ಐಪಿಎಲ್ 2021ರ (IPL 2021) 51ನೇ ಪಂದ್ಯದಲ್ಲಿಂದು ಸಂಜು ಸ್ಯಾಮ್ಸನ್ (Sanju Samson) ನಾಯಕತ್ವದ ರಾಜಸ್ಥಾನ್ ರಾಯಲ್ಸ್ ಮತ್ತು ರೋಹಿತ್ ಶರ್ಮಾ (Rohit Sharma) ನೇತೃತ್ವದ ಮುಂಬೈ ಇಂಡಿಯನ್ಸ್ (RR vs MI) ತಂಡಗಳು ಮುಖಾಮುಖಿ ಆಗುತ್ತಿವೆ. ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ (Sharjah Cricket Stadium) ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಈಗಾಗಲೇ ಮೂರು ತಂಡಗಳು ಕ್ವಾಲಿಫೈಯರ್ ಆಗಿದ್ದು, ಇನ್ನೊಂದು ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಹೋರಾಟ ನಡೆಯುತ್ತಿದೆ.
ರಾಜಸ್ಥಾನ್ ರಾಯಲ್ಸ್ ತಂಡ ಒಟ್ಟು 12 ಪಂದ್ಯಗಳನ್ನು ಆಡಿದ್ದು ಐದು ಪಂದ್ಯಗಳಲ್ಲಿ ಜಯ ಸಾಧಿಸಿದೆ. ಏಳು ಪಂದ್ಯಗಳಲ್ಲಿ ಸೋತಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.337 ನೆಟ್ರೇಟ್ನೊಂದಿಗೆ ಆರನೇ ಸ್ಥಾನದಲ್ಲಿದೆ. ಇತ್ತ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಹಾದಿ ತುಂಬಾನೇ ಕಠಿಣವಾಗಿದೆ. ಈವರೆಗೆ ಒಟ್ಟು 12 ಪಂದ್ಯಗಳನ್ನು ಆಡಿದ್ದು ಕೇವಲ 5 ಪಂದ್ಯಗಳನ್ನಷ್ಟೆ ಗೆದ್ದಿದೆ. ಏಳು ಪಂದ್ಯಗಳಲ್ಲಿ ಸೋಲುಂಡಿದೆ. ಒಟ್ಟು 10 ಅಂಕ ಸಂಪಾದಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ -0.453 ನೆಟ್ರೇಟ್ನೊಂದಿಗೆ ಏಳನೇ ಸ್ಥಾನದಲ್ಲಿದೆ.
ರಾಜಸ್ಥಾನ್ ರಾಯಲ್ಸ್ ಕಳೆದ ಪಂದ್ಯದಲ್ಲಿ ಚೆನ್ನೈಯನ್ನು ಸೋಲಿಸುವ ಮೂಲಕ ರೇಸ್‌ನಲ್ಲಿ ಉಳಿದುಕೊಂಡಿದೆ. ಎವಿನ್ ಲೆವಿಸ್ ಹಾಗೂ ಯಶಸ್ವಿ ಜೈಸ್ವಾಲ್ ಉತ್ತಮ ಲಯದಲ್ಲಿದ್ದು ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಸಂಜು ಸ್ಯಾಮ್ಸನ್ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಶಿವಂ ದುಬೆ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಇವರಿಗೆ ಲ್ಯಾಮ್ ಲಿವಿಂಗ್ಸ್ಟೋನ್, ಲುಮ್ರೋರ್, ರಾಹುಲ್ ತೇವಾಟಿಯ ಸಾಥ್ ನೀಡಬೇಕಷ್ಟೆ. ಬೌಲಿಂಗ್ನಲ್ಲಿ ಮುಸ್ತಫಿಜುರ್ ರೆಹ್ಮಾನ್, ಕಾರ್ತಿಕ್ ತ್ಯಾಗಿ ಮತ್ತು ಚೇತನ್ ಸಕರಿಯಾ ಇನ್ನಷ್ಟು ಬಲ ಹಾಕಬೇಕಿದೆ.
ಆರ್ಆರ್ಗೆ ಒಟ್ಟು ಎರಡು ಪಂದ್ಯ ಬಾಕಿ ಉಳಿದಿದ್ದು ಎರಡನ್ನೂ ಗೆದ್ದರೆ ಪ್ಲೇ ಆಫ್ ಬಾಗಿಲು ತೆರೆಯಲಿದೆ. ಅಕಸ್ಮಾತ್ ಇಂದು ಮುಂಬೈಗೆ ಶರಣಾದರೂ ಬಚಾವಾದೀತು, ಆದರೆ ಮುಂದಿನ ಕೆಕೆಆರ್ ವಿರುದ್ಧ ಸೋಲಬಾರದು.
ಇತ್ತ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಉಳಿದೆಲ್ಲ ತಂಡಗಳಿಗಿಂತ ಕೆಳ ಮಟ್ಟದಲ್ಲಿದೆ. ಬ್ಯಾಟರ್ಗಳ ಕಳಪೆ ಪ್ರದರ್ಶನವೇ ದೊಡ್ಡ ತಲೆನೋವಾಗಿದೆ. ಅದರಲ್ಲೂ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಯಾವೊಂದು ಪಂದ್ಯದಲ್ಲಿ ಮಿಂಚುತ್ತಿಲ್ಲ. ಓಪನರ್ಗಳಾದ ರೋಹಿತ್ ಶರ್ಮಾ ಹಾಗೂ ಕ್ವಿಂಟರ್ ಡಿಕಾಕ್ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸುತ್ತಿಲ್ಲ. ಹಾರ್ದಿಕ್ ಪಾಂಡ್ಯ ಹಾಗೂ ಕೀರೊನ್ ಪೊಲಾರ್ಡ್ ಕೂಡ ಫಾರ್ಮ್ನಲ್ಲಿಲ್ಲ. ಆದ್ರೆ, ಮುಂಬೈ ಬೌಲಿಂಗ್ನಲ್ಲಿ ಬಲ ಪಡೆದುಕೊಂಡಿದೆ. ಜಸ್ಪ್ರೀತ್ ಬುಮ್ರಾ ಹಾಗೂ ರಾಹುಲ್ ಚಹಾರ್ ವಿಕೆಟ್ ಟೇಕಿಂಗ್ ಬೌಲರ್ಗಳಾದರೆ, ಕ್ರುನಾಲ್ ಪಾಂಡ್ಯ ಹಾಗೂ ಟ್ರೆಂಟ್ ಬೌಲ್ಟ್ ಇವರಿಗೆ ಸಾಥ್ ನೀಡುತ್ತಿದ್ದಾರೆ.
ಉಭಯ ತಂಡಗಳು ಈವರೆಗೆ ಐಪಿಎಲ್ನಲ್ಲಿ ಒಟ್ಟು 23 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಮುಂಬೈ ಇಂಡಿಯನ್ಸ್ 12 ಮತ್ತು ರಾಜಸ್ಥಾನ್ ರಾಯಲ್ಸ್ 11 ಪಂದ್ಯಗಳಲ್ಲಿ ಗೆದ್ದ ಇತಿಹಾಸವಿದೆ.
IPL 2021: ಒಂದು ಓವರ್‌ನಲ್ಲಿ 30 ರನ್! ಡೆಲ್ಲಿ ಪರ ಐಪಿಎಲ್ ಅಖಾಡಕ್ಕಿಳಿದ ಗುಜರಾತ್ನ ಯುವ ಬ್ಯಾಟರ್
(IPL 2021 MI vs RR Rajasthan Royals and Mumbai Indians face each other in a must-win match in Sharjah)