INDW vs SAW: ವಿಶ್ವ ದಾಖಲೆಯ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದ ಟೀಮ್ ಇಂಡಿಯಾ

|

Updated on: Jun 29, 2024 | 11:29 AM

INDW vs SAW: ಭಾರತ ಮಹಿಳಾ ತಂಡವು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ ವಿಶ್ವ ದಾಖಲೆ ನಿರ್ಮಿಸಿದೆ. ಅಲ್ಲದೆ ಟೆಸ್ಟ್ ಕ್ರಿಕೆಟ್​ನಲ್ಲಿ 600+ ರನ್ ಕಲೆಹಾಕಿದ ವಿಶ್ವದ ಮೊದಲ ಮಹಿಳಾ ತಂಡ ಎನಿಸಿಕೊಂಡಿದೆ. ಈ ಮೂಲಕ ಏಕೈಕ ಟೆಸ್ಟ್ ಪಂದ್ಯದ ಮೂಲಕ ಟೀಮ್ ಇಂಡಿಯಾ ಬ್ಯಾಟರ್​ಗಳು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

INDW vs SAW: ವಿಶ್ವ ದಾಖಲೆಯ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿದ ಟೀಮ್ ಇಂಡಿಯಾ
INDw vs SAw
Follow us on

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಬೃಹತ್ ಮೊತ್ತ ಪೇರಿಸಿ ಹೊಸ ಇತಿಹಾಸ ನಿರ್ಮಿಸಿದೆ. ಈ ಪಂದ್ಯದ ಮೊದಲ ದಿನದಾಟದಲ್ಲಿ 525 ರನ್ ಕಲೆಹಾಕಿದ್ದ ಭಾರತ ತಂಡವು ಎರಡನೇ ದಿನದಾಟದ ಮೊದಲ ಸೆಷನ್​ನಲ್ಲೇ ಡಿಕ್ಲೇರ್ ಘೋಷಿಸಿದೆ.  ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 292 ರನ್​ಗಳ ಜೊತೆಯಾಟವಾಡಿದ ಬಳಿಕ ಸ್ಮೃತಿ ಮಂಧಾನ ಔಟಾದರು.

161 ಎಸೆತಗಳನ್ನು ಎದುರಿಸಿದ್ದ ಸ್ಮೃತಿ ಮಂಧಾನ 1 ಸಿಕ್ಸ್ ಹಾಗೂ 27 ಫೋರ್​ಗಳೊಂದಿಗೆ 149 ರನ್ ಬಾರಿಸಿದ್ದರು. ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಶಫಾಲಿ ವರ್ಮಾ 197 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 24 ಫೋರ್​ಗಳೊಂದಿಗೆ 205 ರನ್ ಚಚ್ಚಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ವೇಗವಾಗಿ ದ್ವಿಶತಕ ಬಾರಿಸಿದ ಆಟಗಾರ್ತಿ ಎನಿಸಿಕೊಂಡರು.

ಇನ್ನು ಆರಂಭಿಕರಿಬ್ಬರು ನಿರ್ಗಮನದ ಬಳಿಕ ಬಂದ ಜೆಮಿಮಾ ರೊಡ್ರಿಗಾಸ್ (55) ಹಾಗೂ ಹರ್ಮನ್​ಪ್ರೀತ್ ಕೌರ್ (69) ಅರ್ಧಶತಕ ಬಾರಿಸಿ ಮಿಂಚಿದರು. ಹಾಗೆಯೇ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ 90 ಎಸೆತಗಳಲ್ಲಿ 16 ಫೋರ್​ಗಳೊಂದಿಗೆ 86 ರನ್ ಚಚ್ಚಿದರು. ಈ ಮೂಲಕ ಟೀಮ್ ಇಂಡಿಯಾ 115.1 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 603 ರನ್ ಕಲೆಹಾಕಿ ಮೊದಲ ಇನಿಂಗ್ಸ್​ ಅನ್ನು ಡಿಕ್ಲೇರ್ ಮಾಡಿಕೊಂಡಿದೆ.

ಹೊಸ ವಿಶ್ವದಾಖಲೆ:

ಈ 603 ರನ್​ಗಳೊಂದಿಗೆ ಮಹಿಳಾ ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವ ದಾಖಲೆ ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಈ ವರ್ಲ್ಡ್ ರೆಕಾರ್ಡ್ ಆಸ್ಟ್ರೇಲಿಯಾ ಮಹಿಳಾ ತಂಡದ ಹೆಸರಿನಲ್ಲಿತ್ತು.

