IPL 2022: ಐಪಿಎಲ್​​ನಲ್ಲಿಂದು ಡಬಲ್ ಧಮಾಕ: ಶುಭಾರಂಭ ಮಾಡುವುದೇ ಆರ್​ಸಿಬಿ?, ರೋಹಿತ್ ಮೇಲೆ ಎಲ್ಲರ ಕಣ್ಣು

| Updated By: Vinay Bhat

Updated on: Mar 27, 2022 | 9:00 AM

DC vs MI and PBKS vs RCB: ಐಪಿಎಲ್ 2022 ರಲ್ಲಿ ಇಂದು ಒಟ್ಟು ಎರಡು ರಣರೋಚಕ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಇಂದು ನಡೆಯಲಿರುವ ದ್ವಿತೀಯ ಕದನದಲ್ಲಿ ಪಂಜಾಬ್ ಕಿಂಗ್ಸ್​ ಹಾಗೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮುಖಾಮುಖಿ ಆಗಲಿದೆ.

IPL 2022: ಐಪಿಎಲ್​​ನಲ್ಲಿಂದು ಡಬಲ್ ಧಮಾಕ: ಶುಭಾರಂಭ ಮಾಡುವುದೇ ಆರ್​ಸಿಬಿ?, ರೋಹಿತ್ ಮೇಲೆ ಎಲ್ಲರ ಕಣ್ಣು
DC vs MI and PBKS vs RCB IPL 2022
Follow us on

ಐಪಿಎಲ್ ಪ್ರಿಯರಿಗೆ ಇಂದು ಹಬ್ಬವೋ ಹಬ್ಬ. ಯಾಕೆಂದರೆ ಭಾನುವಾರ ಐಪಿಎಲ್ 2022 ರಲ್ಲಿ (IPL 2022) ಒಟ್ಟು ಎರಡು ರಣರೋಚಕ ಪಂದ್ಯ ನಡೆಯಲಿದೆ. ಮುಂಬೈನ ಬ್ರಬೌರ್ನ್ ಸ್ಟೇಡಿಯಂನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವನ್ನು ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (DC vs MI) ಮೊದಲ ಪಂದ್ಯದಲ್ಲಿ ಎದುರಿಸಲಿದೆ. ಇಂದು ನಡೆಯಲಿರುವ ದ್ವಿತೀಯ ಕದನದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕನಾಗಿರುವ ಪಂಜಾಬ್ ಕಿಂಗ್ಸ್​ ಹಾಗೂ ಫಾಫ್ ಡುಪ್ಲೆಸಿಸ್ ಮುಂದಾಳತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (PBKS vs RCB) ಮುಖಾಮುಖಿ ಆಗಲಿದೆ. ಇದು ಮುಂಬೈಯ ಡಾ. ಡಿವೈ ಪಾಟಿಲ್ ಸ್ಫೋರ್ಟ್ಸ್​ ಅಕಾಡೆಮಿಯಲ್ಲಿ ಆಯೋಜಿಸಲಾಗಿದೆ. ನಾಲ್ಕು ತಂಡಗಳು ಸ್ಟಾರ್ ಆಟಗಾರರಿಂದ ತುಂಬಿ ಬಲಿಷ್ಠವಾಗಿದ್ದು ಹೈವೋಲ್ಟೇಜ್ ಪಂದ್ಯ ನಿರೀಕ್ಷಿಸಲಾಗಿದೆ. ಅದರಲ್ಲೂ ನೂತನ ನಾಯಕನೊಂದಿಗೆ ಕಣಕ್ಕಿಳಿಯಲು ತಯಾರಾಗಿರುವ ಆರ್​ಸಿಬಿ ಶುಭಾರಂಭ ಮಾಡುತ್ತಾ ಎಂಬುದು ನೋಡಬೇಕಿದೆ.

