30-40 ಕಾಶ್ಮೀರಿ ಪಂಡಿತರನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದ ಬಿಟ್ಟಾ ಕರಾಟೆಗೆ ಶಿಕ್ಷೆ ಸನಿಹ?-ಹತ್ಯೆಯಾದ ಸ್ನೇಹಿತನ ಕುಟುಂಬದಿಂದ ಕೋರ್ಟ್ಗೆ ಅರ್ಜಿ
ಭಯೋತ್ಪಾದಕ ಚಟುವಟಿಕೆ ನಡೆಸಿದ ಆರೋಪದಡಿ 1990ರಲ್ಲಿ ಬಿಟ್ಟಾ ಬಂಧನವಾಯಿತು. 2006ರವರೆಗೂ ಆತ ಜೈಲಿನಲ್ಲಿಯೇ ಇದ್ದ. ನಂತರ ಜಾಮೀನು ಪಡೆದು ಹೊರಗೆ ಬಂದಿದ್ದ. ಮತ್ತೆ 2019ರಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಬಂಧಿಸಲ್ಪಟ್ಟ.
ಬಿಟ್ಟಾ ಕರಾಟೆ ಎಂದೇ ಖ್ಯಾತನಾಗಿರುವ ಫಾರೂಕ್ ಅಹ್ಮದ್ ದಾರ್ ಇಂದಿಗೂ ಕೂಡ ಕಾಶ್ಮೀರಿ ಪಂಡಿತರ (Kashmiri Pandits) ಪಾಲಿಗೆ ಭಯ ಹುಟ್ಟಿಸುವ ಹೆಸರು. ಈತನೊಬ್ಬ ಕಾಶ್ಮೀರ ಪ್ರತ್ಯೇಕತಾವಾದಿಯಾಗಿದ್ದವ. 1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯಾಕಾಂಡ, ವಲಸೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವ. ಅದಾದ ಬಳಿಕ ಯಾವುದೇ ನಾಚಿಕೆ, ಪಾಪಪ್ರಜ್ಞೆ ಇಲ್ಲದೆ, ತಾನು 20ಕ್ಕೂ ಹೆಚ್ಚು ಅಂದರೆ ಸುಮಾರು 30-40 ಕಾಶ್ಮೀರಿ ಪಂಡಿತರನ್ನು ಹತ್ಯೆಗೈದಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ. ಅಂದಹಾಗೇ, ಈ ವ್ಯಕ್ತಿ ಮೊದಲು ಕೊಲೆ ಮಾಡಿದ್ದೇ ತನ್ನ ಸ್ನೇಹಿತ, ಕಾಶ್ಮಿರದಲ್ಲಿ ಉದ್ಯಮಿಯಾಗಿದ್ದ ಸತೀಶ್ ಟಿಕೂ ಎಂಬುವರನ್ನು. ಇದೀಗ ಅಂದರೆ ಘಟನೆ ನಡೆದು 31ವರ್ಷಗಳ ಬಳಿಕ ಸತೀಶ್ ಟಿಕೂ ಕುಟುಂಬದವರ ಪರವಾಗಿ ಶ್ರೀನಗರ ಸೆಷನ್ಸ್ ಕೋರ್ಟ್ನಲ್ಲಿ ಬಿಟ್ಟಾ ಕರಾಟೆ ವಿರುದ್ಧ ಕ್ರಿಮಿನಲ್ ಅರ್ಜಿ ಸಲ್ಲಿಕೆಯಾಗಿದ್ದು, ಈತ ವಿಚಾರಣೆ ಎದುರಿಸಬೇಕಾಗಿದೆ. ಈಗಲಾದರೂ ಬಿಟ್ಟಾಗೆ ಶಿಕ್ಷೆಯಾಗಬಹುದಾ ಎಂಬ ನಿರೀಕ್ಷೆ ಹುಟ್ಟಿದೆ. ಈ ಸತೀಶ್ ಟಿಕೂರನ್ನು ಅವರ ಮನೆಯ ಮುಂದೆಯೇ ಬಿಟ್ಟಾ ಕರಾಟೆ ಹತ್ಯೆ ಮಾಡಿದ್ದ.
ಟಿಕೂ ಕುಟುಂಬದ ಪರ ವಕೀಲರಾದ ಉತ್ಸವ್ ಬೇನ್ ಶ್ರೀನಗರ ಸೆಷನ್ಸ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಕಾರ್ಯಕರ್ತರಾದ ವಿಕಾಸ್ ರೈನಾ ಸಂಪೂರ್ಣ ಬೆಂಬಲ ನೀಡಿದ್ದಾರೆ. ಇಂದೇ ವಿಚಾರಣೆಯೂ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ನ ಮುಖ್ಯಸ್ಥನಾಗಿರುವ ಬಿಟ್ಟು ಕರಾಟೆ ಇದೀಗ ಮತ್ತೆ ಮುನ್ನೆಲೆಗೆ ಬರಲು ಕಾರಣವಾಗಿದ್ದು, ಇತ್ತೀಚೆಗೆ ಬಿಡುಗಡೆಯಾಗಿರುವ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ. ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ಬಿಂಬಿಸಿರುವ ಈ ಸಿನಿಮಾ ದೇಶಾದ್ಯಂತ ಸಂಚಲನ ಮೂಡಿಸಿದೆ. ಅದರಲ್ಲಿ ಕರಾಟೆ ಪಾತ್ರವನ್ನು ನಿರ್ವಹಿಸಿದ್ದು, ಚಿನ್ಮಯ್ ಮಂಡ್ಲೇಕರ್. ಬಿಟ್ಟಾ ಕರಾಟೆ ಸಂದರ್ಶನವೊಂದರಲ್ಲಿ ತಾನು ಕಾಶ್ಮೀರಿ ಪಂಡಿತರ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡು, ಬಳಿಕ ನಾನು ಒತ್ತಡಕ್ಕೆ ಮಣಿದು ಹಾಗೆ ಹೇಳಿದ್ದೆ. ಯಾರನ್ನೂ ಕೊಲೆ ಮಾಡಿರಲಿಲ್ಲ ಎಂದು ತೇಪೆಹಚ್ಚಲೂ ಪ್ರಯತ್ನಿಸಿದ್ದ.