2024 ರಲ್ಲಿ ಪರ್ತ್​ನಲ್ಲಿ ನಡೆದ ಸೌತ್ ಆಫ್ರಿಕಾ ಮಹಿಳಾ ತಂಡದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 575 ರನ್​ಗಳಿಸಿ ಈ ದಾಖಲೆ ಬರೆದಿತ್ತು. ಇದೀಗ ಈ ದಾಖಲೆಯನ್ನು ಅಳಿಸಿ ಹಾಕಿ ಮಹಿಳಾ ಟೆಸ್ಟ್​ನಲ್ಲಿ 600+ ರನ್ ಕಲೆಹಾಕಿದ ಮೊದಲ ತಂಡವೆಂಬ ವಿಶ್ವ ದಾಖಲೆಯನ್ನು ಟೀಮ್ ಇಂಡಿಯಾ ನಿರ್ಮಿಸಿದೆ.

ಭಾರತ ಪ್ಲೇಯಿಂಗ್ 11: ಸ್ಮೃತಿ ಮಂಧಾನ , ಶಫಾಲಿ ವರ್ಮಾ , ಶುಭಾ ಸತೀಶ್ , ಹರ್ಮನ್​ಪ್ರೀತ್ ಕೌರ್ (ನಾಯಕಿ) , ಜೆಮಿಮಾ ರೊಡ್ರಿಗಸ್ , ರಿಚಾ ಘೋಷ್ (ವಿಕೆಟ್ ಕೀಪರ್) , ದೀಪ್ತಿ ಶರ್ಮಾ , ಪೂಜಾ ವಸ್ತ್ರಾಕರ್ , ಸ್ನೇಹ ರಾಣಾ , ರೇಣುಕಾ ಠಾಕೂರ್ ಸಿಂಗ್ , ರಾಜೇಶ್ವರಿ ಗಾಯಕ್ವಾಡ್.

ಇದನ್ನೂ ಓದಿ: Shafali Verma: ದಾಖಲೆಗಳ ಮೇಲೆ ದಾಖಲೆ ಬರೆದ ಶಫಾಲಿ ವರ್ಮಾ

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಲಾರಾ ವೊಲ್ವಾರ್ಡ್ಟ್ (ನಾಯಕಿ), ಸುನೆ ಲೂಸ್, ಅನ್ನೆಕೆ ಬಾಷ್, ಮಾರಿಝನ್ನೆ ಕಪ್, ಡೆಲ್ಮಿ ಟಕರ್, ನಾಡಿನ್ ಡಿ ಕ್ಲರ್ಕ್, ಆನ್ನೆರಿ ಡೆರ್ಕ್ಸೆನ್, ಸಿನಾಲೊ ಜಫ್ತಾ (ವಿಕೆಟ್ ಕೀಪರ್), ಮಸಾಬಟಾ ಕ್ಲಾಸ್, ನಾನ್ಕುಲುಲೆಕೊ ಮ್ಲಾಬಾ, ತುಮಿ ಸೆಖುಖುನೆ.

ಶ್ರೀಲಂಕಾ ಹೆಸರಿನಲ್ಲಿ ವಿಶ್ವ ದಾಖಲೆ:

ಪುರುಷರ ಟೆಸ್ಟ್ ಕ್ರಿಕೆಟ್​ನಲ್ಲಿ ಅತೀ ಹೆಚ್ಚು ಸ್ಕೋರ್​ಗಳಿಸಿದ ದಾಖಲೆ ಶ್ರೀಲಂಕಾ ತಂಡದ ಹೆಸರಿನಲ್ಲಿದೆ. 1997 ರಲ್ಲಿ ಕೊಲಂಬೊದಲ್ಲಿ ನಡೆದ ಭಾರತದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ತಂಡವು 952 ರನ್ ಪೇರಿಸಿ ಈ ವಿಶ್ವ ದಾಖಲೆ ಬರೆದಿದೆ.

ಇನ್ನು ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತೀಯ ಪುರುಷರ ತಂಡ ಕಲೆಹಾಕಿದ ಗರಿಷ್ಠ ಸ್ಕೋರ್ 759 ರನ್​ಗಳು. 2016 ರಲ್ಲಿ ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿ ಭಾರತ ತಂಡ ಈ ದಾಖಲೆ ಬರೆದಿದೆ.

 

 

 

Published On - 11:22 am, Sat, 29 June 24