IPL 2022 Auction: ಮೆಗಾ ಹರಾಜಿನಲ್ಲಿ ಮೋಸ: ಹೊಸ ಚರ್ಚೆಗೆ ಕಾರಣವಾದ ವಿಡಿಯೋ

| Updated By: ಝಾಹಿರ್ ಯೂಸುಫ್

Updated on: Feb 16, 2022 | 2:52 PM

IPL 2022 Auction: ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಬಿಡ್ಡಿಂಗ್ 6.50 ಕೋಟಿಗೆ ತಲುಪಿದಾಗ, ಗುಜರಾತ್ ಟೈಟಾನ್ಸ್ 6.75 ಕೋಟಿಗೆ ಬಿಡ್ ಮಾಡಿತು.

IPL 2022 Auction: ಮೆಗಾ ಹರಾಜಿನಲ್ಲಿ ಮೋಸ: ಹೊಸ ಚರ್ಚೆಗೆ ಕಾರಣವಾದ ವಿಡಿಯೋ
IPL 2022 Auction
Follow us on

ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಆಟಗಾರರ ಮೇಲೆ ಸಾಕಷ್ಟು ಹಣದ ಸುರಿಮಳೆಯಾಗಿದೆ. ಹರಾಜಿನಲ್ಲಿ ಒಟ್ಟು 204 ಆಟಗಾರರು ಮಾರಾಟವಾಗಿದ್ದಾರೆ. ಆದರೆ, ಈ ಬಾರಿಯ ಹರಾಜಿನಲ್ಲಿ ಇಂತಹ ಕೆಲವು ಅವಾಂತರಗಳು ನಡೆದಿರುವುದು ಈಗ ಬೆಳಕಿಗೆ ಬಂದಿದೆ. ವಾಷಿಂಗ್ಟನ್ ಸುಂದರ್ ಅವರ ಬಿಡ್ಡಿಂಗ್ ವೇಳೆ ಹರಾಜುದಾರ ಚಾರು ಶರ್ಮಾ ಅವರು ಮಾಡಿದ ತಪ್ಪೊಂದು ಈಗ ಚರ್ಚೆಗೆ ಕಾರಣವಾಗಿದೆ. ಹರಾಜು ನಿರೂಪಕ ಹ್ಯೂಗ್‌ ಎಡ್ಮೀಡ್ಸ್‌ ಅವರ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಿರೂಪಿಸಿದ ಚಾರು ಶರ್ಮಾ ಎರಡು ಬಾರಿ ತಪ್ಪು ಮಾಡಿದ್ದರು ಎಂಬುದು ಇಲ್ಲಿ ಗಮನಾರ್ಹ.

ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಬಿಡ್ಡಿಂಗ್ 6.50 ಕೋಟಿಗೆ ತಲುಪಿದಾಗ, ಗುಜರಾತ್ ಟೈಟಾನ್ಸ್ 6.75 ಕೋಟಿಗೆ ಬಿಡ್ ಮಾಡಿತು. ಇದಾದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸುಂದರ್ ಅವರನ್ನು 7 ಕೋಟಿಗೆ ಬಿಡ್ ಮಾಡಿತು. ಹರಾಜುದಾರ ಚಾರು ಶರ್ಮಾ ಮುಂದಿನ ಬಿಡ್ ಅನ್ನು 7.25 ಕೋಟಿಗೆ ಇಡಬೇಕಾಗಿತ್ತು. ಆದರೆ ಅವರು ನೇರವಾಗಿ 7.75 ಕೋಟಿಗೆ ಬೇಡಿಕೆಯಿಟ್ಟರು. ಅಂದರೆ ಚಾರು ಶರ್ಮಾ ವಾಷಿಂಗ್ಟನ್ ಸುಂದರ್ ಅವರಿಗೆ 50 ಲಕ್ಷ ರೂಪಾಯಿ ಫಾರ್ವರ್ಡ್ ಮಾಡಿದ್ದಾರೆ. ಚಾರು ಶರ್ಮಾ ಮಾಡಿದ ಈ ತಪ್ಪು ಹರಾಜಿನ ವೇಳೆ ಗಮನಕ್ಕೆ ಬಂದಿರಲಿಲ್ಲ. ಆದರೆ ಇದೀಗ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಷ್ಟೇ ಅಲ್ಲದೆ 7.25 ಕೋಟಿಗೆ ಬಿಡ್​ ಮಾಡಬೇಕಾದ ಗುಜರಾತ್ ಟೈಟನ್ಸ್​ 7.75 ಕೋಟಿಗೆ ಬಿಡ್ ಮಾಡಿತು. ಇದಾದ ನಂತರ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್‌ಜೈಂಟ್ಸ್ ನಡುವೆ ಪೈಪೋಟಿ ಏರ್ಪಟ್ಟಿತು. ಅಂತಿಮವಾಗಿ ಸನ್ ರೈಸರ್ಸ್ ಹೈದರಾಬಾದ್ ಈ ಆಲ್ ರೌಂಡರ್ ಆಟಗಾರನನ್ನು 8.75 ಕೋಟಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತು

ಇನ್ನು ಮತ್ತೊಂದು ಬಿಡ್ಡಿಂಗ್​ನಲ್ಲಿ ವೇಗಿ ಖಲೀಲ್ ಅಹ್ಮದ್​ ಅವರಿಗೆ ಮುಂಬೈ ಇಂಡಿಯನ್ಸ್ ಬಿಡ್ ಮಾಡಿದ್ದರೂ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ನೀಡಿರುವುದು ಬೆಳಕಿಗೆ ಬಂದಿದೆ. ಡೆಲ್ಲಿ ಕ್ಯಾಪಿಟಲ್ಸ್ ಖಲೀಲ್ ಅಹ್ಮದ್​ ಅವರಿಗೆ 5 ಕೋಟಿ ಬಿಡ್ ಮಾಡಿತು. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಖಲೀಲ್ ಅಹ್ಮದ್ ಅವರ ಖರೀದಿಗೆ 5.25 ಕೋಟಿಗೆ ಘೋಷಿಸಿತು. ಇನ್ನು 5.50 ಕೋಟಿಗೆ ಖರೀದಿಸಲು ಡೆಲ್ಲಿ ಮುಂದಾದ್ರೂ ಆ ಬಳಿಕ ಹಿಂತೆಗೆದುಕೊಂಡರು. ಅತ್ತ 5.25 ಕೋಟಿಗೆ ಖಲೀಲ್ ಅಹ್ಮದ್ ಮುಂಬೈ ಇಂಡಿಯನ್ಸ್ ಪಾಲಾಗಬೇಕಿತ್ತು. ಆದರೆ ಮುಂಬೈ ಇಂಡಿಯನ್ಸ್ ಬಿಡ್ ಮಾಡಿದ 5.25 ಕೋಟಿಗೆ ಖಲೀಲ್ ಅಹ್ಮದ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್​ಗೆ ನೀಡಲಾಯಿತು. ಇದೀಗ ಈ ಎರಡು ಬಿಡ್ಡಿಂಗ್​ಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(IPL 2022 Auction washington sundar charu sharma controversy video)