IPL 2022: ಐಪಿಎಲ್ ಸೀಸನ್ 15 ನಿಂದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಆಟಗಾರ ದೀಪಕ್ ಚಹರ್ (Deepak Chahar) ಹೊರಬಿದ್ದಿದ್ದಾರೆ. ಈ ಬಾರಿ ಮೆಗಾ ಹರಾಜಿನಲ್ಲಿ 14 ಕೋಟಿಗೆ ಬಿಕರಿಯಾಗಿದ್ದ ಚಹರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ನಿಂದ (IPL) ಹೊರಗುಳಿಯಲು ನಿರ್ಧರಿಸಿದ್ದಾರೆ. ದೀಪಕ್ ಚಹರ್ ಐಪಿಎಲ್ನಿಂದ ಹಿಂದೆ ಸರಿಯುತ್ತಿದ್ದಂತೆ ಸಿಎಸ್ಕೆ (CSK) ಯಾವ ಆಟಗಾರನನ್ನು ಬದಲಿಯಾಗಿ ಆಯ್ಕೆ ಮಾಡಲಿದೆ ಎಂಬ ಚರ್ಚೆಗಳು ಶುರುವಾಗಿದೆ. ಈ ಪಟ್ಟಿಯಲ್ಲಿ ಇದೀಗ ಸುರೇಶ್ ರೈನಾ (Suresh Raina) ಹೆಸರು ಕೂಡ ಕೇಳಿ ಬರುತ್ತಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ರೈನಾ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹೀಗಾಗಿ ರೈನಾ ಐಪಿಎಲ್ನಲ್ಲೇ ಹೊಸ ಇನಿಂಗ್ಸ್ ಆರಂಭಿಸಿದ್ದರು.
ಅದರಂತೆ ಐಪಿಎಲ್ ಕಾಮೆಂಟರಿ ಪ್ಯಾನಲ್ನಲ್ಲಿ ಸುರೇಶ್ ರೈನಾ ಕಾಣಿಸಿಕೊಂಡಿದ್ದರು. ಇದೀಗ ದೀಪಕ್ ಚಹರ್ ಸಿಎಸ್ಕೆ ತಂಡದಿಂದ ಹೊರಬೀಳುತ್ತಿದ್ದಂತೆ ರೈನಾ ಅವರ ಆಯ್ಕೆಗೆ ಅವಕಾಶವಿದೆ. ಹೀಗಾಗಿ ಸಿಎಸ್ಕೆ ಫ್ರಾಂಚೈಸಿ ಮತ್ತೆ ಸುರೇಶ್ ರೈನಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಿದೆ.
ಸುರೇಶ್ ರೈನಾ ಆಯ್ಕೆಗೆ ಇದು ಒಂದು ಕಾರಣ:
ಸುರೇಶ್ ರೈನಾ ಅವರ ಅವಶ್ಯಕತೆ ಸಿಎಸ್ಕೆ ತಂಡಕ್ಕಿದೆ. ಏಕೆಂದರೆ ಕಳೆದ 5 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 4 ರಲ್ಲಿ ಸೋಲನುಭವಿಸಿದೆ. ಅದರಲ್ಲೂ ತಂಡದ ಮಧ್ಯಮ ಕ್ರಮಾಂಕವು ಕೈ ಕೊಡುತ್ತಿರುವುದು ಚಿಂತೆಗೆ ಕಾರಣವಾಗಿದೆ. ತಂಡದಲ್ಲಿರುವ ಅಂಬಟಿ ರಾಯುಡು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. 5 ಪಂದ್ಯಗಳಲ್ಲಿ 21ಕ್ಕಿಂತ ಕಡಿಮೆ ಸರಾಸರಿಯಲ್ಲಿ 81 ರನ್ ಗಳಿಸಿದ್ದಾರೆ. ರಾಯುಡು ಅವರ ಈ ವೈಫಲ್ಯವು ಸುರೇಶ್ ರೈನಾಗೆ ಅವಕಾಶ ಕಲ್ಪಿಸಲಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಎಸ್ಕೆ ತಂಡವು ಆರ್ಸಿಬಿ ವಿರುದ್ದದ ಗೆಲುವಿನೊಂದಿಗೆ ಜಯದ ಖಾತೆ ತೆರೆದಿದೆ. ಇದಾಗ್ಯೂ ತಂಡದ ಪ್ರದರ್ಶನ ಉತ್ತಮಗೊಂಡಿಲ್ಲ ಎಂಬುದಕ್ಕೆ ಆರ್ಸಿಬಿ ವಿರುದ್ದದ ಬೌಲಿಂಗ್ ಪ್ರದರ್ಶನವೇ ಸಾಕ್ಷಿ. ಇದೀಗ ದೀಪಕ್ ಚಹರ್ ಹೊರಗುಳಿಯುತ್ತಿರುವ ಕಾರಣ ಸಿಎಸ್ಕೆ ಬೌಲರ್ನ ಆಯ್ಕೆ ಮಾಡಲಿದೆಯಾ ಅಥವಾ ಬ್ಯಾಟ್ಸ್ಮನ್ ಆಗಿ ಸುರೇಶ್ ರೈನಾಗೆ ಅವಕಾಶ ನೀಡಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರವಂತು ಸಿಗಲಿದೆ.
ಸುರೇಶ್ ರೈನಾ ಅವರ ಐಪಿಎಲ್ ವೃತ್ತಿಜೀವನ:
ಸುರೇಶ್ ರೈನಾ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಏಕೆಂದರೆ ಐಪಿಎಲ್ ಲೀಗ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ರೈನಾ ಕೂಡ ಒಬ್ಬರು. ಈಗಲೂ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿದೆ. ಹಾಗೆಯೇ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಸುರೇಶ್ ರೈನಾ 205 ಪಂದ್ಯಗಳಲ್ಲಿ 32.51 ಸರಾಸರಿಯಲ್ಲಿ 5228 ರನ್ ಗಳಿಸಿದ್ದಾರೆ. ಈ ವೇಳೆ ಒಂದು ಶತಕ ಮತ್ತು 39 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ವಿಶೇಷ ಎಂದರೆ ಸುರೇಶ್ ರೈನಾ ಐಪಿಎಲ್‌ನಲ್ಲಿ 506 ಬೌಂಡರಿ ಹಾಗೂ 203 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಅಂದರೆ ರೈನಾ ಮಧ್ಯಮ ಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟ್ಸ್ಮನ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ದೀಪಕ್ ಚಹರ್ ಅಲಭ್ಯತೆಯಲ್ಲಿ ಸಿಎಸ್ಕೆ ತಂಡವು ಸುರೇಶ್ ರೈನಾಗೆ ಮಣೆ ಹಾಕಲಿದೆಯಾ ಕಾದು ನೋಡಬೇಕಿದೆ.
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್‌ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?