Updated on: May 25, 2022 | 5:10 PM
ಐಪಿಎಲ್ನಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ಗುಜರಾತ್ ಟೈಟಾನ್ಸ್ ತಂಡವು ತನ್ನ ಮೊದಲ ಸೀಸನ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಮಂಗಳವಾರ ರಾತ್ರಿ ನಡೆದ ಐಪಿಎಲ್ 2022 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸುವ ಮೂಲಕ ಗುಜರಾತ್ ಫೈನಲ್‌ಗೆ ಎಂಟ್ರಿಕೊಟ್ಟಿತು. ವಿಶೇಷ ಎಂದರೆ ಗುಜರಾತ್ ಟೈಟಾನ್ಸ್ ತಂಡವು ಈ ಪಂದ್ಯದಲ್ಲೂ ಗೆದ್ದಿರುವುದು ಕೊನೆಯ ಓವರ್‌ನಲ್ಲಿ. ಈ ಮೂಲಕ ಇದೀಗ ಐಪಿಎಲ್ ಇತಿಹಾಸದಲ್ಲೇ ಹಾರ್ದಿಕ್ ಪಾಂಡ್ಯ ಪಡೆ ಹೊಸ ದಾಖಲೆ ಬರೆದಿದೆ.
ರಾಜಸ್ಥಾನ್ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಗುಜರಾತ್ ತಂಡಕ್ಕೆ 6 ಎಸೆತಗಳಲ್ಲಿ 16 ರನ್ ಬೇಕಿತ್ತು. ಈ ವೇಳೆ ಪ್ರಸಿದ್ದ್ ಕೃಷ್ಣ ಎಸೆತದಲ್ಲಿ ಸತತ ಮೂರು ಸಿಕ್ಸ್ ಸಿಡಿಸುವ ಮೂಲಕ ಡೇವಿಡ್ ಮಿಲ್ಲರ್ ಟೈಟಾನ್ಸ್ ತಂಡಕ್ಕೆ ಜಯ ತಂದುಕೊಟ್ಟರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಸೀಸನ್ವೊಂದರಲ್ಲಿ ಅತೀ ಹೆಚ್ಚು ಬಾರಿ ಕೊನೆಯ ಓವರ್‌ನಲ್ಲಿ ಚೇಸ್ ಮಾಡಿ ಗೆದ್ದ ತಂಡ ಎಂಬ ದಾಖಲೆ ಗುಜರಾತ್ ಟೈಟಾನ್ಸ್ ಪಾಲಾಗಿದೆ. ಈ ಸೀಸನ್‌ನಲ್ಲಿ ಗುಜರಾತ್ ಟೈಟಾನ್ಸ್ ಏಳು ಪಂದ್ಯಗಳನ್ನು ಕೊನೆಯ ಓವರ್‌ನಲ್ಲಿ ಗೆದ್ದಿದೆ. ಈ ಮೂಲಕ ಅತ್ಯಧಿಕ ಬಾರಿ ಅಂತಿಮ ಓವರ್‌ನಲ್ಲಿ ಗುರಿ ಬೆನ್ನಟ್ಟಿ ಗೆದ್ದ ತಂಡ ಎಂಬ ದಾಖಲೆ ಹಾರ್ದಿಕ್ ಪಾಂಡ್ಯಪಡೆಯ ಪಾಲಾಗಿದೆ.
ಇದಕ್ಕೂ ಮುನ್ನ ಈ ದಾಖಲೆ ಚೆನ್ನೈ ಸೂಪರ್ ಕಿಂಗ್ಸ್ ಹೆಸರಿನಲ್ಲಿತ್ತು. ಚೆನ್ನೈ ಸೂಪರ್ ಕಿಂಗ್ಸ್ 2018 ರ ಸೀಸನ್‌ನಲ್ಲಿ ಐದು ಬಾರಿ ಕೊನೆಯ ಓವರ್‌ನಲ್ಲಿ ಗುರಿಯನ್ನು ಬೆನ್ನಟ್ಟಿ ಗೆದ್ದಿತು. ಇದೀಗ ಸಿಎಸ್ಕೆ ದಾಖಲೆಯನ್ನು ಮುರಿದು ಗುಜರಾತ್ ಟೈಟಾನ್ಸ್ ಚೊಚ್ಚಲ ಸೀಸನ್ನಲ್ಲೇ ಹೊಸ ಇತಿಹಾಸ ಬರೆದಿದೆ.
ಇನ್ನು ಈ ಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಮೂರನೇ ಸ್ಥಾನದಲ್ಲಿದ್ದು, 2019 ರ ಸೀಸನ್‌ನಲ್ಲಿ ರಾಜಸ್ಥಾನ ಐದು ಬಾರಿ ಕೊನೆಯ ಓವರ್‌ನಲ್ಲಿ ಜಯ ಸಾಧಿಸಿತ್ತು.
ಇದೀಗ ರಾಜಸ್ಥಾನ್ ರಾಯಲ್ಸ್ ವಿರುದ್ದವೇ ಕೊನೆಯ ಓವರ್‌ನಲ್ಲಿ ಗೆಲ್ಲುವ ಮೂಲಕ ಗುಜರಾತ್ ಟೈಟಾನ್ಸ್ ತಂಡ ಹೊಸ ದಾಖಲೆಯೊಂದಿಗೆ ಫೈನಲ್‌ಗೆ ಪ್ರವೇಶಿಸಿರುವುದು ವಿಶೇಷ. ಇನ್ನು ಈ ಪಂದ್ಯದಲ್ಲಿ ಸೋತಿರುವ ರಾಜಸ್ಥಾನ್ ರಾಯಲ್ಸ್ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ.