ಈ ವರ್ಷ ಭಾರತ ತಂಡವು ಹಲವು ಟೆಸ್ಟ್ ಸರಣಿಗಳನ್ನು ಗೆದ್ದುಕೊಂಡಿದೆ. ಅದರಲ್ಲೂ ಬಲಿಷ್ಠ ಆಸ್ಟ್ರೇಲಿಯಾವನ್ನು ಹಾಗೂ ಇಂಗ್ಲೆಂಡ್ ತಂಡವನ್ನು ಅವರದ್ದೇ ನೆಲದಲ್ಲಿ ಟೀಮ್ ಇಂಡಿಯಾ ಬಗ್ಗು ಬಡಿದಿದೆ. ಆದರೆ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದವರು ಟೀಮ್ ಇಂಡಿಯಾ ಬೌಲರುಗಳು ಎಂಬುದು ವಿಶೇಷ. ಇನ್ನು ಬ್ಯಾಟಿಂಗ್ ಮೂಲಕ ಹೆಚ್ಚಿನ ಕೊಡುಗೆ ನೀಡಿದ್ದು ಆರಂಭಿಕ ಆಟಗಾರರು. ಇದರ ಹೊರತಾಗಿ ಟೀಮ್ ಇಂಡಿಯಾ ಮಧ್ಯಮ ಕ್ರಮಾಂಕದಿಂದ ಸ್ಥಿರ ಪ್ರದರ್ಶನ ಮೂಡಿಬಂದಿರಲಿಲ್ಲ. ಈ ಕಳಪೆ ಪ್ರದರ್ಶನ ಇದೀಗ ದಕ್ಷಿಣ ಆಫ್ರಿಕಾದಲ್ಲೂ ಮುಂದುವರೆದಿದೆ.
ದಕ್ಷಿಣ ಅಫ್ರಿಕಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾಗೆ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭ ಒದಗಿಸಿದ್ದರು. ಆದರೆ ಈ ಅತ್ಯುತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿಸುವಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ವಿಫಲರಾಗಿದ್ದರು. ಅದರಲ್ಲೂ ಚೇತೇಶ್ವರ ಪೂಜಾರ ತಮ್ಮ ಕಳಪೆ ಫಾರ್ಮ್ನ್ನು ದಕ್ಷಿಣ ಆಫ್ರಿಕಾದಲ್ಲೂ ಮುಂದುವರೆಸಿದ್ದಾರೆ. ಇನ್ನೊಂದೆಡೆ ಅಜಿಂಕ್ಯ ರಹಾನೆ ರಕ್ಷಣಾತ್ಮಕ ಆಟದೊಂದಿಗೆ ಗಮನ ಸೆಳೆದರೂ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ.
ಈಗಾಗಲೇ ಕಳಪೆ ಫಾರ್ಮ್ ಕಾರಣ ಅಜಿಂಕ್ಯ ರಹಾನೆ ಅವರನ್ನು ಟೀಮ್ ಇಂಡಿಯಾ ಟೆಸ್ಟ್ ತಂಡದ ಉಪನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿದೆ. ಏಕೆಂದರೆ ಈ ವರ್ಷ ರಹಾನೆ ಅವರ ಟೆಸ್ಟ್ ಇನಿಂಗ್ಸ್ ಸರಾಸರಿ 20ಕ್ಕಿಂತ ಕಡಿಮೆ ಇದೆ. ಇದಾಗ್ಯೂ ಅವರನ್ನು ಉಪನಾಯಕನ ಕಾರಣದಿಂದ ತಂಡದಲ್ಲಿ ಇರಿಸಲಾಗಿತ್ತು. ಈ ವರ್ಷ 23 ಇನಿಂಗ್ಸ್ ಆಡಿರುವ ರಹಾನೆ ಕಲೆಹಾಕಿದ್ದು ಕೇವಲ 479 ರನ್ ಮಾತ್ರ.
ಇನ್ನೊಂದೆಡೆ ಚೇತೇಶ್ವರ ಪೂಜಾರ ಫಾರ್ಮ್‌ನಲ್ಲಿ ಕುಸಿತ ಕಂಡಿರುವುದು ಆತಂಕ ಮೂಡಿಸಿದೆ. ಕಳೆದ ಎರಡು ವರ್ಷಗಳಲ್ಲಿ, 26 ಇನಿಂಗ್ಸ್ ಆಡಿರುವ ಪೂಜಾರ ಯಾವುದೇ ಶತಕಗಳಿಸಿಲ್ಲ. ಹಾಗೆಯೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಕಳೆದೆರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿದ್ದಾರೆ. ಅದರಲ್ಲೂ ಈ ವರ್ಷ 19 ಇನಿಂಗ್ಸ್ಗಳಿಂದ ವಿರಾಟ್ ಕೊಹ್ಲಿ ಕಲೆಹಾಕಿದ್ದು ಕೇವಲ 536 ರನ್ ಮಾತ್ರ.
ಇನ್ನು ಆಲ್ರೌಂಡರ್ಗಳಾಗಿ ತಂಡದಲ್ಲಿರುವ ಅಶ್ವಿನ್ ದಕ್ಷಿಣ ಆಫ್ರಿಕಾ ವಿರುದ್ದದ ಮೊದಲ ಪಂದ್ಯದಲ್ಲಿ ಎರಡು ಇನಿಂಗ್ಸ್ಗಳಿಂದ 18 ರನ್ ಕಲೆಹಾಕಿದರೆ, ಶಾರ್ದೂಲ್ ಕೇವಲ 14 ರನ್ ಮಾತ್ರಗಳಿಸಿದ್ದರು. ಅಷ್ಟೇ ಅಲ್ಲದೆ ಈ ವರ್ಷ ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದ ಯಾವುದೇ ಬ್ಯಾಟರ್ ಟೆಸ್ಟ್ನಲ್ಲಿ 800 ರನ್ ಕೂಡ ಬಾರಿಸಿಲ್ಲ ಎಂಬುದು ವಿಶೇಷ. ಅಂದರೆ ಈ ವರ್ಷ ಭಾರತ 14 ಪಂದ್ಯಗಳಲ್ಲಿ 26 ಇನಿಂಗ್ಸ್ ಆಡಿದೆ. ಇದಾಗ್ಯೂ 26 ಇನಿಂಗ್ಸ್ ಮೂಲಕ ಮಧ್ಯಮ ಕ್ರಮಾಂಕದ ಯಾವುದೇ ಬ್ಯಾಟರ್ ಎಂಟು ನೂರು ರನ್ ಕಲೆಹಾಕಿಲ್ಲ ಎಂಬುದೇ ಅಚ್ಚರಿ.
ಇದೀಗ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಶತಕ ಹಾಗೂ ಮಯಾಂಕ್ ಅಗರ್ವಾಲ್ ಅರ್ಧಶತಕ ಬಾರಿಸಿ ಮಿಂಚಿದರೆ, ಬೌಲಿಂಗ್ನಲ್ಲಿ ಮೊಹಮ್ಮದ್ ಶಮಿ 8 ವಿಕೆಟ್, ಬುಮ್ರಾ 5 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಯಾವುದೇ ಬ್ಯಾಟರ್ ಅರ್ಧಶತಕ ಬಾರಿಸಿಲ್ಲ ಎಂಬುದು ವಿಶೇಷ. ಹೀಗಾಗಿ ಗೆಲುವಿನ ಅಲೆಯಲ್ಲಿದ್ದರೂ ಟೀಮ್ ಇಂಡಿಯಾ ಕಳೆದೊಂದು ವರ್ಷದಿಂದ ಮಧ್ಯಮ ಕ್ರಮಾಂಕದ ಚಿಂತೆಯನ್ನು ಎದುರಿಸುತ್ತಿರುವುದು ಸ್ಪಷ್ಟ.
ಇದನ್ನೂ ಓದಿ: India vs South Africa 1st Test: ದಕ್ಷಿಣ ಆಫ್ರಿಕಾ ವಿರುದ್ದ ಭಾರತಕ್ಕೆ ಭರ್ಜರಿ ಜಯ
ಇದನ್ನೂ ಓದಿ: ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!
ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…
ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್ಸಿಬಿ ನಾಯಕ
(India’s middle order fails again)