IPL 2021: ಇಂದು ಬಹುನಿರೀಕ್ಷೆಯ ಆರ್​ಸಿಬಿ ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ ಕೆಕೆಆರ್

KKR vs RCB: ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ 14 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021: ಇಂದು ಬಹುನಿರೀಕ್ಷೆಯ ಆರ್​ಸಿಬಿ ಪಂದ್ಯ: ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ ಕೆಕೆಆರ್
KKR vs RCB
Edited By:

Updated on: Sep 20, 2021 | 7:14 AM

ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿಯ (IPL 2021) ಎರಡನೇ ಚರಣದಲ್ಲಿಂದು ಬಿಗ್ ಮ್ಯಾಚ್ ನಡೆಯಲಿದೆ. ಈ ಬಾರಿಯಾದರೂ ಕಪ್ ಗೆದ್ದೇ ಗೆಲ್ಲುತ್ತೇವೆ ಎಂಬ ಛಲದೊಂದಿಗೆ ಮುನ್ನುಗ್ಗುತ್ತಿರುವ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (KKRvsRCB) ತಂಡವನ್ನು ಎದುರಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಅಬುಧಾಬಿಯ (Abu Dhabi) ಶೇಕ್ ಝಯೇದ್ ಕ್ರೀಡಾಂಗಣ ಸಾಕ್ಷಿಯಾಗಲಿದೆ. ಕೆಕೆಆರ್ ಪಾಯಿಂಟ್ ಪಟ್ಟಿಯಲ್ಲಿ ಪಾತಾಳದಲ್ಲಿದ್ದರೂ ತಂಡದ ಬಲವನ್ನು ಕಡೆಗಣಿಸುವಂತಿಲ್ಲ. ಹೀಗಾಗಿ ಉಭಯ ತಂಡಗಳ ನಡುವಣ ಕಾಳಗ ಕುತೂಹಲ ಕೆರಳಿಸಿದೆ. ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದೆ.

ಆರ್​ಸಿಬಿ ತಂಡ ಒಟ್ಟು ಏಳು ಪಂದ್ಯಗಳನ್ನು ಆಡಿದ್ದು ಐದರಲ್ಲಿ ಗೆಲುವು ಸಾಧಿಸಿ ಕೇವಲ ಎರಡರಲ್ಲಷ್ಟೆ ಸೋತಿದೆ. 10 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ, ಆರ್​ಸಿಬಿಯ ನೆಟ್ ರನ್​ರೇಟ್ -0.171 ಇಂದು ಇದನ್ನು ಪ್ಲಸ್ ಆಗಿ ಕನ್ವರ್ಟ್ ಮಾಡಬೇಕಿದೆ. ಇತ್ತ ಕೆಕೆಆರ್ ಆಡಿದ ಏಳು ಪಂದ್ಯಗಳಲ್ಲಿ ಕೇವಲ 2 ರಲ್ಲಷ್ಟೆ ಗೆದ್ದಿದ್ದು, 6 ಪಂದ್ಯಗಳಲ್ಲಿ ಸೋಲುಕಂಡು 4 ಅಂಕದೊಂದಿಗೆ 7ನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇ ಆಫ್ ಪ್ರವೇಶಿಸಬೇಕಾದರೆ ಕೆಕೆಆರ್​ಗೆ ಇದು ಮಹತ್ವದ ಪಂದ್ಯವಾಗಿದೆ.

ಮೊದಲ ಚರಣದಲ್ಲಿ ಆರ್​ಸಿಬಿ ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿತ್ತು. ಈಗ ಮೇಲ್ನೋಟಕ್ಕೆ ಕೊಹ್ಲಿ ಪಡೆಯ ಬೌಲಿಂಗ್ ವಿಭಾಗ ಮತ್ತಷ್ಟು ಕಠಿಣವಾಗಿದೆ. ಇದು ತಂಡದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಯುಜ್ವೇಂದ್ರ ಚಾಹಲ್​ಗೆ ಸಾಥ್ ನೀಡಲು ಲಂಕಾ ಸ್ಪಿನ್ನರ್ ವಾನಿಂದು ಹಸರಂಗ ಇದ್ದು ಇವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣಿದೆ. ವೇಗಿಗಳ ಪೈಕಿ ಹರ್ಷಲ್ ಪಟೇಲ್ ಈ ಬಾರಿ ಗರಿಷ್ಠ ವಿಕೆಟ್ ಪಡೆದವರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಕೈಲ್ ಜೇಮಿಸನ್ ಹಾಗೂ ಮೊಹಮ್ಮದ್ ಸಿರಾಜ್ ಮಾರಕವಾಗಿ ಗೋಚರಿಸಲಿದ್ದಾರೆ.

