ಮಿಲಿಯನ್ ಡಾಲರ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ 2022 ಆವೃತ್ತಿಯ ಮೆಗಾ ಹರಾಜು (IPL 2022 Auction) ಪ್ರಕ್ರಿಯೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಇಂದು ಎರಡನೇ ದಿನದ ಆಕ್ಷನ್ಗೆ ತಯಾರಾಗುತ್ತಿದೆ. ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಬಯೋಬಲ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ನಡೆಯುತ್ತಿರುವ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 10 ತಂಡಗಳ ಫ್ರಾಂಚೈಸಿಗಳು ಮೊದಲ ಹಣದ ಮಳೆಯನ್ನೇ ಸುರಿಸಿದರು. ಇದೀಗ ಎರಡನೇ ದಿನ ಕೂಡ ಉತ್ತಮ ಫಾರ್ಮಿನಲ್ಲಿ ಇರುವ ಆಟಗಾರರನ್ನ ಖರೀದಿ ಮಾಡಲು ಎಲ್ಲ ಫ್ರಾಂಚೈಸಿ ಲೆಕ್ಕಾಚಾರ ಹಾಕಿಕೊಂಡಿವೆ. ಮೊದಲ ದಿನದ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಬರೋಬ್ಬರಿ 8 ಆಟಗಾರರನ್ನು ಖರೀದಿಸಿತು. ಹರ್ಷಲ್ ಪಟೇಲ್ ಹಾಗೂ ವನಿಂದು ಹಸರಂಗ ಈ ಇಬ್ಬರು ಆಟಗಾರರ ಮೇಲೆಯೇ ಬರೋಬ್ಬರಿ ತಲಾ 10.75 ಕೋಟಿ ಹೂಡಿಕೆ ಮಾಡಿ ಅಚ್ಚರಿ ಮೂಡಿಸಿತು. ಫಾಫ್ ಡುಪ್ಲೆಸಿಸ್ ಅವರನ್ನು 7 ಕೋಟಿಗೆ ಖರೀದಿ ಮಾಡಿತು. ಇದೀಗ ಎರಡನೇ ದಿನದ ಹರಾಜಿನ ಮೇಲೆ ಆರ್ಸಿಬಿ (RCB) ಕಣ್ಣಿಟ್ಟಿದೆ.
ಮೊದಲನೇ ದಿನದ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 74 ಆಟಗಾರರು ಹರಾಜಾಗಿದ್ದು, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಅತಿ ದೊಡ್ಡ ಮೊತ್ತದ ಬಿಡ್ ಮಾಡಿದ ಫ್ರಾಂಚೈಸಿ ಎನಿಸಿಕೊಂಡಿತು. ರೋಹಿತ್ ಪಡೆ ಇಶಾನ್ ಕಿಶನ್ ಮೇಲೆ 15.25 ಕೋಟಿ ಸುರಿಯಿತು. ಅತ್ತ ನೂತನ ಫ್ರಾಂಚೈಸಿಯಾದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾದ ಆವೇಶ್ ಖಾನ್ 10 ಕೋಟಿ ಪಡೆಯುವ ಮೂಲಕ ಐಪಿಎಲ್ ಹರಾಜಿನಲ್ಲಿ ಅತಿ ದೊಡ್ಡ ಮೊತ್ತ ಪಡೆದ ಅನ್ ಕ್ಯಾಪ್ಡ್ ಪ್ಲೇಯರ್ ಎನಿಸಿಕೊಂಡರು. ಹೀಗೆ ಮೊದಲನೇ ದಿನ ಹಲವಾರು ದಾಖಲೆಯ ಬಿಡ್ಡಿಂಗ್ ನಡೆದರೆ, ಎರಡನೇ ದಿನ ಕೂಡ ಇದೇರೀತಿ ಹಣದ ಮಳೆ ಸುರಿಯುವ ನಿರೀಕ್ಷೆಯಿದೆ.
