IPL 2022: ಐಪಿಎಲ್ನ 26ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ (MI vs LSG) ವಿರುದ್ದ 18 ರನ್ಗಳಿಂದ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಈ ಬಾರಿಯ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಸತತ 6 ಪಂದ್ಯಗಳಲ್ಲಿ ಪರಾಜಯಗೊಂಡಿದೆ. ಲಕ್ನೋ ವಿರುದ್ದದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಚೇಸಿಂಗ್ ಮೂಲಕ ಗೆಲ್ಲುವ ತಂತ್ರಕ್ಕೆ ಮುಂದಾಗಿದ್ದ ಹಿಟ್ಮ್ಯಾನ್ ಪ್ಲ್ಯಾನ್ ಈ ಬಾರಿ ಕೂಡ ಫಲ ನೀಡಲಿಲ್ಲ. ಏಕೆಂದರೆ ಲಕ್ನೋ ತಂಡದ ನಾಯಕ ಕೆಎಲ್ ರಾಹುಲ್ (KL Rahul) ಅಧ್ಬುತವಾಗಿ ಬ್ಯಾಟ್ ಬೀಸಿದ್ದರು. ಅಷ್ಟೇ ಅಲ್ಲದೆ ಶತಕ ಬಾರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. 60 ಎಸೆತಗಳನ್ನು ಎದುರಿಸಿದ ಕೆಎಲ್ ರಾಹುಲ್ ಅಂತಿಮವಾಗಿ 103 ರನ್ಗಳಿಸಿ ಔಟಾದರು. ಈ ಭರ್ಜರಿ ಇನಿಂಗ್ಸ್ನಲ್ಲಿ ರಾಹುಲ್ ಬ್ಯಾಟ್ನಿಂದ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳು ಮೂಡಿಬಂದಿತ್ತು.
ನಾಯಕನ ಈ ಶತಕದ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿದೆ. 200 ರನ್ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 16 ಆಗಿದ್ದ ವೇಳೆ ರೋಹಿತ್ ಶರ್ಮಾ (6) ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಇಶಾನ್ ಕಿಶನ್ (13) ಕೂಡ ನಿರ್ಗಮಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಡೆವಾಲ್ಡ್ ಬ್ರೆವಿಸ್ (31) ಹಾಗೂ ಸೂರ್ಯಕುಮಾರ್ ಯಾದವ್ (37) ಉತ್ತಮವಾಗಿ ಬ್ಯಾಟ್ ಬೀಸಿದರೂ ಉಳಿದ ಆಟಗಾರರಿಂದ ನಿರೀಕ್ಷಿತ ಆಟ ಮೂಡಿ ಬಂದಿರಲಿಲ್ಲ. ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 181 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 18 ರನ್ಗಳ ಜಯ ಸಾಧಿಸಿತು.
ಈ ಸೋಲಿನೊಂದಿಗೆ ಐಪಿಎಲ್ ಇತಿಹಾಸದಲ್ಲಿ ಮೊದಲ 6 ಪಂದ್ಯಗಳನ್ನು ಸತತವಾಗಿ ಸೋತ ತಂಡಗಳ ಪಟ್ಟಿಗೆ ಮುಂಬೈ ಇಂಡಿಯನ್ಸ್ ಕೂಡ ಸೇರ್ಪಡೆಯಾಗಿದೆ. ಕಳೆದ 14 ಸೀಸನ್ ಐಪಿಎಲ್ನಲ್ಲಿ ಕೇವಲ 2 ತಂಡಗಳು ಮಾತ್ರ ಮೊದಲ 6 ಪಂದ್ಯಗಳನ್ನು ಸೋತು ಹೀನಾಯ ದಾಖಲೆ ಬರೆದಿತ್ತು. ಇಂತಹ ಅತ್ಯಂತ ಕೆಟ್ಟ ದಾಖಲೆ ಬರೆದ ಮೊದಲ ತಂಡವೆಂದರೆ ಡೆಲ್ಲಿ ಡೇರ್ ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್). 2013 ರಲ್ಲಿ ಡೆಲ್ಲಿ ತಂಡವು ಮೊದಲ 6 ಪಂದ್ಯಗಳನ್ನು ಸೋತು ಹೀನಾಯ ದಾಖಲೆ ಬರೆದಿತ್ತು.
ಇದಾದ ಬಳಿಕ 2019 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 6 ಪಂದ್ಯಗಳಲ್ಲಿ ಸೋಲನುಭವಿಸಿ ಈ ಕೆಟ್ಟ ದಾಖಲೆಯನ್ನು ಸರಿಗಟ್ಟಿತ್ತು. ಇದೀಗ ಮುಂಬೈ ಇಂಡಿಯನ್ಸ್ ತಂಡ ಕೂಡ ಮೊದಲ 6 ಪಂದ್ಯಗಳಲ್ಲೂ ಸೋಲುವ ಮೂಲಕ ಐಪಿಎಲ್ ಇತಿಹಾಸದ ಅತ್ಯಂತ ಕೆಟ್ಟ ದಾಖಲೆಯನ್ನು ಸರಿಗಟ್ಟಿದೆ. ಅಲ್ಲದೆ ಐಪಿಎಲ್ ಇತಿಹಾಸದಲ್ಲಿ ಸತತ 6 ಪರಾಜಯಗೊಂಡ ಮೂರನೇ ತಂಡವಾಗಿ ಮುಂಬೈ ಇಂಡಿಯನ್ಸ್ ಕಾಣಿಸಿಕೊಂಡಿದೆ. ಈ ಮೂಲಕ ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನವನ್ನು ಅಲಂಕರಿಸಿದೆ.
ಮುಂಬೈ ಇಂಡಿಯನ್ಸ್ (MI):
ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಡೆವಾಲ್ಡ್ ಬ್ರೆವಿಸ್, ಕೀರಾನ್ ಪೊಲಾರ್ಡ್, ಜಸ್ಪ್ರೀತ್ ಬುಮ್ರಾ, ಮುರುಗನ್ ಅಶ್ವಿನ್, ಬಾಸಿಲ್ ಥಂಪಿ, ಜಯದೇವ್ ಉನದ್ಕತ್, ಮಯಾಂಕ್ ಮಾರ್ಕಂಡೆ, ಸಂಜಯ್ ಯಾದವ್, ರಮಣ್‌ದೀಪ್ ಸಿಂಗ್, ಆರ್ಯನ್ ಜುಯಲ್, ಅರ್ಜುನ್ ತೆಂಡೂಲ್ಕರ್, ತಿಲಕ್ ವರ್ಮಾ, ರಾಹುಲ್ ಬುಮ್ರಾ, ಹೃತಿಕ್ ಶೋಕೀನ್ , ಅರ್ಷದ್ ಖಾನ್, ಟೈಮಲ್ ಮಿಲ್ಸ್, ಜೋಫ್ರಾ ಆರ್ಚರ್, ಫ್ಯಾಬಿಯನ್ ಅಲೆನ್, ಡೇನಿಯಲ್ ಸ್ಯಾಮ್ಸ್, ಅನ್ಮೋಲ್ಪ್ರೀತ್ ಸಿಂಗ್, ಟಿಮ್ ಡೇವಿಡ್, ರಿಲೆ ಮೆರೆಡಿತ್.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
Published On - 9:51 pm, Sat, 16 April 22