IND vs BAN: ಗ್ರೀನ್ ಪಾರ್ಕ್ ಮೈದಾನದಲ್ಲಿ ಟೀಮ್ ಇಂಡಿಯಾದ ಪ್ರದರ್ಶನ ಹೇಗಿದೆ?
India vs Bangladesh Test: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 280 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು. ಇದೀಗ ಉಭಯ ತಂಡಗಳು 2ನೇ ಟೆಸ್ಟ್ ಪಂದ್ಯಕ್ಕಾಗಿ ಕಾನ್ಪುರದಲ್ಲಿ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ವಿಶೇಷ ಎಂದರೆ ಈ ಮೈದಾನದಲ್ಲಿ ಆಡಲಾದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ನ್ಯೂಝಿಲೆಂಡ್ ವಿರುದ್ಧ ಡ್ರಾ ಸಾಧಿಸಿದ್ದರು. ಆದರೆ ಈ ಬಾರಿ ಟೀಮ್ ಇಂಡಿಯಾ ಗೆಲುವಿನ ನಿರೀಕ್ಷೆಯಲ್ಲಿದೆ.
ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟೆಸ್ಟ್ ಪಂದ್ಯವು ನಾಳೆಯಿಂದ (ಸೆ.27) ಶುರುವಾಗಲಿದೆ. ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಅತ್ತ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಲು ಈ ಮ್ಯಾಚ್ನಲ್ಲಿ ಬಾಂಗ್ಲಾದೇಶ್ ತಂಡ ಗೆಲ್ಲಲೇಬೇಕು. ಆದರೆ ಈ ಗೆಲುವು ಅಂದುಕೊಂಡಷ್ಟು ಸುಲಭವಲ್ಲ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.
ಕಾನ್ಪುರದ ಗ್ರೀನ್ ಪಾರ್ಕ್ ಮೈದಾನದಲ್ಲಿ ಭಾರತ ತಂಡವು ಈವರೆಗೆ 23 ಟೆಸ್ಟ್ ಪಂದ್ಯಗಳನ್ನಾಡಿದೆ. ಈ ವೇಳೆ ಸೋತಿರುವುದು ಕೇವಲ ಮೂರು ಬಾರಿ ಮಾತ್ರ. ಇನ್ನುಳಿದ 20 ಪಂದ್ಯಗಳಲ್ಲಿ 7 ಬಾರಿ ಗೆಲುವು ದಾಖಲಿಸಿದರೆ, 13 ಬಾರಿ ಡ್ರಾ ಸಾಧಿಸಿದೆ. ಹೀಗಾಗಿ ಗ್ರೀನ್ ಪಾರ್ಕ್ ಮೈದಾನದಲ್ಲೂ ಬಾಂಗ್ಲಾದೇಶ್ ವಿರುದ್ಧ ಟೀಮ್ ಇಂಡಿಯಾ ಪಾರುಪತ್ಯ ಮೆರೆಯುವುದನ್ನು ಎದುರು ನೋಡಬಹುದು. ಇನ್ನು ಈ ಮೈದಾನದಲ್ಲಿನ ಟೀಮ್ ಇಂಡಿಯಾದ ಕೆಲ ಪ್ರಮುಖ ಅಂಕಿ ಅಂಶಗಳನ್ನು ನೋಡುವುದಾದರೆ….
- ಗರಿಷ್ಠ ಮೊತ್ತ: ಡಿಸೆಂಬರ್ 1986 ರಲ್ಲಿ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ 167.1 ಓವರ್‌ಗಳಲ್ಲಿ 676 ರನ್ ಗಳಿಸಿತ್ತು.
- ಕನಿಷ್ಠ ಮೊತ್ತ: ಜನವರಿ 1952 ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡವು 61.5 ಓವರ್‌ಗಳಲ್ಲಿ 121 ರನ್ಗಳಿಗೆ ಆಲೌಟ್ ಆಗಿತ್ತು.
- ಅತಿದೊಡ್ಡ ಗೆಲುವು (ಇನಿಂಗ್ಸ್‌ನಿಂದ): ನವೆಂಬರ್ 2009 ರಲ್ಲಿ ಭಾರತವು ಶ್ರೀಲಂಕಾವನ್ನು ಇನ್ನಿಂಗ್ಸ್ ಮತ್ತು 144 ರನ್‌ಗಳಿಂದ ಸೋಲಿಸಿತು.
- ಅತಿದೊಡ್ಡ ಗೆಲುವು (ರನ್‌ಗಳಿಂದ): ಡಿಸೆಂಬರ್ 1996 ರಲ್ಲಿ ಭಾರತವು ಸೌತ್ ಆಫ್ರಿಕಾವನ್ನು 280 ರನ್‌ಗಳಿಂದ ಸೋಲಿಸಿತ್ತು.
- ಅತಿದೊಡ್ಡ ಗೆಲುವು (ವಿಕೆಟ್‌ಗಳಿಂದ): ಅಕ್ಟೋಬರ್ 1999 ರಲ್ಲಿ ನ್ಯೂಝಿಲೆಂಡ್ ಮತ್ತು ಏಪ್ರಿಲ್ 2008 ರಲ್ಲಿ ಸೌತ್ ಆಫ್ರಿಕಾ ವಿರುದ್ಧ ತಲಾ 8 ವಿಕೆಟ್‌ಗಳಿಂದ ಜಯ ಸಾಧಿಸಿದೆ.
- ಹೆಚ್ಚು ರನ್: ಗುಂಡಪ್ಪ ವಿಶ್ವನಾಥ್ ಏಳು ಪಂದ್ಯಗಳಿಂದ 776 ರನ್ ಕಲೆಹಾಕಿದ್ದಾರೆ.
- ಗರಿಷ್ಠ ವೈಯಕ್ತಿಕ ಸ್ಕೋರ್: ಡಿಸೆಂಬರ್ 1986 ರಲ್ಲಿ ಶ್ರೀಲಂಕಾ ವಿರುದ್ಧ ಮೊಹಮ್ಮದ್ ಅಝರುದ್ದೀನ್ 199 ರನ್ ಬಾರಿಸಿದ್ದರು.
- ಅತ್ಯಧಿಕ ಶತಕ: ಮೊಹಮ್ಮದ್ ಅಝರುದ್ದೀನ್ ಮತ್ತು ಗುಂಡಪ್ಪ ವಿಶ್ವನಾಥ್ ತಲಾ 3 ಶತಕಗಳನ್ನು ಬಾರಿಸಿದ್ದಾರೆ.
- ಅತ್ಯಧಿಕ ಅರ್ಧಶತಕ: ಸುನಿಲ್ ಗವಾಸ್ಕರ್ 9 ಟೆಸ್ಟ್‌ಗಳಲ್ಲಿ 5 ಅರ್ಧಶತಕಗಳನ್ನು ಬಾರಿಸಿದ್ದಾರೆ.
- ಡಕ್ ಔಟ್: ಚಂದು ಬೋರ್ಡೆ ಅವರು ಐದು ಟೆಸ್ಟ್‌ಗಳಲ್ಲಿ 3 ಬಾರಿ ಸೊನ್ನೆಗೆ ಔಟ್ ಆಗಿದ್ದಾರೆ.
- ಅತಿ ಹೆಚ್ಚು ಸಿಕ್ಸರ್‌ಗಳು: ವೀರೇಂದ್ರ ಸೆಹ್ವಾಗ್ ಅವರ ಮೂರು ಟೆಸ್ಟ್‌ಗಳಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
- ಹೆಚ್ಚಿನ ಸಿಕ್ಸರ್‌ಗಳು (ಇನಿಂಗ್ಸ್‌ನಲ್ಲಿ): ಸಲೀಂ ದುರಾನಿ, ಬಿಶನ್ ಸಿಂಗ್ ಬೇಡಿ ಮತ್ತು ರವೀಂದ್ರ ಜಡೇಜಾ ತಲಾ 3 ಸಿಕ್ಸ್ ಸಿಡಿಸಿದ್ದಾರೆ.
- ಅತಿ ಹೆಚ್ಚು ವಿಕೆಟ್: ಕಪಿಲ್ ದೇವ್ ಏಳು ಟೆಸ್ಟ್‌ಗಳಲ್ಲಿ 25 ವಿಕೆಟ್ ಕಬಳಿಸಿದ್ದಾರೆ.
- ಅತ್ಯುತ್ತಮ ಬೌಲಿಂಗ್ (ಇನಿಂಗ್ಸ್‌ನಲ್ಲಿ): ಡಿಸೆಂಬರ್ 1959 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಸುಭಾಯ್ ಪಟೇಲ್ 35.5 ಓವರ್‌ಗಳಲ್ಲಿ 69 ರನ್ ನೀಡಿ 9 ವಿಕೆಟ್ ಕಬಳಿಸಿದ್ದರು.
