IND vs ENG: ಡಕ್ ನಂತರ ಗೋಲ್ಡನ್ ಡಕ್; 42 ವರ್ಷಗಳ ನಂತರ ಭಾರತಕ್ಕೆ ಅತ್ಯಂತ ಕೆಟ್ಟ ಆರಂಭ

Manchester Test Disaster: ಮ್ಯಾಂಚೆಸ್ಟರ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಭಾರತ ತಂಡಕ್ಕೆ ಅತ್ಯಂತ ಕೆಟ್ಟ ಆರಂಭ ಸಿಕ್ಕಿದೆ. ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಅವರು ಶೂನ್ಯಕ್ಕೆ ಔಟ್ ಆಗುವ ಮೂಲಕ ತಂಡಕ್ಕೆ ದೊಡ್ಡ ಹೊಡೆತ ನೀಡಿದರು. ಇದು 1983 ರ ನಂತರ ಭಾರತ ತಂಡದ ಮೊದಲ ಡಬಲ್ ಡಕ್ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಈ ಇಬ್ಬರು ಆಟಗಾರರ ಈ ವೈಫಲ್ಯ ಭಾರತದ ಗೆಲುವಿನ ಆಶೆಗಳನ್ನು ಕುಂದಿಸಿದೆ.

IND vs ENG: ಡಕ್ ನಂತರ ಗೋಲ್ಡನ್ ಡಕ್; 42 ವರ್ಷಗಳ ನಂತರ ಭಾರತಕ್ಕೆ ಅತ್ಯಂತ ಕೆಟ್ಟ ಆರಂಭ
Jaiswal, Sudarshan

Updated on: Jul 26, 2025 | 6:52 PM

ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ (Manchester Test) ಇಂಗ್ಲೆಂಡ್‌ ತಂಡವನ್ನು 669 ರನ್​ಗಳಿಗೆ ಆಲೌಟ್ ಮಾಡಿ 311 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾಕ್ಕೆ ಅತ್ಯಂತ ಕೆಟ್ಟ ಆರಂಭ ಸಿಕ್ಕಿದೆ. ತಂಡ ಮೊದಲ ಓವರ್‌ನಲ್ಲಿಯೇ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಅದರಲ್ಲೂ ಈ ಎರಡೂ ವಿಕೆಟ್​ಗಳು ಸೊನ್ನೆಗೆ ಪತನವಾಗಿದ್ದು, ಭಾರತ ತಂಡವನ್ನು ಸೋಲಿನ ದವಡೆಗೆ ತಳ್ಳಿದೆ. ವಾಸ್ತವವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ಕೇವಲ 4 ಎಸೆತಗಳನ್ನು ಎದುರಿಸಿ ಯಾವುದೇ ರನ್ ಕಲೆಹಾಕದೆ ಡಕ್​ಗೆ ಬಲಿಯಾದರೆ, ಆ ಬಳಿಕ ಬಂದ ಸಾಯಿ ಸುದರ್ಶನ್ (Sai Sudharsan) ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸುವ ಮೂಲಕ ಗೋಲ್ಡನ್ ಡಕ್​ಗೆ ಪೆವಿಲಿಯನ್‌ ಸೇರಿಕೊಂಡರು.

ಸೊನ್ನೆ ಸುತ್ತಿದ ಜೈಸ್ವಾಲ್- ಸುದರ್ಶನ್

ಭಾರತದ ಎರಡನೇ ಇನ್ನಿಂಗ್ಸ್​ನ ಮೊದಲ ಓವರ್​ನಲ್ಲೇ ಇಂಗ್ಲೆಂಡ್‌ನ ಅನುಭವಿ ಬೌಲರ್ ಕ್ರಿಸ್ ವೋಕ್ಸ್ ಸಂಚಲನ ಮೂಡಿಸಿದರು. ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿಯೇ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಅವರನ್ನು ಶೂನ್ಯಕ್ಕೆ ಪೆವಿಲಿಯನ್‌ಗೆ ಕಳುಹಿಸಿದರು. ಈ ಇನ್ನಿಂಗ್ಸ್‌ನಲ್ಲಿ ತಂಡಕ್ಕೆ ಬಲವಾದ ಆರಂಭದ ಭರವಸೆಯೊಂದಿಗೆ ಕ್ರೀಸ್​ಗೆ ಬಂದ ಜೈಸ್ವಾಲ್ ಅವರ ಈ ಡಕ್ ಔಟ್ ತಂಡಕ್ಕೆ ದೊಡ್ಡ ಹೊಡೆತ ನೀಡಿತು. ಇದು ಸಾಲದೆಂಬಂತೆ ಮುಂದಿನ ಎಸೆತದಲ್ಲಿಯೇ ವೋಕ್ಸ್, ಸಾಯಿ ಸುದರ್ಶನ್ ಅವರನ್ನು ಔಟ್ ಮಾಡಿ ಸತತ ಎರಡು ಎಸೆತಗಳಲ್ಲಿ ಈ ವಿಕೆಟ್‌ ಪಡೆದು ಭಾರತದ ಇನ್ನಿಂಗ್ಸ್​ಗೆ ಶಾಕ್ ನೀಡಿದರು.

42 ವರ್ಷಗಳ ನಂತರ ಜರುಗಿತು

ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಅವರ ಈ ಶೂನ್ಯ ಸಾಧನೆ 42 ವರ್ಷಗಳ ಹಳೆಯ ದಾಖಲೆಯನ್ನು ಪುನರಾವರ್ತಿಸಿದೆ. ವಾಸ್ತವವಾಗಿ, 1983 ರ ನಂತರ ಭಾರತ ತಂಡವು ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯದೆ 2 ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಇದೇ ಮೊದಲು. ಇದಕ್ಕೂ ಮೊದಲು, ಡಿಸೆಂಬರ್ 1983 ರಲ್ಲಿ ಚೆನ್ನೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಎರಡು ವಿಕೆಟ್‌ಗಳನ್ನು ಯಾವುದೇ ರನ್ ಗಳಿಸದೆ ಕಳೆದುಕೊಂಡಿತ್ತು.

IND vs ENG: 669 ರನ್​ಗಳಿಗೆ ಇಂಗ್ಲೆಂಡ್‌ ಆಲೌಟ್; 311 ರನ್​ಗಳ ಭಾರಿ ಮುನ್ನಡೆ

ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಯಶಸ್ವಿ ಜೈಸ್ವಾಲ್ 107 ಎಸೆತಗಳಲ್ಲಿ 58 ರನ್ ಗಳಿಸಿದರೆ, ಸಾಯಿ ಸುದರ್ಶನ್ 151 ಎಸೆತಗಳಲ್ಲಿ 61 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇದು ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಅತಿದೊಡ್ಡ ಇನ್ನಿಂಗ್ಸ್ ಕೂಡ ಆಗಿತ್ತು. ಆದರೆ ಈ ಬಾರಿ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯಲು ವಿಫಲರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Sat, 26 July 25