ಇಮ್ರಾನ್ ಖಾನ್ ಸರ್ಕಾರದಿಂದ ಇಬ್ಬರು ಸದಸ್ಯರ ರಾಜೀನಾಮೆ; ಸರ್ಕಾರ ಉಳಿಸಲು ಖಾನ್ ವಾಮಾಚಾರದ ಮೊರೆ ಹೋಗಿದ್ದಾರೆ ಎಂದ ವಿಪಕ್ಷ

ಇಬ್ಬರು ಸದಸ್ಯರ ರಾಜೀನಾಮೆಯೊಂದಿಗೆ ಪ್ರತಿಪಕ್ಷಗಳ ಬಲವು ಈಗ 170 ಕ್ಕೆ ಏರಿದೆ. ಇಮ್ರಾನ್ ಖಾನ್ ಸರ್ಕಾರವನ್ನು ಸೋಲಿಸಲು ಕೇವಲ ಎರಡು ಮತಗಳ ಅಗತ್ಯವಿದೆ.

ಇಮ್ರಾನ್ ಖಾನ್ ಸರ್ಕಾರದಿಂದ ಇಬ್ಬರು ಸದಸ್ಯರ ರಾಜೀನಾಮೆ; ಸರ್ಕಾರ ಉಳಿಸಲು ಖಾನ್ ವಾಮಾಚಾರದ ಮೊರೆ ಹೋಗಿದ್ದಾರೆ ಎಂದ ವಿಪಕ್ಷ
ಇಮ್ರಾನ್ ಖಾನ್​
Follow us
| Updated By: ರಶ್ಮಿ ಕಲ್ಲಕಟ್ಟ

Updated on:Mar 29, 2022 | 7:38 PM

ಮಂಗಳವಾರ ಇಬ್ಬರು ಶಾಸಕರು ಪಾಕಿಸ್ತಾನದ (Pakistan) ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರ ಆಡಳಿತಾರೂಢ ಮೈತ್ರಿಕೂಟವನ್ನು ತೊರೆದಿದ್ದಾರೆ. ಇಮ್ರಾನ್ ಖಾನ್ ಅವಿಶ್ವಾಸ ನಿರ್ಣಯ (no-confidence vote)ಎದುರಿಸಲು ಇನ್ನೆರಡು ದಿನಗಳು ಬಾಕಿ ಇರುವಾಗಲೇ ಇಬ್ಬರು ಶಾಸಕರು ಖಾನ್ ಸರ್ಕಾರವನ್ನು ತೊರೆದು ವಿಪಕ್ಷ ಸೇರಿದ್ದಾರೆ. ಫೈಸಲಾಬಾದ್‌ನ ಪಿಟಿಐ ಸಂಸದೀಯ ಕಾರ್ಯದರ್ಶಿ ಅಸಿಮ್ ನಜೀರ್ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದು ಪಾಕಿಸ್ತಾನ್ ಮುಸ್ಲಿಂ ಲೀಗ್ (ನವಾಜ್) ಗೆ ಸೇರಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ. ಮತ್ತೊಂದು ಬೆಳವಣಿಗೆಯಲ್ಲಿ ಬಲೂಚಿಸ್ತಾನದ ಸ್ವತಂತ್ರ ಸದಸ್ಯ ಅಸ್ಲಾಂ ಭೂತಾನಿ ಕೂಡ ಆಡಳಿತ ಮೈತ್ರಿಕೂಟವನ್ನು ತೊರೆದು ಈಗ ವಿರೋಧ ಪಕ್ಷದ ಪರ ಮತ ಹಾಕಲಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ. ಅವರು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಭೇಟಿಯಾದ ನಂತರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.  ಸೋಮವಾರ ಕೇಂದ್ರ ಸಚಿವ ತಾರಿಕ್ ಬಶೀರ್ ಚೀಮಾ ಅವರು ಸರ್ಕಾರವನ್ನು ತೊರೆದು ವಿರೋಧ ಪಕ್ಷಕ್ಕೆ ಸೇರಿದರು. ಐದು ಸದಸ್ಯರನ್ನು ಹೊಂದಿರುವ ಪ್ರಮುಖ ಪಿಟಿಐ ಮಿತ್ರ ಬಲೂಚಿಸ್ತಾನ್ ಅವಾಮಿ ಪಕ್ಷ ಕೂಡ ವಿರೋಧ ಪಕ್ಷಕ್ಕೆ ಸೇರುವುದಾಗಿ ಘೋಷಿಸಿತು.  ಇಬ್ಬರು ಸದಸ್ಯರ ರಾಜೀನಾಮೆಯೊಂದಿಗೆ ಪ್ರತಿಪಕ್ಷಗಳ ಬಲವು ಈಗ 170 ಕ್ಕೆ ಏರಿದೆ. ಇಮ್ರಾನ್ ಖಾನ್ ಸರ್ಕಾರವನ್ನು ಸೋಲಿಸಲು ಕೇವಲ ಎರಡು ಮತಗಳ ಅಗತ್ಯವಿದೆ. ಸೋಮವಾರ, ಪಿಎಂಎಲ್-ಕ್ಯೂ ಬೆಂಬಲವನ್ನು ಪಡೆಯುವ ಪ್ರಯತ್ನದಲ್ಲಿ ಆಡಳಿತಾರೂಢ ಪಿಟಿಐ ತನ್ನ ನಾಯಕ ಚೌಧರಿ ಪರ್ವೈಜ್ ಇಲಾಹಿ ಅವರನ್ನು ಪಂಜಾಬ್‌ನ ಮುಖ್ಯಮಂತ್ರಿ ಎಂದು ಘೋಷಿಸಿತು.

ತಮ್ಮ ಸರ್ಕಾರವನ್ನು ಉಳಿಸುವ ಪ್ರಯತ್ನದಲ್ಲಿ ಹತಾಶರಾಗಿರುವ ಇಮ್ರಾನ್ ಖಾನ್ ಈಗ ವಾಮಾಚಾರವನ್ನು ಆಶ್ರಯಿಸಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಪಿಎಂಎಲ್-ಎನ್ ಅಧ್ಯಕ್ಷ ಶೆಹಬಾಜ್ ಷರೀಫ್ ಪಾಕಿಸ್ತಾನದ ಸುದ್ದಿ ವಾಹಿನಿ ಆಜ್ ನ್ಯೂಸ್‌ನೊಂದಿಗೆ ಮಾತನಾಡುತ್ತಾ ಇಮ್ರಾನ್ ಖಾನ್ ಅವರ ಬನಿ ಗಾಲಾ ನಿವಾಸದಲ್ಲಿ ಅವರ ಸರ್ಕಾರವನ್ನು ಉಳಿಸಲು ಟನ್‌ಗಳಷ್ಟು ಕೋಳಿಗಳನ್ನು ಸುಡಲಾಗುತ್ತಿದೆ ಎಂದು ಆರೋಪಿಸಿದರು.

“ಬಡವರು ಹಸಿವಿನಿಂದ ಬಳಲುತ್ತಿದ್ದಾರೆ, ಅವರಿಗೆ ಆಹಾರ ಸಿಗುತ್ತಿಲ್ಲ. ಇಲ್ಲಿ ಬಾನಿ ಗಾಲಾದಲ್ಲಿ ಟನ್‌ಗಟ್ಟಲೆ ಮಾಂಸವನ್ನು ಸುಡಲಾಗುತ್ತಿದೆ. ನಾನು ಇದನ್ನು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ” ಎಂದು ಪಿಎಂಎಲ್-ಎನ್ ನಾಯಕ ಹೇಳಿದರು.

ಪ್ರಧಾನಿ ನಿವಾಸದಲ್ಲಿ ವಾಮಾಚಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ ಶರೀಫ್ ಮಾತ್ರವಲ್ಲ. ಅವರ ಸೋದರ ಸೊಸೆ ಮರ್ಯಮ್ ನವಾಜ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ಇಮ್ರಾನ್ ಸರ್ಕಾರವನ್ನು ಉಳಿಸಲು ಬನಿಗಾಲದಲ್ಲಿ ವಾಮಾಚಾರ ನಡೆಯುತ್ತಿದೆ ಎಂದು ನಮಗೆ ತಿಳಿದಿದೆ ಆದರೆ ಅದು ಸಹ ಸಹಾಯ ಮಾಡುವುದಿಲ್ಲ ಎಂದು ಮರ್ಯಮ್ ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ಅವರ ಮೂರನೇ ಪತ್ನಿ ಬುಶ್ರಾ ಮೇನಕಾ ತನ್ನನ್ನು ಪೀರ್ ಅಥವಾ ನಂಬಿಕೆಯಿಂದ ಗುಣಪಡಿಸುವವರು ಎಂದು ಕರೆದುಕೊಳ್ಳುತ್ತಾರೆ. ಪಿಟಿಐ ಮುಖ್ಯಸ್ಥರು ಅಧಿಕಾರಕ್ಕೆ ಬರುವ ಒಂದು ವರ್ಷದ ಮೊದಲು ಆಧ್ಯಾತ್ಮಿಕ ಸಲಹೆಗಾಗಿ ಅವರನ್ನು ಭೇಟಿ ಮಾಡಲು ಪ್ರಾರಂಭಿಸಿದ್ದರು. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಆಕೆಯ ಭವಿಷ್ಯ ನಿಜವಾದ ನಂತರ ಇಬ್ಬರೂ ಹತ್ತಿರವಾಗಿದ್ದಾರೆ. ದಂಪತಿ 2018 ರಲ್ಲಿ ವಿವಾಹವಾದರು.

ಇದನ್ನೂ ಓದಿ: Opinion ದೇವಸ್ಥಾನದಲ್ಲಿ ಪ್ರದರ್ಶನ ನೀಡುವುದಕ್ಕೆ ಭರತನಾಟ್ಯ ಕಲಾವಿದೆಗೆ ತಡೆ; ಕಲೆಗಳು ಅಸ್ತಿತ್ವದ ಉನ್ನತ ಸ್ಥಿತಿ ಅನುಭವಿಸಲಿರುವ ಮಾರ್ಗ, ನಾವು ಅದನ್ನು ದ್ವೇಷಿಸಬಾರದು

Published On - 7:34 pm, Tue, 29 March 22