- ಅತ್ಯುತ್ತಮ ಬೌಲಿಂಗ್ (ಪಂದ್ಯವೊಂದರಲ್ಲಿ): ಡಿಸೆಂಬರ್ 1959 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಸುಭಾಯ್ ಪಟೇಲ್ 61.3 ಓವರ್‌ಗಳಲ್ಲಿ 124 ರನ್ ನೀಡಿ 14 ವಿಕೆಟ್ ಕಬಳಿಸಿದ್ದರು.
- ಹೆಚ್ಚು ಐದು ವಿಕೆಟ್‌ಗಳ ಸಾಧನೆ: ಜಸುಭಾಯ್ ಪಟೇಲ್, ಅನಿಲ್ ಕುಂಬ್ಳೆ ಮತ್ತು ಸುಭಾಷ್ ಗುಪ್ತೆ ತಲಾ 2 ಬಾರಿ ಗ್ರೀನ್ ಪಾರ್ಕ್ ಮೈದಾನದಲ್ಲಿ 5 ವಿಕೆಟ್ ಕಬಳಿಸಿದ್ದಾರೆ.
- 10 ವಿಕೆಟ್‌ಗಳು (ಪಂದ್ಯವೊಂದರಲ್ಲಿ): ಜಸುಭಾಯ್ ಪಟೇಲ್, ಅನಿಲ್ ಕುಂಬ್ಳೆ, ಆರ್ ಅಶ್ವಿನ್ ಮತ್ತು ಸುಭಾಷ್ ಗುಪ್ತೆ ತಲಾ ಒಂದು ಬಾರಿ 10 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.
- ವಿಕೆಟ್ ಕೀಪಿಂಗ್: ಏಳು ಟೆಸ್ಟ್‌ಗಳಲ್ಲಿ ಸೈಯದ್ ಕಿರ್ಮಾನಿ 16 (14 ಕ್ಯಾಚ್‌ಗಳು ಮತ್ತು 2 ಸ್ಟಂಪಿಂಗ್‌ಗಳು) ಮಂದಿಯನ್ನು ಔಟ್ ಮಾಡಿದ್ದರು.
- ಅತಿ ಹೆಚ್ಚು ಕ್ಯಾಚ್‌ಗಳು: ರಾಹುಲ್ ದ್ರಾವಿಡ್ ಐದು ಟೆಸ್ಟ್‌ಗಳಲ್ಲಿ 7 ಕ್ಯಾಚ್‌ಗಳನ್ನು ಹಿಡಿದಿದ್ದಾರೆ.
- ಗರಿಷ್ಠ ಜೊತೆಯಾಟ: ಡಿಸೆಂಬರ್ 1986 ರಲ್ಲಿ ಶ್ರೀಲಂಕಾ ವಿರುದ್ಧ ಕಪಿಲ್ ದೇವ್ ಮತ್ತು ಮೊಹಮ್ಮದ್ ಅಝರುದ್ದೀನ್ 6ನೇ ವಿಕೆಟ್‌ಗೆ 272 ರನ್ಗಳ ಜೊತೆಯಾಟವಾಡಿದ್ದರು.
- ಹೆಚ್ಚು ಪಂದ್ಯಗಳು: ಸುನಿಲ್ ಗವಾಸ್ಕರ್ ಗ್ರೀನ್ ಪಾರ್ಕ್ ಮೈದಾನದಲ್ಲಿ 9 ಟೆಸ್ಟ್ ಪಂದ್ಯಗಳನ್ನಾಡಿ ದಾಖಲೆ ಹೊಂದಿದ್ದಾರೆ.
- ಯಶಸ್ವಿ ನಾಯಕ: ಎಂಎಸ್ ಧೋನಿ ಮತ್ತು ಸಚಿನ್ ತೆಂಡೂಲ್ಕರ್ ತಮ್ಮ ನಾಯಕತ್ವದಲ್ಲಿ ಈ ಮೈದಾನದಲ್ಲಿ ತಲಾ 2 ಗೆಲುವು ದಾಖಲಿಸಿದ್ದಾರೆ.
Published On - 12:10 pm, Thu, 26 September 24