
ಗುವಾಹಟಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾ ಸೋತಿದೆ. ಕೊಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 30 ರನ್ ಗಳ ಸೋಲನುಭವಿಸಿದ್ದ ಟೀಮ್ ಇಂಡಿಯಾ ಈ ಬಾರಿ ಪರಾಜಯಗೊಂಡಿದ್ದು ಬರೋಬ್ಬರಿ 408 ರನ್ ಗಳ ಅಂತರದಿಂದ.
ಅಂದರೆ 93 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಭಾರತ ತಂಡವು ಇದೇ ಮೊದಲ ಬಾರಿಗೆ 400+ ರನ್ ಗಳ ಅಂತರದಿಂದ ಸೋಲನುಭವಿಸಿದೆ. ಈ ಮೂಲಕ ಅತ್ಯಂತ ಹೀನಾಯ ಸೋಲನ್ನು ತನ್ನದಾಗಿಸಿಕೊಂಡಿದೆ.
ಇದಕ್ಕೂ ಮುನ್ನ ಟೀಮ್ ಇಂಡಿಯಾ ಅತ್ಯಧಿಕ ರನ್ ಗಳ ಅಂತರದಿಂದ ಸೋತಿದ್ದು ಆಸ್ಟ್ರೇಲಿಯಾ ವಿರುದ್ಧ. 2004 ರಲ್ಲಿ ನಾಗಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಟೀಮ್ ಇಂಡಿಯಾಗೆ 543 ರನ್ ಗಳ ಗುರಿ ನೀಡಿದ್ದರು.
ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 200 ರನ್ ಗಳಿಗೆ ಆಲೌಟ್ ಆಗಿ ಬರೋಬ್ಬರಿ 342 ರನ್ ಗಳಿಂದ ಸೋಲೊಪ್ಪಿಕೊಂಡಿದ್ದರು.
ಇದೀಗ ಸೌತ್ ಆಫ್ರಿಕಾ ತಂಡವು ಟೀಮ್ ಇಂಡಿಯಾವನ್ನು ಬರೋಬ್ಬರಿ 408 ರನ್ ಗಳ ಅಂತರದಿಂದ ಬಗ್ಗು ಬಡಿದಿದೆ. ಈ ಮೂಲಕ ಭಾರತ ತಂಡಕ್ಕೆ ಟೆಸ್ಟ್ ಇತಿಹಾಸದಲ್ಲೇ ಹೀನಾಯ ಸೋಲುಣಿಸಿದ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ.
ಅಷ್ಟೇ ಅಲ್ಲದೆ 25 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿಯೂ ಸೌತ್ ಆಫ್ರಿಕಾ ತಂಡ ಯಶಸ್ವಿಯಾಗಿದೆ. ಅದು ಕೂಡ 2-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಮೂಲಕ ಎಂಬುದು ವಿಶೇಷ.
ಒಟ್ಟಿನಲ್ಲಿ ಟೆಸ್ಟ್ ಇತಿಹಾಸದಲ್ಲಿ ತವರಿನ ಹುಲಿಗಳೆಂದೇ ಗುರುತಿಸಿಕೊಂಡಿದ್ದ ಟೀಮ್ ಇಂಡಿಯಾ ಇದೀಗ ಅತ್ಯಂತ ಹೀನಾಯ ಸೋಲಿನೊಂದಿಗೆ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್, ರಯಾನ್ ರಿಕೆಲ್ಟನ್, ವಿಯಾನ್ ಮುಲ್ಡರ್, ಟೆಂಬಾ ಬವುಮಾ (ನಾಯಕ), ಟೋನಿ ಡಿ ಝೋರ್ಝಿ, ಟ್ರಿಸ್ಟನ್ ಸ್ಟಬ್ಸ್, ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್, ಸೆನುರಾನ್ ಮುತ್ತುಸಾಮಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್.
ಇದನ್ನೂ ಓದಿ: IND vs SA: ಟೀಮ್ ಇಂಡಿಯಾದಿಂದ 8 ಆಟಗಾರರು ಔಟ್
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್, ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ ಜುರೆಲ್, ರಿಷಭ್ ಪಂತ್ (ನಾಯಕ), ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.