ಆರ್​ಸಿಬಿ vs ಪಂಜಾಬ್:

ಇತ್ತಂಡಗಳೂ ನೂತನ ನಾಯಕರ ನಾಯಕತ್ವದಲ್ಲಿ ಕಣಕ್ಕಿಳಿಯುತ್ತಿವೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ನೂತನ ನಾಯಕ ಫಾಫ್ ಡುಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದರೆ, ಪಂಜಾಬ್ ಕಿಂಗ್ಸ್ ನೂತನ ನಾಯಕ ಮಯಾಂಕ್ ಅಗರ್ವಾಲ್ ಸಾರಥ್ಯದಲ್ಲಿ ಆಡಲಿದೆ. ಮೇಲ್ನೋಟಕ್ಕೆ ಬೆಂಗಳೂರು ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣುತ್ತಿದೆ. ಏಕೆಂದರೆ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು ಮುನ್ನಡೆಸಿದ ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಆಡಿದ ಅನುಭವ ಫಫ್ ಬೆನ್ನಿಗೆ ಇದೆ. ಅಲ್ಲದೇ ತಂಡದಲ್ಲಿ ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಅನುಭವಿ ಬ್ಯಾಟರ್‌ಗಳಿದ್ಧಾರೆ.  ಮಧ್ಯಮವೇಗಿ ಮೊಹಮ್ಮದ್ ಸಿರಾಜ್, ಹೋದ ಸಲ ಅತಿ ಹೆಚ್ಚು ವಿಕೆಟ್ ಗಳಿಸಿದ ಬೌಲರ್ ಹರ್ಷಲ್ ಪಟೇಲ್ ಮತ್ತು ಜೋಷ್ ಹ್ಯಾಜಲ್‌ವುಡ್ ಇರುವುದು ಬೌಲಿಂಗ್ ಬಲ ಹೆಚ್ಚಿಸಿದೆ. ಶ್ರೀಲಂಕಾದ ಲೆಗ್‌ಬ್ರೇಕ್ ಬೌಲರ್ ವಣಿಂದು ಹಸರಂಗಾ ಕೂಡ ಇದ್ದಾರೆ.

ಇತ್ತ ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಪಂದ್ಯಕ್ಕೆ ಪ್ರಮುಖ ವಿದೇಶಿಗರ ಅನುಪಸ್ಥಿತಿ ಕಾಡಲಿದೆ. ಜಾನಿ ಬೇರ್‌ಸ್ಟೋ, ಕಗಿಸೊ ರಬಾಡ ಆರಂಭಿಕ ಪಂದ್ಯಕ್ಕೆ ಅಲಭ್ಯರಾಗುತ್ತಿದ್ದಾರೆ. ನಾಯಕ ಮಾಯಂಕ್ ಹಾಗೂ ಅನುಭವಿ ಶಿಖರ್ ಧವನ್ ಅತ್ಯುತ್ತಮ ಆರಂಭಿಕ ಜೋಡಿಯಾಗಿದ್ದು, ಆರ್‌ಸಿಬಿಯನ್ನು ಕಾಡಬಹುದು. ಅಲ್ಲದೆ, ಶಾರುಖ್ ಖಾನ್ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬಲ್ಲರು. ರಾಹುಲ್ ಚಹಾರ್, ನಾಥನ್ ಎಲ್ಲಿಸ್ ಬೌಲಿಂಗ್ ಮೋಡಿ ಮಾಡುತ್ತಾ ನೋಡಬೇಕಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಇದುವರೆಗೂ ಐಪಿಎಲ್ ಇತಿಹಾಸದಲ್ಲಿ ಒಟ್ಟು 28 ಪಂದ್ಯಗಳು ನಡೆದಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು 13 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ, ಪಂಜಾಬ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಇತ್ತಂಡಗಳ ನಡುವಿನ ಮುಖಾಮುಖಿ ಹಣಾಹಣಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂಜಾಬ್ ಕಿಂಗ್ಸ್ ಮೇಲುಗೈ ಸಾಧಿಸಿದೆ.

ಡೆಲ್ಲಿ vs ಮುಂಬೈ:

