ಭಾರತದ ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜಾ (Ravindra Jadeja) ಐಪಿಎಲ್ 2022 (IPL 2022) ರಿಂದ ಹೊರಬಿದ್ದಿದ್ದಾರೆ. ಗಾಯದಿಂದಾಗಿ ಅವರು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)ನ ಉಳಿದ ಪಂದ್ಯಗಳಿಗೆ ಗೈರಾಗಲಿದ್ದಾರೆ. ರವೀಂದ್ರ ಜಡೇಜಾ ನಿಜವಾಗಿಯೂ ಗಾಯದಿಂದ ಹೊರಗುಳಿದಿದ್ದಾರಾ ಅಥವಾ ಅವರು ತಂಡದಿಂದ ಹೊರಹೋಗುವುದಕ್ಕೆ ಇನ್ನಾವುದಾದರೂ ಕಾರಣವಿದೆಯಾ? ಹೀಗೊಂದು ಪ್ರಶ್ನೆ ಹಲವರ ಮನಸ್ಸಿನಲ್ಲಿದೆ. ಏಕೆಂದರೆ CSK ಫ್ರಾಂಚೈಸಿ ಸಾಮಾಜಿಕ ಜಾಲತಾಣವಾದ ಇನ್ಸ್‌ಟಾಗ್ರಾಮ್ನಲ್ಲಿ ರವೀಂದ್ರ ಜಡೇಜಾ ಅವರನ್ನು ಅನ್ಫಾಲೋ ಮಾಡಿದೆ. ಅದೇ ಸಮಯದಲ್ಲಿ, ಜಡೇಜಾ ಗಾಯದ ಕಾರಣದಿಂದಾಗಿ ಉಳಿದ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಘೋಷಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಅನುಮಾನವನ್ನು ಹೆಚ್ಚಿಸಿವೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಋತುವಿನ ಆರಂಭಕ್ಕೆ ಕೇವಲ ಎರಡು ದಿನಗಳ ಮೊದಲು ರವೀಂದ್ರ ಜಡೇಜಾ ಅವರನ್ನು ನಾಯಕರನ್ನಾಗಿ ನೇಮಿಸಲಾಯಿತು. ಆದರೆ ಜಡೇಜಾ ಅವರ ನಾಯಕತ್ವದಲ್ಲಿ ಚೆನ್ನೈ ಹೀನಾಯ ಸೋಲು ಅನುಭವಿಸಿತು. ಹೀಗಾಗು ಎಂಟು ಪಂದ್ಯಗಳ ನಂತರ ಜಡೇಜಾ ನಾಯಕತ್ವವನ್ನು ತಾನಾಗಿಯೇ ತ್ಯಜಿಸಿದರು. ಅವರ ಸ್ಥಾನದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು ಮತ್ತೆ ನಾಯಕರನ್ನಾಗಿ ಮಾಡಲಾಯಿತು. ರವೀಂದ್ರ ಜಡೇಜಾ ಮತ್ತು ಸಿಎಸ್‌ಕೆ ನಡುವೆ ಏನೋ ಸಮಸ್ಯೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ತಂಡದ ಸಿಇಒ ಕಾಶಿ ವಿಶ್ವನಾಥನ್ ವಿವರಣೆ ನೀಡಿದ್ದಾರೆ.
ಚೆನ್ನೈ ಸಿಇಒ ಹೇಳುವುದೇನು?
ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಜಡೇಜಾ ಮೇಲೆ ಹರಡಿರುವ ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗಿನ ಸಂಭಾಷಣೆಯಲ್ಲಿ, ಕಾಶಿ ವಿಶ್ವನಾಥನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ವಿಷಯಗಳು ನನಗೆ ತಿಳಿದಿಲ್ಲ ಆದರೆ ಭವಿಷ್ಯದ ಯೋಜನೆಗಳಲ್ಲಿ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಲಿದ್ದಾರೆ ಎಂದಿದ್ದಾರೆ. ಜಡೇಜಾ ನಾಯಕತ್ವದಿಂದ ಕೆಳಗಿಳಿದ ರೀತಿ ಮತ್ತು ನಂತರ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಸೋಷಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿರುವ ರೀತಿಯನ್ನು ನೋಡಿದರೆ ಈ ಮಾತನ್ನು ನಂಬುವುದು ಸ್ವಲ್ಪ ಕಷ್ಟ. ಸುರೇಶ್ ರೈನಾ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ. ಐಪಿಎಲ್ 2022 ರ ಹರಾಜಿನಲ್ಲಿ ರೈನಾರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಲು ಕೊಂಚವು ಮನಸ್ಸು ಮಾಡಲಿಲ್ಲ. ಆದರೆ ವದಂತಿಗಳ ನಂತರ ಮಾತನಾಡಿದ ಸಿಎಸ್‌ಕೆ ಸಿಇಒ ಅವರ ಕಳಪೆ ಫಾರ್ಮ್‌ನಿಂದ ತಂಡವು ಅವರನ್ನು ಖರೀದಿಸಲಿಲ್ಲ ಎಂದು ಹೇಳಿದ್ದರು. ಹಾಗಿದ್ದರೆ ಈಗ ಜಡೇಜಾ ವಿಚಾರದಲ್ಲೂ ಅದೇ ಆಗುತ್ತಿದೆಯೇ?
IPL 2022 ಜಡೇಜಾಗೆ ಉತ್ತಮವಾಗಿರಲಿಲ್ಲ!
ರವೀಂದ್ರ ಜಡೇಜಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 16 ಕೋಟಿ ರೂಪಾಯಿಗೆ ಹರಾಜಿಗೂ ಮುನ್ನವೇ ಉಳಿಸಿಕೊಂಡಿತ್ತು. ಆದರೆ ಜಡೇಜಾ ಈ ಸೀಸನ್ನಲ್ಲಿ ಸಂಪೂರ್ಣವಾಗಿ ವಿಫಲರಾದರು. ಜಡೇಜಾ 10 ಪಂದ್ಯಗಳಲ್ಲಿ 19.33 ಸರಾಸರಿಯಲ್ಲಿ 116 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಅಲ್ಲದೆ ಕೇವಲ 5 ವಿಕೆಟ್‌ಗಳನ್ನು ಮಾತ್ರ ಕಬಳಿಸಲು ಸಾಧ್ಯವಾಯಿತು. ಫೀಲ್ಡಿಂಗ್ನಲ್ಲೂ ಜಡೇಜಾ ಹಲವು ಕ್ಯಾಚ್ ಗಳನ್ನು ಕೈಬಿಟ್ಟರು. ಹೀಗಿರುವಾಗ ಜಡೇಜಾ ಕೂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ ಉಪಯೋಗವಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಈ ಸುದ್ದಿಯನ್ನು ತೆಲುಗಿನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:37 pm, Thu, 12 May 22