ಭಾರತ ತಂಡದ ಮಾಜಿ ಆಟಗಾರ ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ (DK Gaekwad) ವಿಧಿವಶರಾಗಿದ್ದಾರೆ. 95 ವರ್ಷದ ಡಿಕೆ ಗಾಯಕ್ವಾಡ್ ಅವರು ಶನಿವಾರ ಮಂಗಳವಾರ ಮುಂಜಾನೆ ಕೊನೆಯುಸಿರೆಳೆದಿದ್ದು, ಪುತ್ರ ಟೀಮ್ ಇಂಡಿಯಾದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರನ್ನು ಅಗಲಿದ್ದಾರೆ. 1952 ರಲ್ಲಿ ಭಾರತದ ಪರ ಪಾದರ್ಪಣೆ ಮಾಡಿದ್ದ ದತ್ತಾಜಿ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 11 ಟೆಸ್ಟ್ ಪಂದ್ಯಗಳನ್ನಾಡಿದ್ದರು.
9 ವರ್ಷಗಳ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 11 ಪಂದ್ಯಗಳಿಂದ 18.42 ಸರಾಸರಿಯಲ್ಲಿ 350 ರನ್ ಕಲೆಹಾಕಿದ್ದರು. ಈ ವೇಳೆ ಒಂದು ಅರ್ಧಶತಕ ಬಾರಿಸಿ ಕೂಡ ಮಿಂಚಿದ್ದರು. ಇನ್ನು ದೇಶೀಯ ಕ್ರಿಕೆಟ್ನಲ್ಲಿ ಬರೋಡಾ ತಂಡವನ್ನು ಪ್ರತಿನಿಧಿಸಿದ್ದ ಡಿಕೆ ಗಾಯಕ್ವಾಡ್ 110 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ.
ಈ ವೇಳೆ ಒಟ್ಟು 5,788 ರನ್ಗಳನ್ನು ಕಲೆಹಾಕಿದ್ದಾರೆ. ವಿಶೇಷ ಎಂದರೆ ಈ ಅವರಧಿಯಲ್ಲಿ ದತ್ತಾಜಿ ಬ್ಯಾಟ್ನಿಂದ 17 ಶತಕಗಳು ಮತ್ತು 23 ಅರ್ಧಶತಕಗಳು ಮೂಡಿಬಂದಿದ್ದವು.
ಹಾಗೆಯೇ ಆಲ್ರೌಂಡರ್ ಆಟದೊಂದಿಗೆ ದೇಶೀಯ ಅಂಗಳದಲ್ಲಿ ಮಿಂಚಿದ್ದ ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ ಅವರ ಲೆಗ್ ಬ್ರೇಕ್ ಬೌಲಿಂಗ್ನೊಂದಿಗೆ 25 ವಿಕೆಟ್ಗಳನ್ನೂ ಕೂಡ ಕಬಳಿಸಿದ್ದರು.
ಇನ್ನು ನಿವೃತ್ತಿಯ ನಂತರ, ಅವರು ಬರೋಡಾ ಕ್ರಿಕೆಟ್ ಅಸೋಸಿಯೇಷನ್ ಪರ ಉದಯೋನ್ಮುಖ ಪ್ರತಿಭೆಗಳನ್ನು ಗುರುತಿಸುವಲ್ಲಿ ಕಾರ್ಯ ನಿರ್ವಹಿಸಿದ್ದರು.
1953 ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ ಭಾರತೀಯ ತಂಡದ ಭಾಗವಾಗಿದ್ದ ಅವರು ಅಂದಿನ ತಂಡದ ಕೊನೆಯ ಕೊಂಡಿಯಾಗಿದ್ದರು. ಇದೀಗ ತಮ್ಮ 95ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಇದನ್ನೂ ಓದಿ: James Anderson: ಜಿಮ್ಮಿ ಮಾರಕ ದಾಳಿಗೆ ಶೇನ್ ವಾರ್ನ್ ವಿಶ್ವ ದಾಖಲೆ ಶೇಕಿಂಗ್..!
ದತ್ತಾಜಿರಾವ್ ಕೃಷ್ಣರಾವ್ ಗಾಯಕ್ವಾಡ್ ಅವರ ಪುತ್ರ ಅಂಶುಮಾನ್ ಗಾಯಕ್ವಾಡ್ ಕೂಡ ಟೀಮ್ ಇಂಡಿಯಾದ ಮಾಜಿ ಆಟಗಾರ. ಭಾರತದ ಪರ 40 ಟೆಸ್ಟ್ ಪಂದ್ಯಗಳನ್ನಾಡಿದ್ದ ಗಾಯಕ್ವಾಡ್ 1985 ರನ್ ಕಲೆಹಾಕಿದ್ದಾರೆ. ಹಾಗೆಯೇ 15 ಏಕದಿನ ಪಂದ್ಯಗಳಿಂದ 269 ರನ್ಗಳಿಸಿದ್ದರು. ಇದಾದ ಬಳಿಕ ಅಂಶುಮಾನ್ ಗಾಯಕ್ವಾಡ್ ಟೀಮ್ ಇಂಡಿಯಾದ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದರು.