ಇಂಡಿಯನ್ ಪ್ರೀಮಿಯರ್ ಲೀಗ್ 2022 (IPL 2022) ಪ್ರಾರಂಭವಾಗುವ ಮೊದಲು ಅಚ್ಚರಿಯ ಬೆಳವಣಿಗೆಗಳಲ್ಲಿ ಸೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ನಾಯಕತ್ವದಿಂದ ಕೆಳಗಿಳಿಯುವುದನ್ನು ಘೋಷಿಸಿದ್ದರು. ಅವರ ನಂತರ ರವೀಂದ್ರ ಜಡೇಜಾ ನಾಯಕತ್ವದ ಜವಾಬ್ದಾರಿ ಹೊತ್ತುಕೊಂಡರು. ನಾಯಕತ್ವದಿಂದ ಕೆಳಗಿಳಿಯುವ ಧೋನಿಯ ನಿರ್ಧಾರದ ನಂತರದ ಮಾತುಕತೆಯ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೆ (Devon Conway) ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಸಿಎಸ್ಕೆ ಟ್ವಿಟರ್ ಖಾತೆಯಲ್ಲಿ ಮಂಗಳವಾರ ಕಾನ್ವೇ ಮಾತನಾಡಿದ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಧೋನಿ ಬಗ್ಗೆ ಹಾಗೂ ರವೀಂದ್ರ ಜಡೇಜ ಬಗ್ಗೆ ಅವರು ಮಾತನಾಡಿದ್ದಾರೆ.
ಡೆವೊನ್ ಕಾನ್ವೆ ತಮ್ಮ ಮಾತಿನಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಆಡಬೇಕು ಎಂಬ ಬಯಕೆ ಇದ್ದಿದ್ದನ್ನು ಹೇಳಿಕೊಂಡಿದ್ದಾರೆ. ಇದನ್ನು ಸ್ವತಃ ಧೋನಿಯ ಬಳಿಯೇ ಕಾನ್ವೆ ಹೇಳಿಕೊಂಡಿದ್ದರಂತೆ. ‘‘ನನಗೆ ಧೋನಿ ನಾಯಕತ್ವದಲ್ಲಿ ಆಡಬೇಕು ಎಂಬ ಆಸೆ ಇತ್ತು. ಇದನ್ನು ಅವರ ಬಳಿ ಹೇಳುತ್ತಾ, ನೀವು ಇದೊಂದು ಸೀಸನ್ನಲ್ಲಿ ನಾಯಕನಾಗಿ ಆಡಬಹುದೇ? ಕಾರಣ, ನಿಮ್ಮ ನಾಯಕತ್ವದ ಅಡಿಯಲ್ಲಿ ನಾನು ಆಡಬೇಕು ಎನ್ನುವ ಆಸೆ ಇದೆ’’ ಎಂದು ಕೋರಿಕೊಂಡಿದ್ದರು ಡೆವೊನ್ ಕಾನ್ವೆ.
ಕಾನ್ವೆ ಪ್ರಶ್ನೆಗೆ ಉತ್ತರಿಸಿದ್ದ ಎಂಎಸ್ ಧೋನಿ, ‘‘ಇಲ್ಲ, ಅದು ಸಾಧ್ಯವಿಲ್ಲ. ಆದರೆ ನಾನು ನಿಮ್ಮ ಸುತ್ತಲೇ ಇರುತ್ತೇನೆ’’ ಎಂದು ಹೇಳಿದ್ದರು. ಕೆಲವು ದಿನಗಳ ಹಿಂದೆ ಜಡೇಜಾ ಹಾಗೂ ಧೋನಿ ಜತೆಗೆ ಕುಳಿತು ಊಟ ಮಾಡಿದ್ದೆ ಎಂದು ಹೇಳಿರುವ ಕಾನ್ವೆ, ಆ ಸಂದರ್ಭದಲ್ಲಿ ಅವರೀರ್ವರನ್ನು ಮತ್ತಷ್ಟು ತಿಳಿಯಲು ಸಾಧ್ಯವಾಯಿತು ಎಂದಿದ್ದಾರೆ.