ಇನ್ನೂ ಬ್ಯಾಟಿಂಗ್ ವಿಭಾಗವೂ ಬಲಿಷ್ಠವಾಗಿದೆ. ಓಪನರ್​ಗಳಾಗಿ ನಾಯಕ ವಿರಾಟ್ ಕೊಹ್ಲಿ ಜೊತೆ ದೇವದತ್ ಪಡಿಕ್ಕಲ್ ಕಣಕ್ಕಿಳಿಯಲಿದ್ದಾರೆ. ರಜತ್ ಪಟಿದಾರ್, ಗ್ಲೆನ್ ಮ್ಯಾಕ್ಸ್​ವೆಲ್, ಎಬಿ ಡಿವಿಲಿಯರ್ಸ್ ತಂಡದ ಪ್ರಮುಖ ಬ್ಯಾಟಿಂಗ್ ಅಸ್ತ್ರ. ಅಭ್ಯಾಸ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಮೊಹಮ್ಮದ್ ಅಜರುದ್ದೀನ್​ಗೆ ಅವಕಾಶ ನೀಡಿದರೆ ಅಚ್ಚರಿ ಪಡಬೇಕಿಲ್ಲ.

ಇತ್ತ ಕೆಕೆಆರ್ ತಂಡ ಬಿಗ್ ಹಿಟ್ಟರ್​ಗಳಿಂದ ಕೂಡಿದೆ. ಶುಭ್ಮನ್ ಗಿಲ್, ರಾಹುಲ್ ತ್ರಿಪಾಠಿ ನಾಯಕ ಇಯಾನ್ ಮಾರ್ಗನ್ ಹಾಗೂ ದಿನೇಶ್ ಕಾರ್ತಿಕ್ ಒಂದುಕಡೆಯಾದರೆ, ಆಂಡ್ರೊ ರಸೆಲ್ ಅಬ್ಬರಿಸಲು ತಯಾರಾಗಿದ್ದಾರೆ, ವಿಶೇಷ ಎಂದರೆ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ರಸೆಲ್ ಹಾಗೂ ಸುನಿಲ್ ನರೈನ್ ಅವರ ಸ್ಟ್ರೈಕ್​ರೇಟ್ 200ಕ್ಕೂ ಅಧಿಕವಿದೆ. ಬೌಲಿಂಗ್​ನಲ್ಲಿ ವರುಣ್ ಚಕ್ರವರ್ತಿ ಹಾಗೂ ಪ್ರಸಿದ್ಧ್ ಕೃಷ್ಣ ಮೇಲೆ ಹೆಚ್ಚು ನಂಬಿಕೊಂಡಿದೆ. ಲೂಕಿ ಫರ್ಗುಸನ್ ಹಾಗೂ ಕಮಲೇಶ್ ನಾಗರಕೋಟಿಯೂ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಟೂರ್ನಿಯಲ್ಲಿ ಉಭಯ ತಂಡಗಳ ಮೊದಲ ಮುಖಾಮುಖಿ ಏಪ್ರಿಲ್ 18ರಂದು ಚೆನ್ನೈನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆರ್‌ಸಿಬಿ ತಂಡ ಗ್ಲೆನ್ ಮ್ಯಾಕ್ಸ್‌ವೆಲ್ (78) ಮತ್ತು ಎಬಿ ಡಿವಿಲಿಯರ್ಸ್‌ (76*) ಜೋಡಿಯ ಭರ್ಜರಿ ಆಟದಿಂದ 4 ವಿಕೆಟ್‌ಗೆ 204 ರನ್ ಪೇರಿಸಿತ್ತು. ಪ್ರತಿಯಾಗಿ ಕೆಕೆಆರ್ 8 ವಿಕೆಟ್‌ಗೆ 166 ರನ್ ಗಳಿಸಲಷ್ಟೇ ಶಕ್ತವಾಗಿ 38 ರನ್‌ಗಳಿಂದ ಶರಣಾಗಿತ್ತು.

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ 27 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ 14 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.

IPL 2021: RCB ನಾಯಕತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿರಾಟ್ ಕೊಹ್ಲಿ ಘೋಷಣೆ

IPL 2021: ವನಿಂದು ಹಸರಂಗ vs ಟಿಮ್ ಡೇವಿಡ್: ಯಾರಿಗೆ ಸಿಗಲಿದೆ ಚೊಚ್ಚಲ ಚಾನ್ಸ್​

(IPL 2021 KKR vs RCB 31st Match: Kolkata Knight Riders clashing against Royal Challengers Bangalore)