ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್: ಇಂದು ರಾಜೀನಾಮೆ ಸಾಧ್ಯತೆ

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದ್ದಾರೆ. ಏಪ್ರಿಲ್ ಮೊದಲ ವಾರದಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್​ಖಾನ್ ವಿಶ್ವಾಸಮತ ಯಾಚನೆ ಮಾಡಬೇಕಿತ್ತು.

ಬಹುಮತ ಕಳೆದುಕೊಂಡ ಪಾಕ್ ಪ್ರಧಾನಿ ಇಮ್ರಾನ್ ಖಾನ್: ಇಂದು ರಾಜೀನಾಮೆ ಸಾಧ್ಯತೆ
ಇಮ್ರಾನ್ ಖಾನ್
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 30, 2022 | 10:40 AM

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡಿದ್ದಾರೆ. ವಿಶ್ವಾಸಮತ ಯಾಚನೆಗೆ ಮೊದಲೇ ಪಾಕಿಸ್ತಾನದ ಆಡಳಿತಾರೂಢ ತೆಹ್ರೀಕ್-ಎ-ಇನ್​ಸಾಫ್ (Tehreek-E-Insaf – PTI) ಪಕ್ಷ ಮುಖ್ಯ ಮಿತ್ರಪಕ್ಷ ಮುತ್ತಾಹಿದಾ ಖಯಾಮಿ ಮೂವ್​ಮೆಂಟ್ ಪಾಕಿಸ್ತಾನ್ (Muttahida Qaumi Movement Pakistan – MQMP) ಪ್ರತಿಪಕ್ಷ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (Pakistan People’s Party – PPP) ಜೊತೆಗೆ ಮೈತ್ರಿಮಾಡಿಕೊಂಡಿದೆ. ಏಪ್ರಿಲ್ ಮೊದಲ ವಾರದಲ್ಲಿ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್​ಖಾನ್ ವಿಶ್ವಾಸಮತ ಯಾಚನೆ ಮಾಡಬೇಕಿತ್ತು.

ಇಮ್ರಾನ್ ಖಾನ್ ವಿರುದ್ಧ ಒಗ್ಗೂಡಿರುವ ಪ್ರತಿಪಕ್ಷಗಳು ಎಂಕ್ಯುಎಂ ಜೊತೆಗೆ ಒಪ್ಪಂದ ಮಾಡಿಕೊಂಡಿವೆ. ರಾಬ್ತಾ ಕಮಿಟಿ ಎಂಕ್ಯುಎಂ ಮತ್ತು ಪಿಪಿಪಿ ಸಿಇಸಿಗಳು ಹೊಸ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿವೆ. ಈ ಕುರಿತು ಹೆಚ್ಚಿನ ಮಾಹಿತಿಯನ್ನು ನಾಳೆ ಮಾಧ್ಯಮಗೋಷ್ಠಿಯಲ್ಲಿ ಬಹಿರಂಗಪಡಿಸುತ್ತೇವೆ ಎಂದು ಪಿಪಿಪಿ ಪಕ್ಷದ ನಾಯಕ ಬಿಲಾವಲ್ ಬುಟ್ಟೆ ಜರ್​ದಾರಿ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಪಾಕಿಸ್ತಾನ ಸಂಸತ್ತಿನ ಕೆಳಮನೆಯಲ್ಲಿ ಇಮ್ರಾನ್ ಖಾನ್ ಸರ್ಕಾರ ಬಹುಮತ ಕಳೆದುಕೊಂಡಿದೆ. ಪಾಕಿಸ್ತಾನದ ವಿರೋಧ ಪಕ್ಷಗಳು ರಚಿಸಿಕೊಂಡಿರುವ ಮೈತ್ರಿಕೂಟಕ್ಕೆ 177 ಸದಸ್ಯ ಬಲ ಇದೆ. ಇಮ್ರಾನ್ ಖಾನ್ ನೇತೃತ್ವದ ಆಡಳಿತ ಪಕ್ಷದ ಬಲ 164ಕ್ಕೆ ಕುಸಿದಿದೆ. ಪ್ರಧಾನಿ ವಿರುದ್ಧ ಮಂಡಿಸುವ ವಿಶ್ವಾಸಮತ ಯಾಚನೆಯ ಪ್ರಸ್ತಾವಕ್ಕೆ ಬಲ ಸಿಗಬೇಕಿದ್ದರೆ ಪ್ರತಿಪಕ್ಷಗಳಿಗೆ 172 ಸದಸ್ಯ ಬಲ ಸಾಕು. ಪಾಕಿಸ್ತಾನ ಸಂಸತ್ತಿನ ಒಟ್ಟು ಸದಸ್ಯ ಬಲ 342. ಸರ್ಕಾರ ರಚನೆಗೆ ಬೇಕಿರುವ ಮ್ಯಾಜಿಕ್ ನಂಬರ್ 172.