‘‘ಅವರೀರ್ವರೂ ವಿನಮ್ರರು ಮತ್ತು ಡೌನ್ ಟು ಅರ್ಥ್’’ ಎಂದಿದ್ದಾರೆ ಡೆವೊನ್ ಕಾನ್ವೆ. ಐಪಿಎಲ್ ಇತಿಹಾಸದಲ್ಲಿಯೇ ಧೋನಿ ಅದ್ಭುತ ಆಟಗಾರ ಎಂದೂ ಕಾನ್ವೆ ಬಣ್ಣಿಸಿದ್ದಾರೆ.
ಡೆವೊನ್ ಕಾನ್ವೆ ಮಾತಿನ ವಿಡಿಯೋ ಇಲ್ಲಿದೆ:
?️ Thoughts on Thala ft. Conway!#WhistlePodu #Yellove ?? pic.twitter.com/P6E68s3oXN
— Chennai Super Kings (@ChennaiIPL) March 29, 2022
30 ವರ್ಷದ ಕಿವೀಸ್ ಆಟಗಾರ ಡೆವೊನ್ ಕಾನ್ವೆ ಕೋಲ್ಕತ್ತ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಐಪಿಎಲ್ ಪದಾರ್ಪಣೆ ಮಾಡಿದ್ದರು. ಆದರೆ ಅವರಿಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಕಳೆದ ಬಾರಿಯ ಆರೆಂಜ್ ಕ್ಯಾಪ್ ವಿಜೇತ ರುತುರಾಜ್ ಗಾಯಕ್ವಾಡ್ ಜತೆ ಇನ್ನಿಂಗ್ಸ್ ಆರಂಭಿಸಿದ ಕಾನ್ವೆ 8 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದರು. ಹರಾಜಿನಲ್ಲಿ ಡೆವೊನ್ ಕಾನ್ವೆ ಅವರನ್ನು ಮೂಲಬೆಲೆ 1 ಕೋಟಿ ರೂ ನೀಡಿ ಸಿಎಸ್ಕೆ ಖರೀದಿಸಿತ್ತು. ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ಡೆವೊನ್ ಕಾನ್ವೆ ಹೊಂದಿದ್ದಾರೆ.
ಸಿಎಸ್ಕೆ ಮೊದಲ ಪಂದ್ಯ ಧೋನಿ ಕಮ್ಬ್ಯಾಕ್ ಇನ್ನಿಂಗ್ಸ್ಗೆ ಸಾಕ್ಷಿಯಾಗಿತ್ತು. ಸಂಕಷ್ಟದಲ್ಲಿದ್ದ ತಂಡವನ್ನು ಆಧರಿಸಿದ್ದ ಧೋನಿ, 38 ಎಸೆತಗಳಲ್ಲಿ 50 ರನ್ಗಳಿಸಿದ್ದರು. ಆದರೆ ಚೆನ್ನೈ ತಂಡವು ಆ ಪಂದ್ಯದಲ್ಲಿ ಆರು ವಿಕೆಟ್ಗಳ ಸೋಲನುಭವಿಸಿತ್ತು. ಚೆನ್ನೈ ಮುಂದಿನ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ಜತೆ ಗುರುವಾರ (ಮಾ.31) ಆಡಲಿದೆ.
ಇದನ್ನೂ ಓದಿ:
IPL 2022: ರಾಜಸ್ಥಾನ್ ರಾಯಲ್ಸ್ ಎದುರು ಹೀನಾಯ ಪ್ರದರ್ಶನ; ಬೇಡದ ದಾಖಲೆ ಬರೆದ ಸನ್ರೈಸರ್ಸ್ ಹೈದರಾಬಾದ್