
ಲಾರ್ಡ್ಸ್‌ನಲ್ಲಿ (Lords Test) ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ಸುಲಭವಾಗಿ ಗೆಲ್ಲುತ್ತದೆ ಎಂದು ತೋರುತ್ತಿತ್ತು. ಏಕೆಂದರೆ ಭಾರತದ ಗೆಲುವಿಗೆ ಬೇಕಾಗಿದಿದ್ದು ಕೇವಲ 193 ರನ್ ಮಾತ್ರ. ಆದರೆ ಈ ಸುಲಭ ಗುರಿಯನ್ನು ಭಾರತಕ್ಕೆ ಬೆನ್ನಟ್ಟಲು ಸಾಧ್ಯವಿಲ್ಲ ಎಂದು ತೋರುತ್ತಿದೆ. ಏಕೆಂದರೆ ತಂಡ 100 ರನ್‌ಗಳ ಗಡಿ ದಾಟುವುದಕ್ಕೂ ಮುನ್ನವೇ ಪ್ರಮುಖ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಇದರಿಂದಾಗಿ, ಇಂಗ್ಲೆಂಡ್ ಈ ಪಂದ್ಯವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ನಾಲ್ಕನೇ ದಿನದ ಆಟ ಮುಗಿದಾಗ, ಭಾರತ 4 ವಿಕೆಟ್‌ಗಳ ನಷ್ಟಕ್ಕೆ 58 ರನ್‌ಗಳನ್ನು ಗಳಿಸಿತ್ತು. ಆದರೆ ಐದನೇ ದಿನದಾಟ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ತಂಡದ ಮೊತ್ತ 86 ರನ್ ಆಗುವಷ್ಟರಲ್ಲಿ ಮತ್ತೆ 3 ಪ್ರಮುಖ ವಿಕೆಟ್ಗಳು ಪತನವಾದವು. ಅದರಲ್ಲೂ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದೇ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದ ವಾಷಿಂಗ್ಟನ್ ಸುಂದರ್ (Washington Sundar), ಖಾತೆ ತೆರೆಯದೆ ಔಟಾಗಿದ್ದು, ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ವಾಸ್ತವವಾಗಿ ನಾಲ್ಕನೇ ದಿನದ ಆಟ ಮುಗಿದ ನಂತರ ವಾಷಿಂಗ್ಟನ್ ಸುಂದರ್ ಸ್ಕೈ ಸ್ಪೋರ್ಟ್ಸ್ ಜೊತೆ ಮಾತನಾಡುತ್ತ, ‘ನಾಳೆ ಭಾರತ ಖಂಡಿತವಾಗಿಯೂ ಗೆಲ್ಲುತ್ತದೆ ಎಂದು ಹೇಳಿದ್ದರು. ಆದರೆ ಅಂತಹ ದಿಟ್ಟ ಹೇಳಿಕೆ ನೀಡಿದ್ದ ವಾಷಿಂಗ್ಟನ್ ಸುಂದರ್, ಖಾತೆ ತೆರೆಯವುದಕ್ಕೂ ಮುನ್ನವೇ ಟೆಂಟ್‌ಗೆ ಮರಳಿದರು. ರಿಷಭ್ ಪಂತ್ ಮತ್ತು ಕೆಎಲ್ ರಾಹುಲ್ ಅವರ ವಿಕೆಟ್‌ಗಳ ಪತನದ ನಂತರ ಬ್ಯಾಟಿಂಗ್ಗೆ ಬಂದಿದ್ದ ಸುಂದರ್ ಅವರ ಮೇಲೆ ನಿರೀಕ್ಷೆಗಳಿದ್ದವು. ಆದರೆ ಅವರು ನಿರೀಕ್ಷೆಗಳನ್ನು ನಿರಾಸೆಗೊಳಿಸಿದರು. ಇದರಿಂದಾಗಿ, ಭಾರತ ಸೋಲುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ವಾಷಿಂಗ್ಟನ್ ಸುಂದರ್ 4 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದರು.
ವಾಷಿಂಗ್ಟನ್ ಸುಂದರ್ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ನಲ್ಲಿ ಖಾತೆ ತೆರೆಯದೆ ಔಟಾಗಿರಬಹುದು. ಆದರೆ ಬೌಲಿಂಗ್‌ನಲ್ಲಿ ನಿಜಕ್ಕೂ ಒಳ್ಳೆಯ ಪ್ರದರ್ಶನ ನೀಡಿದರು. ಇಂಗ್ಲೆಂಡ್ ತಂಡದ ಪ್ರಮುಖ 4 ವಿಕೆಟ್ ಉರುಳಿಸುವ ಮೂಲಕ ಆಂಗ್ಲರನ್ನು 200 ರನ್‌ಗಳ ಗಡಿ ದಾಟದಂತೆ ನೋಡಿಕೊಂಡರು. ಮೊದಲ ಇನ್ನಿಂಗ್ಸ್ನಲ್ಲಿ ಯಾವುದೇ ವಿಕೆಟ್ ಪಡೆಯದ ಸುಂದರ್, ಬ್ಯಾಟಿಂಗ್ನಲ್ಲಿ 23 ರನ್‌ಗಳ ಕಾಣಿಕೆ ನೀಡಿದ್ದರು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ್ದ ಅವರಿಗೆ ಬ್ಯಾಟಿಂಗ್ನಲ್ಲಿ ಯಾವುದೇ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ.