ವಿದೇಶಿ ನೆಲಗಳಲ್ಲಿ ಭಾರತ ಟೆಸ್ಟ್ ಕ್ರಿಕೆಟ್​ಗೆ ಹೊಸ ಭಾಷ್ಯ ಬರೆದ ರಿಷಭ್ ಪಂತ್​ಗೆ ಇಂದು 26ನೇ ಜನ್ಮ ದಿನ

|

Updated on: Oct 04, 2023 | 11:27 AM

Happy Birthday Rishabh Pant: ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಇಂದು ತಮ್ಮ 26ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ಮುನ್ನ ದಿನ ಅಂದರೆ ಮಂಗಳವಾರದಂದು ಬದರಿನಾಥ್ ಮತ್ತು ಕೇದಾರನಾಥ ಧಾಮಕ್ಕೆ ರಿಷಭ್ ಪಂತ್ ಭೇಟಿ ನೀಡಿದ್ದರು.

ವಿದೇಶಿ ನೆಲಗಳಲ್ಲಿ ಭಾರತ ಟೆಸ್ಟ್ ಕ್ರಿಕೆಟ್​ಗೆ ಹೊಸ ಭಾಷ್ಯ ಬರೆದ ರಿಷಭ್ ಪಂತ್​ಗೆ ಇಂದು 26ನೇ ಜನ್ಮ ದಿನ
ರಿಷಭ್ ಪಂತ್ ಜನ್ಮ ದಿನ
Follow us on

ಭಾರತ ಕ್ರಿಕೆಟ್ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ಇಂದು ತಮ್ಮ 26ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ಹುಟ್ಟುಹಬ್ಬದ ಮುನ್ನ ದಿನ ಅಂದರೆ ಮಂಗಳವಾರದಂದು ಬದರಿನಾಥ್ ಮತ್ತು ಕೇದಾರನಾಥ ಧಾಮಕ್ಕೆ ರಿಷಭ್ ಪಂತ್ ಭೇಟಿ ನೀಡಿದ್ದರು. ಕಳೆದ ಡಿಸೆಂಬರ್​ನಲ್ಲಿ ಕಾರು ಅಪಘಾತಕ್ಕೀಡಾಗಿದ್ದ ಪಂತ್, ಕಾಲಿಗೆ ಬ್ಯಾಂಡೇಜ್, ಪ್ಲಾಸ್ಟರ್ ಹಾಕಿಕೊಂಡು ನಿಧಾನವಾಗಿ ನಡೆಯುತ್ತಿದ್ದರು. ಆದರೆ ಈಗ ಸಂಪೂರ್ಣ ಫಿಟ್ ಆಗಿ ಕಾಣಿಸಿಕೊಂಡಿರುವ ಪಂತ್ ಮೆಟ್ಟಿಲುಗಳ ಮೇಲೆ ಆರಾಮವಾಗಿ ನಡೆಯುತ್ತಿರುವುದು ಕೂಡ ಕಂಡು ಬಂದಿದೆ. ಹೀಗಾಗಿ ಬಹಳ ದಿನಗಳಿಂದ ಟೀಂ ಇಂಡಿಯಾದಿಂದ (Team India) ದೂರ ಉಳಿದಿರುವ ಪಂತ್ ತಂಡವನ್ನು ಸೇರಿಕೊಳ್ಳುವ ದಿನ ದೂರವಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನು ವೃತ್ತಿ ಜೀವನಕ್ಕೆ ಬರುವುದಾದರೆ ಪಂತ್, ಕೇವಲ 26 ವರ್ಷ ವಯಸ್ಸಿನಲ್ಲೇ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವು ಏರಿಳಿತಗಳನ್ನು ಅನುಭವಿಸಿದ್ದಾರೆ. ಆಕ್ರಮಣಕಾರಿ ಆಟದ ಶೈಲಿಗೆ ಹೆಸರುವಾಸಿಯಾಗಿರುವ ಪಂತ್, ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಿಂದಲೂ ಎಲ್ಲಾ ಮೂರು ಮಾದರಿಯಲ್ಲೂ ಟೀಂ ಇಂಡಿಯಾಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ.

Rishabh Pant: 140 ಕಿ.ಮೀ ವೇಗದ ಬೆಂಕಿಯುಂಡೆಗಳ ಎದುರು ಬ್ಯಾಟ್ ಬೀಸಿದ ರಿಷಭ್ ಪಂತ್..!

ವಿದೇಶಿ ನೆಲಗಳಲ್ಲಿ ಆಕ್ರಮಣಕಾರಿ ಬ್ಯಾಟಿಂಗ್

ಒಂದು ಹಂತದಲ್ಲಿ ವಿದೇಶಿ ನೆಲದಲ್ಲಿ ರನ್ ಕಲೆಹಾಕಲು ಟೀಂ ಇಂಡಿಯಾದ ಇತರರ ಆಟಗಾರರು ಹೆಣಗಾಡುತ್ತಿದ್ದ ಕಾಲದಲ್ಲಿ ತಮ್ಮ ಎಂದಿನ ಅಬ್ಬರದ ಬ್ಯಾಟಿಂಗ್ ಮೂಲಕ ಪಂತ್ ಎಲ್ಲರ ಗಮನ ಸೆಳೆದಿದ್ದರು. ಇದಕ್ಕೆ 2020-21ರಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸವೇ ಸಾಕ್ಷಿಯಾಗಿದೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಕಷ್ಟದ ಸಮಯದಲ್ಲಿ ಟೀಂ ಇಂಡಿಯಾದ ಇನ್ನಿಂಗ್ಸ್ ನಿಭಾಯಿಸಿದ್ದ ಪಂತ್ ಆಸ್ಟ್ರೇಲಿಯಾದಲ್ಲಿ ಭಾರತದ ಐತಿಹಾಸಿಕ ಟೆಸ್ಟ್ ಸರಣಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಅದರಲ್ಲೂ ಗಬ್ಬಾದಲ್ಲಿ ನಡೆದ ಅಂತಿಮ ಟೆಸ್ಟ್‌ನಲ್ಲಿ ಪಂದ್ಯದಲ್ಲಿ ಅವರು ಆಡಿದ ಇನ್ನಿಂಗ್ಸ್ ಎಂದಿಗೂ ಅಜರಾಮರ.

ಅಂಡರ್ 19 ತಂಡದಲ್ಲಿ ಆಡಿದ್ದ ಪಂತ್

ಏಕದಿನ ಮತ್ತು ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಂತ್ ತಮ್ಮ ಆಕ್ರಮಣಕಾರಿ ಹೊಡೆತಗಳ ಮೂಲಕ ಎಲ್ಲರ ಗಮನ ಸೆಳೆದಿದ್ದರೆ, ವೈಟ್-ಬಾಲ್ ಕ್ರಿಕೆಟ್‌ನಲ್ಲಿಯೂ ಭಾರತಕ್ಕೆ ಮ್ಯಾಚ್-ವಿನ್ನರ್ ಆಗಿದ್ದಾರೆ. ಅಂಡರ್-19 ತಂಡವನ್ನು ಪ್ರತಿನಿಧಿಸುವ ಮೂಲಕ ಭಾರತೀಯ ಕ್ರಿಕೆಟ್‌ ಕಾಲಿರಿಸಿದ ಪಂತ್, 2016 ರ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆಗಿದ್ದ ಅಂಡರ್-19 ತಂಡದ ಭಾಗವಾಗಿದ್ದರು. ಅಂದಿನಿಂದ ಹಂತ ಹಂತವಾಗಿ ಮೇಲಿರಿದ ಪಂತ್, ಪ್ರಸ್ತುತ ಟೀಂ ಇಂಡಿಯಾದ ಪ್ರಮುಖ ವಿಕೆಟ್‌ಕೀಪರ್ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