Imran Khan: ನಿವೃತ್ತಿಯಿಂದ ಮರಳಿ ವಿಶ್ವಕಪ್ ಗೆಲುವಿನವರೆಗೆ; ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿಯ ಕ್ರಿಕೆಟ್ ಪಯಣದ ಮೆಲುಕು
Imran Khan Cricket Career: ನಿವೃತ್ತಿಯ ನಂತರ ಮತ್ತೆ ಕ್ರಿಕೆಟ್ಗೆ ಮರಳಿದ್ದ ಇಮ್ರಾನ್ ಖಾನ್ ಪಾಕಿಸ್ತಾನ 1992ರಲ್ಲಿ ವಿಶ್ವಕಪ್ ಗೆಲ್ಲಲು ಪ್ರಮುಖ ಕಾರಣರಾದರು. ತಂಡದ ನಾಯಕರಾಗಿದ್ದ ಅವರು ಕ್ರಿಕೆಟ್ನಲ್ಲಿ ಯಶಸ್ವಿ ಆಟಗಾರನಾಗಿದ್ದರು. ಆದರೆ ಅವರ ರಾಜಕೀಯ ಪಯಣ ಕ್ರಿಕೆಟ್ನಂತಿರಲಿಲ್ಲ!
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ (Imran Khan) ಬಹುಮತ ಕಳೆದುಕೊಂಡಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ವಿಶ್ವಾಸ ಮತ ಯಾಚನೆ ಮಾಡಬೇಕಿದ್ದ ಇಮ್ರಾನ್ ಖಾನ್ರನ್ನು, ಅವರ ಮಿತ್ರಪಕ್ಷಗಳು ಈಗಲೇ ತ್ಯಜಿಸಿವೆ. ಕ್ರಿಕೆಟ್ ಲೋಕದಲ್ಲಿ ಗೆದ್ದು ಬೀಗಿದ ಅವರ ರಾಜಕೀಯ ಜೀವನ ದೊಡ್ಡ ಏರಿಳಿತದಿಂದ ಕೂಡಿದೆ ಎಂದೇ ಹೇಳಬೇಕು. ಪಾಕಿಸ್ತಾನಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಇಮ್ರಾನ್ ಖಾನ್ ಹಲವು ದಾಖಲೆಗಳನ್ನು ಬರೆದವರು. ರಾಜಕೀಯ ಭವಿಷ್ಯದ ತೂಗುಯ್ಯಾಲೆಯ ನಡುವೆ ಇಮ್ರಾನ್ ಖಾನ್ ಕ್ರಿಕೆಟ್ ಲೋಕದಲ್ಲಿ ಗೆದ್ದು ಬೀಗಿದ್ದು ಹೇಗೆ? ಮೊದಲೊಮ್ಮೆ ನಿವೃತ್ತಿ ನೀಡಿದ್ದ ಇಮ್ರಾನ್ ನಂತರ ತಂಡಕ್ಕೆ ಮರಳಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದು ಹೇಗೆ? ಈಗಲೂ ಕ್ರಿಕೆಟ್ ಲೋಕದಲ್ಲಿ ಅವರು ದೊಡ್ಡ ತಾರೆಯಾಗಿ ಉಳಿದುಕೊಂಡಿರುವುದು ಹೇಗೆ? ಈ ಎಲ್ಲಾ ವಿಚಾರಗಳ ಕುರಿತ ಬರಹ ಇಲ್ಲಿದೆ.
ಇಮ್ರಾನ್ ಖಾನ್ ಪಾಕಿಸ್ತಾನ ಕಂಡ ಅತ್ಯಂತ ಯಶಸ್ವಿ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಕಪ್ತಾನನಾಗಿ, ಆಟಗಾರನಾಗಿ ಅವರ ಸಾಧನೆ ಉತ್ತಮವಾಗಿದೆ. 1992ರ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಲಿದೆ ಎಂದೂ ನಿರೀಕ್ಷಿಸಿರಲಿಲ್ಲ. ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಕೀರ್ತಿ ಇಮ್ರಾನ್ಗೆ ಸೇರಬೇಕು.
1987ರಲ್ಲಿ ನಿವೃತ್ತಿ ಘೋಷಿಸಿ ಮತ್ತೆ ಮರಳಿದ್ದ ಇಮ್ರಾನ್:
1971ರಲ್ಲಿ ಇಂಗ್ಲೆಂಡ್ ಎದುರು ಟೆಸ್ಟ್ ಕ್ರಿಕೆಟ್ ಮೂಲಕ ಕ್ರಿಕೆಟ್ ವೃತ್ತಿ ಜೀವನ ಆರಂಭಿಸಿದ್ದ ಇಮ್ರಾನ್ 1974ರಲ್ಲಿ ಏಕದಿನಕ್ಕೆ ಪದಾರ್ಪಣೆ ಮಾಡಿದ್ದರು. 1982ರಲ್ಲಿ ಪಾಕ್ ಕ್ರಿಕೆಟ್ ತಂಡದ ನಾಯಕನಾಗಿ ಇಮ್ರಾನ್ ಆಯ್ಕೆಯಾದರು. 1987ರ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನವು ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ನಲ್ಲಿ ಸೋತಿತ್ತು. 1987ರ ವಿಶ್ವಕಪ್ ನಂತರ ಇಮ್ರಾನ್ ಖಾನ್ ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. 1987ರ ವಿಶ್ವಕಪ್ ನಂತರ ಇಮ್ರಾನ್ ಖಾನ್ ತಮ್ಮ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದರು.
ಆದರೆ ಪಾಕಿಸ್ತಾನದ ಆಗಿನ ಅಧ್ಯಕ್ಷ ಜಿಯಾ ಉಲ್ ಹಕ್ ಇಮ್ರಾನ್ಗೆ ಮತ್ತೆ ಕ್ರಿಕೆಟ್ಗೆ ಮರಳುವಂತೆ ಕೋರಿಕೊಂಡರು. ಅವರ ಮಾತಿನಂತೆ 1988ರ ಜನವರಿಯಲ್ಲಿ ಇಮ್ರಾನ್ ಮತ್ತೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪುನರಾಗಮನ ಮಾಡಿದರು. ತಮ್ಮ ಆಗಮನವನ್ನು ಭರ್ಜರಿಯಾಗಿ ಸಾರಿದ್ದ ಇಮ್ರಾನ್ ವೆಸ್ಟ್ಇಂಡೀಸ್ ಟೂರ್ನಲ್ಲಿ 3 ಟೆಸ್ಟ್ನಲ್ಲಿ 23 ವಿಕೆಟ್ ಉರುಳಿಸಿ ಪಾಕಿಸ್ತಾನಕ್ಕೆ ಸರಣಿ ಗೆದ್ದುಕೊಟ್ಟಿದ್ದರು.
1992ರ ವಿಶ್ವಕಪ್ನಲ್ಲಿ ಪಾಕಿಸ್ತಾನ ಜಯಭೇರಿ ಬಾರಿಸಿತು. ಆಗ 39 ವರ್ಷದವರಾಗಿದ್ದ ಇಮ್ರಾನ್ ವಿಜಯದ ವಿಕೆಟ್ಅನ್ನು ತಾವೇ ಪಡೆದಿದ್ದರು. ಬ್ಯಾಟಿಂಗ್ನಲ್ಲಿ 72 ರನ್ಗಳ ಮೂಲಕ ತಂಡಕ್ಕೆ ಆಧಾರವಾಗಿದ್ದರು. ಈ ಮೂಲಕ ನಿವೃತ್ತಿನ ನಂತರ ಕಮ್ಬ್ಯಾಕ್ ಮಾಡಿ ಪಾಕಿಸ್ತಾನಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಕೀರ್ತಿ ಅವರಿಗೆ ಲಭಿಸಿತು. ನಾಯಕನಾಗಿ ಆಡಿದ ವಿಶ್ವಕಪ್ ಫೈನಲ್ ಪಂದ್ಯವೇ ಇಮ್ರಾನ್ ಕೊನೆಯ ಏಕದಿನ ಪಂದ್ಯವಾಯಿತು. ನಂತರ ಅವರು ನಿವೃತ್ತಿ ಪಡೆದರು.