1990ರ ಭೀಕರ ನರಮೇಧ
ಕಾಶ್ಮಿರಿ ಪಂಡಿತರ ಹತ್ಯಾಕಾಂಡದ ಬಗ್ಗೆ ದೇಶಕ್ಕೆ ಗೊತ್ತಿದ್ದರೂ, ಸ್ಪಷ್ಟ ಅರಿವು ಕೊಟ್ಟಿದ್ದು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ. ಕಾಶ್ಮೀರಿ ಪಂಡಿತರ ನರಮೇಧ ಶುರುವಾಗಿದ್ದು 1990ರ ಜನವರಿಯಲ್ಲಿ. ಅದರಲ್ಲಿ ಫಾರೂಕ್ ಅಹ್ಮದ್ ದಾರ್ ನೇತೃತ್ವ ವಹಿಸಿದ್ದ. ನಂತರ ಅದೇ ವರ್ಷ ಕೊಟ್ಟ ಸಂದರ್ಶನದಲ್ಲಿಯೇ ತಾನು ಕಾಶ್ಮೀರಿ ಪಂಡಿತರ ಹತ್ಯೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ನಾನು ಮೊದಲು ಕೊಂದಿದ್ದೇ ನನ್ನ ಸ್ನೇಹಿತ ಸತೀಶ್ ಕುಮಾರ್ ಟಿಕೂನನ್ನು. ಅವನೊಬ್ಬ ಹಿಂದು ಹುಡುಗ ಎಂಬ ಕಾರಣಕ್ಕೆ ಕೊಂದಿದ್ದೆ. ನಾನು ಪಿಸ್ತೂಲ್ ಬಳಸಿ, ಕೊಲ್ಲಬೇಕಾದರಿಂದ ಸುಮಾರು 20-30 ಯಾರ್ಡ್ ದೂರದಲ್ಲಿ ನಿಂತು ಗುಂಡು ಹೊಡೆಯುತ್ತಿದ್ದೆ. ನಾನಿಟ್ಟ ಗುರಿ ಎಂದಿಗೂ ತಪ್ಪುತ್ತಿರಲಿಲ್ಲ ಎಂದೂ ಜಂಭದಿಂದ ಹೇಳಿಕೊಂಡಿದ್ದ.
ಭಯೋತ್ಪಾದಕ ಚಟುವಟಿಕೆ ನಡೆಸಿದ ಆರೋಪದಡಿ 1990ರಲ್ಲಿ ಬಿಟ್ಟಾ ಬಂಧನವಾಯಿತು. 2006ರವರೆಗೂ ಆತ ಜೈಲಿನಲ್ಲಿಯೇ ಇದ್ದ. ನಂತರ ಜಾಮೀನು ಪಡೆದು ಹೊರಗೆ ಬಂದಿದ್ದ. ಮತ್ತೆ 2019ರಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ಬಂಧಿಸಲ್ಪಟ್ಟ. ಇದೀಗ ಆತ ಕೋರ್ಟ್ ನಲ್ಲಿ ವಿಚಾರಣೆ ಎದುರಿಸಬೇಕಾಗಿದೆ. 1973ರಲ್ಲಿ ಶ್ರೀನಗರದಲ್ಲಿ ಹುಟ್ಟಿದ ಫಾರೂಕ್ ಅಹ್ಮದ್ ದಾರ್ 20ನೇ ವಯಸ್ಸಿನಲ್ಲಿ ಮನೆ ಬಿಟ್ಟು ಭಯೋತ್ಪಾದಕ ಚಟುವಟಿಕೆಗೆ ಸೇರಿದ. ಕರಾಟೆಯಲ್ಲಿ ತುಂಬ ಪಳಗಿದ್ದ ಕಾರಣದಿಂದ ಬಿಟ್ಟಾ ಕರಾಟೆ ಎಂಬ ಹೆಸರು ಪಡೆದ.
ಇದನ್ನೂ ಓದಿ: ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಪ್ರಭಾಕರ್ ಭಟ್ ಅತಿಥಿ: CFI ಪ್ರತಿಭಟನೆ, ಇಬ್ಬರು ಪೊಲೀಸರ ವಶಕ್ಕೆ
Published On - 11:37 am, Wed, 30 March 22