ಭಾರತ ಮಹಿಳಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ಮತ್ತು ಏಕೈಕ ಟೆಸ್ಟ್ ಪಂದ್ಯದಲ್ಲಿ ಬಲಿಷ್ಠ ಪ್ರದರ್ಶನ ನೀಡಿತ್ತು. ಇದರೊಂದಿಗೆ ಎರಡೂ ಸರಣಿಗಳನ್ನು ಕ್ಲೀನ್ಸ್ವೀಪ್ ಮಾಡಿತ್ತು. ಆದರೆ ಮೊದಲ ಟಿ20ಯಲ್ಲಿ ಪ್ರವಾಸಿ ತಂಡದ ಎದುರು ಸೋತಿದ್ದು, ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಸದ್ಯ ಭಾರತ ತಂಡ ಸರಣಿಯಲ್ಲಿ 0-1 ಅಂತರದಲ್ಲಿ ಹಿನ್ನಡೆಯಲ್ಲಿದ್ದು, ಸರಣಿಯಲ್ಲಿ ಸಮಬಲ ಸಾಧಿಸಬೇಕಾದರೆ ಮಂಗಳವಾರ ನಡೆಯಲಿರುವ ಮೂರನೇ ಟಿ20 ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಮೊದಲೆರಡು ಪಂದ್ಯಗಳಂತೆ ಮೂರನೇ ಟಿ20 ಪಂದ್ಯಕ್ಕೂ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಆತಿಥ್ಯವಹಿಸಲಿದೆ.
ಆದಾಗ್ಯೂ, ಭಾರತವು ಸರಣಿಯನ್ನು ಸಮಬಲಗೊಳಿಸಬೇಕಾದರೆ, ತಂಡದ ಬೌಲರ್‌ಗಳು ತಮ್ಮ ಹಳೆಯ ಲಯಕ್ಕೆ ಮರಳಬೇಕಾಗಿದೆ. ಮೊದಲ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗೆ 189 ರನ್ ಕಲೆಹಾಕಿದ್ದ ದಕ್ಷಿಣ ಆಫ್ರಿಕಾ ತಂಡ 12 ರನ್‌ಗಳಿಂದ ಪಂದ್ಯವನ್ನು ಗೆದ್ದಿತು. ಎರಡನೇ ಪಂದ್ಯದಲ್ಲಿ ಮಳೆಯಿಂದಾಗಿ ಭಾರತಕ್ಕೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ, ಆದರೆ ಈ ಪಂದ್ಯದಲ್ಲೂ ಬೌಲರ್‌ಗಳು ದುಬಾರಿಯಾಗಿದ್ದು, ಆಫ್ರಿಕಾ ತಂಡ 177 ರನ್ ಕಲೆಹಾಕಿತ್ತು. ಮಂಗಳವಾರವೂ ಶೇ.30ರಿಂದ 40ರಷ್ಟು ಮಳೆಯಾಗುವ ಸಾಧ್ಯತೆ ಇರುವುದರಿಂದ ಮೂರನೇ ಟಿ20 ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆಗಳಿವೆ. ಎರಡೂ ಪಂದ್ಯಗಳಲ್ಲಿ ತಲಾ ಎರಡು ವಿಕೆಟ್ ಪಡೆದ ಪೂಜಾ ವಸ್ತ್ರಾಕರ್ ಮತ್ತು ಸ್ಪಿನ್ನರ್ ದೀಪ್ತಿ ಶರ್ಮಾ ಹೊರತುಪಡಿಸಿ, ಭಾರತದ ಬಹುತೇಕ ಬೌಲರ್‌ಗಳು ಪ್ರಭಾವ ಬೀರಲು ವಿಫಲರಾಗಿದ್ದಾರೆ.
ಮೊದಲ ಪಂದ್ಯದಲ್ಲಿ ರೇಣುಕಾ ಸಿಂಗ್ ದುಬಾರಿಯಾಗಿದ್ದರಿಂದ ಎರಡನೇ ಪಂದ್ಯದಲ್ಲಿ ಸಜೀವನ್ ಸಜ್ನಾಗೆ ಅವಕಾಶ ಸಿಕ್ಕಿತು. ಆದರೆ ಇದು ಕೂಡ ತಂಡಕ್ಕೆ ಪ್ರಯೋಜನವಾಗಲಿಲ್ಲ. ಭಾನುವಾರ ಶ್ರೇಯಾಂಕಾ ಪಾಟೀಲ್ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು ಆದರೆ ಈ ಇಬ್ಬರೂ ಬೌಲರ್‌ಗಳು ಸಹ ಹೆಚ್ಚು ರನ್ ನೀಡಿ ಕೊಂಚ ದುಬಾರಿಯಾದರು. ಹೀಗಾಗಿ ನಾಳೆಯ ಪಂದ್ಯಕ್ಕೆ ತಂಡ ಹೊಸ ಯೋಜನೆಯೊಂದಿಗೆ ಕಣಕ್ಕಿಳಿಯಬೇಕಿದೆ.
ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ಉತ್ತಮ ಪ್ರದರ್ಶನ ನೀಡುತ್ತಿದೆ. ಮೊದಲ ಟಿ20 ಪಂದ್ಯದಲ್ಲಿ ಜೆಮಿಮಾ ರಾಡ್ರಿಗಸ್ (ಔಟಾಗದೆ 53), ಸ್ಮೃತಿ ಮಂಧಾನ (46), ಹರ್ಮನ್‌ಪ್ರೀತ್ (35), ಶೆಫಾಲಿ ವರ್ಮಾ (18) ಮತ್ತು ದಯಾಲನ್ ಹೇಮಲತಾ (14) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಯ ಅಗತ್ಯವಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