ಆರ್ಸಿಬಿ ಮೆಗಾ ಹರಾಜು ಪ್ರಕ್ರಿಯೆಯ ಮೊದಲನೇ ದಿನ 11 ಆಟಗಾರರನ್ನು ಹೊಂದಿದೆ. ಸದ್ಯ ಬೆಂಗಳೂರು ಫ್ರಾಂಚೈಸಿ ಬಳಿ 9.25 ಕೋಟಿ ರೂ. ಮೊತ್ತವನ್ನಷ್ಟೆ ಉಳಿಸಿಕೊಂಡಿದೆ. ಆರ್ಸಿಬಿ ಇಂದು ಎರಡನೇ ದಿನದ ಹರಾಜಿನಲ್ಲಿ ಮತ್ತೊಬ್ಬ ಓಪನರ್ ಅನ್ನು ಹುಡುಕಬೇಕಿದೆ, ಹೀಗಾಗಿ ಯಾರನ್ನು ಎಷ್ಟು ಮೊತ್ತಕ್ಕೆ ಖರೀದಿ ಮಾಡ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಈ ಲಿಸ್ಟ್ನಲ್ಲಿ ಪ್ರಮುಖವಾಗಿ ಆ್ಯರೋನ್ ಫಿಂಚ್, ಮಾರ್ನಸ್ ಲ್ಯಾಬುಶೇನ್, ಡೇವಿಡ್ ಮಲನ್, ಇಯಾನ್ ಮಾರ್ಗನ್ ಇದ್ದಾರೆ. ಅಂತೆಯೆ ಅಜಿಂಕ್ಯಾ ರಹಾನೆ, ಕ್ರಿಸ್ ಜೋರ್ಡನ್, ಎವಿನ್ ಲೆವಿಸ್ ಖರೀದಿಸಿದರೆ ಅಚ್ಚರಿ ಪಡಬೇಕಿಲ್ಲ.
ಇಂದಿನ ಹರಾಜಿನಲ್ಲಿ ಕಾಲಿನ್ ಗ್ರ್ಯಾಂಡ್ಹೋಮ್, ಎಸ್. ಶ್ರೀಶಾಂತ್, ಶೆರ್ಫನ್ ರುಥರ್ಫಾರ್ಡ್, ನವ್ದೀಪ್ ಸೈನಿ, ಖಲೀಲ್ ಅಹ್ಮದ್, ಜಯದೇವ್ ಉನಾದ್ಕಟ್, ಇಶಾಂತ್ ಶರ್ಮಾ ಹೀಗೆ ಪ್ರಮುಖ ಆಟಗಾರರಿದ್ದಾರೆ. ಮೊದಲ ದಿನ ಅನ್ಸೋಲ್ಡ್ ಆದ ಸ್ಟಾರ್ ಆಟಗಾರರು ಕೂಡ ಇಂದು ಸೇಲ್ ಆಗುವ ನಿರೀಕ್ಷೆಯಿದೆ. ಇದರಲ್ಲಿ ಡೇವಿಡ್ ಮಿಲ್ಲರ್, ಸುರೇಶ್ ರೈನಾ, ಸ್ಟೀವ್ ಸ್ಮಿತ್, ಶಕಿಬ್ ಅಲ್ ಹಸನ್, ಮೊಹಮ್ಮದ್ ನಬಿ, ಮ್ಯಾಥ್ಯೂ ವೇಡ್, ವೃದ್ದಿಮಾನ್ ಸಾಹ, ಆದಿಲ್ ರಶೀದ್, ಮುಜೀಬ್ ಉರ್ ರೆಹ್ಮಾನ್, ಆ್ಯಡಂ ಝಂಪಾ ಇದ್ದಾರೆ.
IPL 2022 Auction: ಇಂದು ಎರಡನೇ ದಿನದ ಐಪಿಎಲ್ 2022 ಮೆಗಾ ಆಕ್ಷನ್: ದೊಡ್ಡ ಮೊತ್ತದ ಲಿಸ್ಟ್ನಲ್ಲಿ ಯಾರಿದ್ದಾರೆ?