ಇನ್ನು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ 2020ರ ರನ್ನರ್‌ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಭಾನುವಾರದ ಮೊದಲ ಪಂದ್ಯದಲ್ಲಿ ಎದುರಾಗಲಿವೆ. ಭಾರತದ ಮೂರೂ ಮಾದರಿಯ ತಂಡದ ನಾಯಕ ರೋಹಿತ್ ಶರ್ಮ ಹಾಗೂ ಭವಿಷ್ಯದ ನಾಯಕ ಎಂದೇ ಗುರುತಿಸಿಕೊಂಡಿರುವ ರಿಷಭ್ ಪಂತ್ ನಡುವಿನ ಕದನ ಕುತೂಹಲ ಕೆರಳಿಸಿದೆ. ಮೆಗಾ ಹರಾಜಿನ ದುಬಾರಿ ಆಟಗಾರ ಇಶಾನ್ ಕಿಶನ್ (15.25 ಕೋಟಿ ರೂ) ಮುಂಬೈ ತಂಡದ ಕೇಂದ್ರಬಿಂದುವಾಗಿದ್ದಾರೆ. ರೋಹಿತ್ ಮತ್ತು ಇಶಾನ್ ಇನಿಂಗ್ಸ್ ಆರಂಭಿಸಲಿದ್ದಾರೆ. ಆದರೆ ಸೂರ್ಯಕುಮಾರ್ ಯಾದವ್ ಗಾಯಗೊಂಡಿರುವುದರಿಂದ ಈ ಪಂದ್ಯದಲ್ಲಿ ಕಣಕ್ಕಿಳಿಯುವುದಿಲ್ಲ. ಅವರ ಜಾಗದಲ್ಲಿ ಫ್ಯಾಬಿಯನ್ ಅಲೆನ್ ಆಡುವುದು ಬಹುತೇಕ ಖಚಿತವಾಗಿದೆ. ಬ್ಯಾಟಿಂಗ್‌ನಲ್ಲಿ ಕೀರನ್ ಪೊಲಾರ್ಡ್ ಬಿಟ್ಟರೆ ಉಳಿದವರೆದಲ್ಲರೂ ಹೊಸಬರೇ ಆಗಿದ್ದಾರೆ. ವೇಗಿ ಜಸ್‌ಪ್ರೀತ್ ಬೂಮ್ರಾ ಬೌಲಿಂಗ್ ಪಡೆಯ ಸಾರಥ್ಯ ವಹಿಸುವರು. ಅವರೊಂದಿಗೆ ಜಯದೇವ್ ಉನದ್ಕತ್ ಜೊತೆಗೂಡುವರು.

ಡೆಲ್ಲಿ ತಂಡಕ್ಕೆ ಡೇವಿಡ್ ವಾರ್ನರ್ ಅವರು ಇನ್ನೂ ಕೂಡಿಕೊಂಡಿಲ್ಲ. ಆದ್ದರಿಂದ ರಿಷಭ್ ಮತ್ತು ಪೃಥ್ವಿ ಶಾ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. 19 ವಯೋಮಿತಿ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಯಶ್ ಧುಲ್ ಐಪಿಎಲ್‌ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಅನುಭವಿಗೆ ಅವಕಾಶ ನೀಡಿದರೆ ಸರ್ಫರಾಜ್ ಖಾನ್ ಅವಕಾಶ ಪಡೆಯಬಹುದು. ಅನ್ರಿಚ್ ನೋಕಿಯ ಬರುವವರೆಗೂ ಖಲೀಲ್ ಅಹ್ಮದ್, ಸಕಾರಿಯಾ, ಶಾರ್ದೂಲ್ ಠಾಕೂರ್ ಹೆಚ್ಚಿನ ಜವಾಬ್ದಾರಿ ನಿಭಾಯಿಸಬೇಕಿದೆ. ಶಾರ್ದೂಲ್, ಅಕ್ಷರ್ ಪಟೇಲ್ ಜತೆಗೂಡಿ ಫಿನಿಷರ್ ಸ್ಥಾನವನ್ನೂ ತುಂಬಬೇಕಿದೆ.

ಐಪಿಎಲ್ ಇತಿಹಾಸದಲ್ಲಿ, ಎರಡೂ ತಂಡಗಳು ಒಟ್ಟು 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಅದರಲ್ಲಿ 14 ಪಂದ್ಯಗಳನ್ನು ಡೆಲ್ಲಿ ಕ್ಯಾಪಿಟಲ್ಸ್ (ಹಿಂದಿನ ಡೆಲ್ಲಿ ಡೇರ್‌ಡೆವಿಲ್ಸ್) ಗೆದ್ದಿದೆ. ಉಳಿದ 16 ಮುಂಬೈ ಇಂಡಿಯನ್ಸ್ ಗೆದ್ದಿದೆ.

India vs South Africa Women: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ ಭರ್ಜರಿ ಆರಂಭ: ಶಫಾಲಿ ಅರ್ಧಶತಕ

CSK vs KKR, IPL 2022: ಭವಿಷ್ಯದ ನಾಯಕನ ಬೊಂಬಾಟ್ ಕ್ಯಾಪ್ಟನ್ಸಿ: ಜಡೇಜಾಗೆ ಮೊದಲ ಪಂದ್ಯದಲ್ಲೇ ಹಿನ್ನಡೆ