ಕ್ರಿಕೆಟ್ನಲ್ಲಿ ಇಮ್ರಾನ್ ಖಾನ್ ಹೆಸರಿನಲ್ಲಿ ಹಲವು ದಾಖಲೆಗಳಿವೆ. 300 ಟೆಸ್ಟ್ ವಿಕೆಟ್ ಪಡೆದ ಮೊದಲ ಪಾಕಿಸ್ತಾನಿ ಬೌಲರ್ ಇಮ್ರಾನ್ ಖಾನ್. ಟೆಸ್ಟ್ನಲ್ಲಿ 300 ವಿಕೆಟ್ ಹಾಗೂ 3,000 ರನ್ಗಳಿಸಿದ ಅವರ ಸಾಧನೆ ಕೂಡ ಪಾಕ್ ಕ್ರಿಕೆಟ್ನಲ್ಲಿ ಉನ್ನತ ಸ್ಥಾನ ಪಡೆದಿದೆ. ಭಾರತದಲ್ಲಿ ಪಾಕಿಸ್ತಾನ ಟೆಸ್ಟ್ ಸೀರೀಸ್ ಗೆದ್ದಿರುವುದು ಒಂದೇ ಬಾರಿ, ಆಗ ನಾಯಕರಾಗಿದ್ದವರು ಇಮ್ರಾನ್ ಖಾನ್.
ಇಮ್ರಾನ್ ಖಾನ್ ವಿವಾದಗಳೊಂದಿಗೂ ಗುರುತಿಸಿಕೊಂಡಿದ್ದರು. ಕ್ರಿಕೆಟ್ ವೃತ್ತಿ ಬದುಕಿನ ಆರಂಭಿಕ ದಿನಗಳಲ್ಲಿ ಅಂದರೆ ರಾಷ್ಟ್ರೀಯ ತಂಡಕ್ಕೂ ಆಡುವ ಮುನ್ನ ಅವರು ಬಾಲ್ ಟ್ಯಾಂಪರಿಂಗ್ ಮಾಡಿದ್ದನ್ನು ಹೇಳಿಕೊಂಡಿದ್ದರು. ಇದು ವಿವಾದ ಸೃಷ್ಟಿಸಿತ್ತು.
ಇಮ್ರಾನ್ ರಾಜಕೀಯ ಪ್ರವೇಶ:
1996ರಲ್ಲಿ ಇಮ್ರಾನ್ ಖಾನ್ ತಮ್ಮ ಸ್ವಂತ ಪಕ್ಷ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸ್ಥಾಪಿಸಿದರು. 1997ರ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಇಮ್ರಾನ್, ಎರಡರಲ್ಲೂ ಸೋತಿದ್ದರು. 2002ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾದರು. 2018ರ ಚುನಾವಣೆಯಲ್ಲಿ ಇಮ್ರಾನ್ ನೇತೃತ್ವದ ಪಿಟಿಐ 116 ಕ್ಷೇತ್ರಗಳಲ್ಲಿ ಜಯ ಸಾಧಿಸಿ, ಮಿತ್ರ ಪಕ್ಷಗಳೊಂದಿಗೆ ಅಧಿಕಾರ ಹಿಡಿಯಿತು. ಇಮ್ರಾನ್ ಪ್ರಧಾನಿಯಾದರು.
ಆದರೆ ಇದೀಗ ಆಡಳಿತಾರೂಡ ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯ ಮಿತ್ರಪಕ್ಷ ಮುತ್ತಾಹಿದಾ ಖಯಾಮಿ ಮೂವ್ಮೆಂಟ್ ಪಾಕಿಸ್ತಾನ್, ಪ್ರತಿಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಜೊತೆಗೆ ಮೈತ್ರಿಮಾಡಿಕೊಂಡಿದೆ. ಹೀಗಾಗಿ ಬಹುಮತ ಯಾಚನೆಗೂ ಮುನ್ನವೇ ಇಮ್ರಾನ್ ಸಂಖ್ಯಾಬಲ ಕಳೆದುಕೊಂಡಿದ್ದಾರೆ. ಇಂದು ಅವರು ರಾಜಿನಾಮೆ ಸಲ್ಲಿಸುವ ಸಾಧ್ಯತೆ ಇದೆ.
ಇದನ್ನೂ ಓದಿ:
ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್: ಇಂದು ರಾಜೀನಾಮೆ ಸಾಧ್ಯತೆ
Published On - 11:50 am, Wed, 30 March 22