ಪಾಕಿಸ್ತಾನದ ಯಾವುದೇ ಪ್ರಧಾನಿ ಐದು ವರ್ಷಗಳ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಿಲ್ಲ. ಪಾಕಿಸ್ತಾನದಲ್ಲಿ ಮುಂದಿನ ಮಹಾಚುನಾವಣೆಯು 2023ರಂದು ನಡೆಯಬೇಕಿತ್ತು. ಆದರೆ ಅವಧಿಗೆ ಮೊದಲೇ ಚುನಾವಣೆ ನಡೆಯಬಹುದು ಎಂದು ಗೃಹ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿಯಾಗಿದ್ದರೂ ಅಲ್ಲಿನ ಮಿಲಿಟರಿಯ ಬೆಂಬಲ ಇರುವವರೆಗೆ ಮಾತ್ರ ಅಧಿಕಾರದಲ್ಲಿರುತ್ತಾರೆ. ಇಮ್ರಾನ್ ಖಾನ್​ ಪ್ರಧಾನಿಯಾಗಲು ಸಹ ಅಲ್ಲಿನ ಮಿಲಿಟರಿ ಪ್ರಮುಖ ಪಾತ್ರ ನಿರ್ವಹಿಸಿತ್ತು. ಆಡಳಿತ ಮತ್ತು ರಾಜಕಾರಣದ ಆಂತರಿಕ ವಿಚಾರಗಳಲ್ಲಿ ಅಲ್ಲಿನ ಮಿಲಿಟರಿ ಹಲವು ವರ್ಷಗಳಿಂದ ಮಧ್ಯಪ್ರವೇಶಿಸುತ್ತಿದೆ.

ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ್ದನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರೋಧಿಸಿದ್ದರು. ಇದೀಗ ಮತ್ತೆ ಕಾಶ್ಮೀರದ ವಿಚಾರವನ್ನು ಪಾಕಿಸ್ತಾನದಲ್ಲಿ ಪ್ರಸ್ತಾಪಿಸುತ್ತಿದ್ದಾರೆ. ಪಾಕಿಸ್ತಾನದ ಆಡಳಿತಗಾರರು ಒತ್ತಡದಲ್ಲಿದ್ದಾಗಲೆಲ್ಲಾ ಭಾರತವನ್ನು ದೂರುವ ಮೂಲಕ ತಮ್ಮ ಆಡಳಿತ ಭದ್ರಪಡಿಸಿಕೊಳ್ಳಲು ಯತ್ನಿಸುವುದು ವಾಡಿಕೆಯೇ ಆಗಿದೆ.

ಇದನ್ನೂ ಓದಿ: ಇಮ್ರಾನ್ ಖಾನ್ ಸರ್ಕಾರದಿಂದ ಇಬ್ಬರು ಸದಸ್ಯರ ರಾಜೀನಾಮೆ; ಸರ್ಕಾರ ಉಳಿಸಲು ಖಾನ್ ವಾಮಾಚಾರದ ಮೊರೆ ಹೋಗಿದ್ದಾರೆ ಎಂದ ವಿಪಕ್ಷ

ಇದನ್ನೂ ಓದಿ: Imran Khan ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ; ಮಾರ್ಚ್ 31ರಂದು ನಡೆಯಲಿದೆ ಚರ್ಚೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada