- Kannada News Photo gallery Cricket photos T20 World Cup 2024: Team India Most Times Reaching ICC Finals
Team India: ಫೈನಲ್ ಎಂಟ್ರಿ: ಆಸ್ಟ್ರೇಲಿಯಾದ ವಿಶ್ವ ದಾಖಲೆ ಸರಿಗಟ್ಟಿದ ಟೀಮ್ ಇಂಡಿಯಾ
T20 World Cup 2024: ಟಿ20 ವಿಶ್ವಕಪ್ 2024 ರ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ನಾಳೆ (ಜೂನ್ 29) ನಡೆಯಲಿರುವ ಅಂತಿಮ ಹಣಾಹಣಿ ಪಂದ್ಯಕ್ಕೆ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನ ಆತಿಥ್ಯವಹಿಸಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ವಿಶ್ವಕಪ್ ಮುಡಿಗೇರಿಸಿಕೊಳ್ಳುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ.
Updated on: Jun 28, 2024 | 9:04 AM

T20 World Cup 2024: ಭಾರತ ತಂಡವು 2024ರ ಟಿ20 ವಿಶ್ವಕಪ್ನ ಫೈನಲ್ಗೆ ಪ್ರವೇಶಿಸಿದೆ. ಗಯಾನಾದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್ಗಳ ಭರ್ಜರಿ ಜಯ ಸಾಧಿಸಿ ಟೀಮ್ ಇಂಡಿಯಾ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಈ ಫೈನಲ್ ಎಂಟ್ರಿಯೊಂದಿಗೆ ಭಾರತ ತಂಡವು ವಿಶೇಷ ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಅದು ಕೂಡ ಆಸ್ಟ್ರೇಲಿಯಾದ ದಾಖಲೆಯನ್ನು ಸರಿಗಟ್ಟುವ ಮೂಲಕ ಎಂಬುದು ವಿಶೇಷ.

ಅಂದರೆ ಐಸಿಸಿ ಟೂರ್ನಿಗಳಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಆಡಿದ ದಾಖಲೆ ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದೆ. ಆಸೀಸ್ ಪಡೆಯು ಐಸಿಸಿ ಟೂರ್ನಿಗಳಲ್ಲಿ ಒಟ್ಟು 13 ಬಾರಿ ಫೈನಲ್ ಆಡಿದೆ. ಇದೀಗ ಈ ದಾಖಲೆಯನ್ನು ಸರಿಗಟ್ಟುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ.

ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ವಿಶ್ವ ಟೆಸ್ಟ್ ಚಾಂಪಿಯನ್ಸ್ ಮತ್ತು ಟಿ20 ವಿಶ್ವಕಪ್ಗಳಲ್ಲಿ ಒಟ್ಟು 12 ಬಾರಿ ಫೈನಲ್ ಆಡಿರುವ ಟೀಮ್ ಇಂಡಿಯಾ ಇದೀಗ 13ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ. ಈ ಮೂಲಕ 13 ಬಾರಿ ಐಸಿಸಿ ಫೈನಲ್ ಆಡಿರುವ ಆಸ್ಟ್ರೇಲಿಯಾ ತಂಡದ ದಾಖಲೆಯನ್ನು ಟೀಮ್ ಇಂಡಿಯಾ ಸರಿಗಟ್ಟಿದೆ.

ಈ ಹಿಂದಿನ 12 ಐಸಿಸಿ ಫೈನಲ್ನಲ್ಲಿ ಭಾರತ ತಂಡವು 5 ಬಾರಿ ಮಾತ್ರ ಪ್ರಶಸ್ತಿ ಗೆದ್ದುಕೊಂಡಿದೆ. 1983 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಂಡರೆ, 2007 ರಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಇನ್ನು 2002 ಮತ್ತು 2013 ರಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು.

ಇದಿಗ 13ನೇ ಬಾರಿಗೆ ಫೈನಲ್ಗೆ ಪ್ರವೇಶಿಸಿರುವ ಟೀಮ್ ಇಂಡಿಯಾ 6ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸದಲ್ಲಿದೆ. ಅದರಂತೆ ಜೂನ್ 29 ರಂದು ನಡೆಯಲಿರುವ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದು 2ನೇ ಬಾರಿ ಟಿ20 ವಿಶ್ವಕಪ್ ಎತ್ತಿ ಹಿಡಿಯಲಿದೆಯಾ ಕಾದು ನೋಡಬೇಕಿದೆ.
