Sneh Rana: 8 ವಿಕೆಟ್ ಕಬಳಿಸಿ ಮಿಂಚಿದ ಸ್ನೇಹ್ ರಾಣಾ

|

Updated on: Jul 01, 2024 | 7:51 AM

INDW vs SAW: ಭಾರತ ಮತ್ತು ಸೌತ್ ಆಫ್ರಿಕಾ ಮಹಿಳಾ ತಂಡಗಳ ನಡುವೆ ಏಕೈಕ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ನೀಡಿದೆ. ಮೊದಲ ಇನಿಂಗ್ಸ್​ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಮಿಂಚಿರುವ ಭಾರತೀಯ ವನಿತೆಯರು ಇದೀಗ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದಾರೆ. ಹೀಗಾಗಿ ಈ ಮ್ಯಾಚ್​ನಲ್ಲಿ ಟೀಮ್ ಇಂಡಿಯಾ ಗೆಲ್ಲುವ ಸಾಧ್ಯತೆಯಿದೆ.

Sneh Rana: 8 ವಿಕೆಟ್ ಕಬಳಿಸಿ ಮಿಂಚಿದ ಸ್ನೇಹ್ ರಾಣಾ
Team India
Follow us on

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಸ್ಪಿನ್ನರ್ ಸ್ನೇಹ್ ರಾಣಾ ಬರೋಬ್ಬರಿ 8 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಸ್ಮೃತಿ ಮಂಧಾನ (149) ಶತಕ ಸಿಡಿಸಿದರೆ, ಶಫಾಲಿ ವರ್ಮಾ (205) ದ್ವಿಶತಕ ಬಾರಿಸಿ ಅಬ್ಬರಿಸಿದ್ದರು.

ಇನ್ನು ನಾಯಕಿ ಹರ್ಮನ್​ಪ್ರೀತ್ ಕೌರ್ 69 ರನ್​​ಗಳ ಕೊಡುಗೆ ನೀಡಿದರೆ, ಜೆಮಿಮಾ ರೊಡ್ರಿಗಾಸ್ 55 ರನ್​ ಬಾರಿಸಿದರು. ಹಾಗೆಯೇ ರಿಚಾ ಘೋಷ್ 90 ಎಸೆತಗಳಲ್ಲಿ 86 ರನ್​ ಚಚ್ಚಿದ್ದರು. ಈ ಮೂಲಕ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ ವಿಶ್ವ ದಾಖಲೆಯ 603 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು.

ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ಪರ ಸುನೆ ಲೂಸ್ (65) ಹಾಗೂ ಮರಿಝನ್ನೆ ಕಪ್ (74) ಅರ್ಧಶತಕ ಬಾರಿಸಿ ಮಿಂಚಿದ್ದರು. ಆದರೆ ಸ್ನೇಹ್ ರಾಣಾ ಅವರ ಸ್ಪಿನ್ ಮೋಡಿಗೆ ಉಳಿದ ಬ್ಯಾಟರ್​ಗಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಸಾಧ್ಯವಾಗಿರಲಿಲ್ಲ. ಪರಿಣಾಮ ಸೌತ್ ಆಫ್ರಿಕಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 266 ರನ್​ಗಳಿಗೆ ಆಲೌಟ್ ಆಯಿತು.

ಟೀಮ್ ಇಂಡಿಯಾ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ಸ್ನೇಹ್ ರಾಣಾ 77 ರನ್​ ನೀಡಿ 8 ವಿಕೆಟ್ ಕಬಳಿಸಿ ಮಿಂಚಿದರೆ, ದೀಪ್ತಿ ಶರ್ಮಾ 2 ವಿಕೆಟ್ ಪಡೆದರು.

