟೆಸ್ಟ್, ಮೂರು ಏಕದಿನ ಮತ್ತು ಏಳು ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಟೆಸ್ಟ್ನಲ್ಲಿ ಎರಡು ವಿಕೆಟ್, ಏಕದಿನ ಮತ್ತು ಟಿ20 ಮಾದರಿಯಲ್ಲಿ ತಲಾ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.