ದ್ವಿತೀಯ ಇನಿಂಗ್ಸ್​:

ಮೊದಲ ಇನಿಂಗ್ಸ್​ನಲ್ಲಿ 266 ರನ್​ಗಳಿಗೆ ಆಲೌಟ್ ಆದ ಪರಿಣಾಮ ಫಾಲೋಆನ್ ಪಡೆದ ಸೌತ್ ಆಫ್ರಿಕಾ ತಂಡವನ್ನು ದ್ವಿತೀಯ ಇನಿಂಗ್ಸ್​ಗೆ ಆಹ್ವಾನಿಸಲಾಯಿತು. ಅದರಂತೆ 2ನೇ ಇನಿಂಗ್ಸ್ ಆರಂಭಿಸಿರುವ ಸೌತ್ ಆಫ್ರಿಕಾ ವನಿತೆಯರು ದಿಟ್ಟ ಹೋರಾಟವನ್ನೇ ಪ್ರದರ್ಶಿಸಿದೆ.

ತಂಡದ ಪರ ಸುನೆ ಲೂಸ್ (109) ಶತಕ ಸಿಡಿಸಿ ಮಿಂಚಿದರೆ, ನಾಯಕಿ ಲಾರಾ ವೊಲ್ವಾರ್ಡ್ಟ್ ಅಜೇಯ 93 ರನ್​ಗಳೊಂದಿಗೆ ಕ್ರೀಸ್​ನಲ್ಲಿದ್ದಾರೆ. ಈ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸೌತ್ ಆಫ್ರಿಕಾ ತಂಡವು 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 232 ರನ್​ ಕಲೆಹಾಕಿದೆ.

ಇದಗ್ಯೂ ಸೌತ್ ಆಫ್ರಿಕಾ ತಂಡ 105 ರನ್​ಗಳ ಹಿನ್ನಡೆಯಲ್ಲಿದ್ದು, ಈ ರನ್​ಗಳೊಳಗೆ ಟೀಮ್ ಇಂಡಿಯಾ ಆಫ್ರಿಕನ್ ವನಿತೆಯರನ್ನು ಆಲೌಟ್ ಮಾಡಿದರೆ, ಇನಿಂಗ್ಸ್ ಜಯ ಸಾಧಿಸಬಹುದು. ಇಲ್ಲದಿದ್ದರೆ ಸೌತ್ ಆಫ್ರಿಕಾ ತಂಡವು 105 ರನ್​ಗಳ ಬಳಿಕ ಕಲೆಹಾಕುವ ಮೊತ್ತವು ಗೆಲುವಿನ ಗುರಿಯಾಗಿ ಪಡೆಯಲಿದೆ.

ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಶುಭಾ ಸತೀಶ್ , ಹರ್ಮನ್​ಪ್ರೀತ್ ಕೌರ್ (ನಾಯಕಿ) , ಜೆಮಿಮಾ ರೊಡ್ರಿಗಸ್ , ರಿಚಾ ಘೋಷ್ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ಪೂಜಾ ವಸ್ತ್ರಾಕರ್ , ಸ್ನೇಹ ರಾಣಾ , ರೇಣುಕಾ ಠಾಕೂರ್ ಸಿಂಗ್ , ರಾಜೇಶ್ವರಿ ಗಾಯಕ್ವಾಡ್.

ಇದನ್ನೂ ಓದಿ: Shafali Verma: ದಾಖಲೆಗಳ ಮೇಲೆ ದಾಖಲೆ ಬರೆದ ಶಫಾಲಿ ವರ್ಮಾ

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಲಾರಾ ವೊಲ್ವಾರ್ಡ್ಟ್ (ನಾಯಕಿ), ಸುನೆ ಲೂಸ್, ಅನ್ನೆಕೆ ಬಾಷ್, ಮಾರಿಝನ್ನೆ ಕಪ್, ಡೆಲ್ಮಿ ಟಕರ್, ನಾಡಿನ್ ಡಿ ಕ್ಲರ್ಕ್, ಆನ್ನೆರಿ ಡೆರ್ಕ್ಸೆನ್, ಸಿನಾಲೊ ಜಫ್ತಾ (ವಿಕೆಟ್ ಕೀಪರ್), ಮಸಾಬಟಾ ಕ್ಲಾಸ್, ನಾನ್ಕುಲುಲೆಕೊ ಮ್ಲಾಬಾ, ತುಮಿ ಸೆಖುಖುನೆ.