IPL 2023: ಎದುರಾಳಿ ಬ್ಯಾಟರ್ ಜೊತೆ ದೃಷ್ಟಿಯುದ್ಧಕ್ಕಿಳಿದ ಜಡೇಜಾ! ಸಮಾಧಾನ ಪಡಿಸಿದ ಧೋನಿ

|

Updated on: Apr 21, 2023 | 10:36 PM

IPL 2023: ವಿಕೆಟ್ ಕಬಳಿಸಿದ್ದರೂ ಜಡೇಜಾ ಕೋಪ ತಣ್ಣಗಾಗದೆ ಮತ್ತೆ ಕ್ಲಾಸೆನ್​ನತ್ತ ಕಣ್ಣು ಹಾಯಿಸುತ್ತಾ ಏನೋ ಮಾತನಾಡತೊಡಗಿದರು. ಆ ಬಳಿಕ ಧೋನಿ ಇಬ್ಬರ ನಡುವಿನ ದೃಷ್ಟಿ ಯುದ್ದಕ್ಕೆ ಅಂತ್ಯ ಹಾಡಿದರು.

IPL 2023: ಎದುರಾಳಿ ಬ್ಯಾಟರ್ ಜೊತೆ ದೃಷ್ಟಿಯುದ್ಧಕ್ಕಿಳಿದ ಜಡೇಜಾ! ಸಮಾಧಾನ ಪಡಿಸಿದ ಧೋನಿ
ಕ್ಲಾಸೆನ್ ಜೊತೆ ಜಡೇಜಾ ಜಗಳ
Follow us on

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ (CSK vs SRH) ನಡುವಿನ ಪಂದ್ಯದಲ್ಲಿ ಸಿಎಸ್​ಕೆ ತಂಡ ಮೇಲುಗೈ ಸಾಧಿಸಿದೆ. ತಂಡದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ 3 ವಿಕೆಟ್ ಉರುಳಿಸಿ ಹೈದರಾಬಾದ್ ತಂಡವನ್ನು ಕೇವಲ 134 ರನ್​ಗಳಿಗೆ ಕಟ್ಟಿಹಾಕುವಲ್ಲಿ ನೆರವಾದರು. ಸದ್ಯ ಈ ಗುರಿ ಬೆನ್ನಟ್ಟಿರುವ ಸಿಎಸ್​ಕೆ ಸುಲಭವಾಗಿ ಗುರಿ ಮುಟ್ಟುವ ಸೂಚನೆ ನೀಡಿದೆ. ಆದರೆ ಇದೇ ಪಂದ್ಯದಲ್ಲಿ ಸಿಎಸ್​ಕೆ ಸ್ಪಿನ್ನರ್ ರವೀಂದ್ರ ಜಡೇಜಾ (Ravindra Jadeja) ಹಾಗೂ ಹೈದರಾಬಾದ್ ಬ್ಯಾಟರ್ ಕ್ಲಾಸೆನ್ (Heinrich Klaasen) ಪರಸ್ಪರ ವಾಗ್ವಾದ ನಡೆಸಿದ ಘಟನೆ ನಡೆದಿದ್ದು, ಈ ಇಬ್ಬರು ಆಟಗಾರರ ಜಗಳವನ್ನು ಬಿಡಿಸಲು ಅಂತಿಮವಾಗಿ ಕೂಲ್ ಕ್ಯಾಪ್ಟನ್ ಧೋನಿ​ ಬರಬೇಕಾಯಿತು. ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

13ನೇ ಓವರ್​ನಲ್ಲಿ ನಡೆದ ಘಟನೆ

ವಾಸ್ತವವಾಗಿ ಹೈದರಾಬಾದ್ ಇನ್ನಿಂಗ್ಸ್​ನ 13ನೇ ಓವರ್​ನಲ್ಲಿ ಈ ಘಟನೆ ನಡೆಯಿತು. ಈ ಓವರ್ ಬೌಲ್ ಮಾಡಿದ ರವೀಂದ್ರ ಜಡೇಜಾಗೆ ಮತ್ತೊಂದು ವಿಕೆಟ್ ಪಡೆಯುವ ಅವಕಾಶವಿತ್ತು. ಈ ಓವರ್‌ನ ಮೊದಲ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ನೆರವಾಗಿ ಶಾಟ್ ಆಡಿದರು. ಆ ಚೆಂಡು ನೇರವಾಗಿ ಬೌಲಿಂಗ್ ಮಾಡಿದ ಜಡೇಜಾ ಕೈಸೇರುವುದರಲ್ಲಿತ್ತು. ಆದರೆ ನಾನ್-ಸ್ಟ್ರೈಕರ್​ನಲ್ಲಿ ನಿಂತಿದ್ದ ಹೆನ್ರಿಚ್ ಕ್ಲಾಸೆನ್ ಇದಕ್ಕೆ ಅಡ್ಡಿಯಾದರು. ವಾಸ್ತವವಾಗಿ ಚೆಂಡು ನಾನ್-ಸ್ಟ್ರೈಕರ್​ ತುದಿಯಲ್ಲಿ ನಿಂತಿದ್ದ ಕ್ಲಾಸೆನ್​ ಕಡೆಗೆ ಸಾಗಿತು. ಕೂಡಲೇ ಜಡೇಜಾ ಆ ಕ್ಯಾಚ್ ತೆಗೆದುಕೊಳ್ಳಲು ಯತ್ನಿಸಿದರು. ಆದರೆ ಚೆಂಡು ತನ್ನತ್ತ ಬರುತ್ತಿರುವುದನ್ನು ಗಮನಿಸಿದ ಕ್ಲಾಸೆನ್ ಕೂಡಲೇ ಕ್ರೀಸ್ ತಲುಪಲು ಹಿಂದಕ್ಕೆ ಬರಲಾರಂಭಿಸಿದರು. ಇದೇ ವೇಳೆ ಜಡೇಜಾ ಕೂಡ ಆ ಕ್ಯಾಚ್ ಹಿಡಿಯಲು ಪ್ರಯತ್ನಿಸಿದರು. ಆದರೆ ಕ್ಲಾಸೆನ್ ಅಡ್ಡಬಂದಿದ್ದರಿಂದ ಜಡೇಜಾ, ಕ್ಲಾಸೆನ್​ಗೆ ಪರಸ್ಪರ ಡಿಕ್ಕಿ ಹೊಡೆದುಕೊಂಡರು. ಇದರಿಂದ ಜಡೇಜಾ ಆ ಸುಲಭ ಕ್ಯಾಚ್ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.

ದೃಷ್ಟಿ ಯುದ್ದಕ್ಕೆ ಅಂತ್ಯ ಹಾಡಿದ ಧೋನಿ

ಇಂತಹ ಸುಲಭ ಅವಕಾಶ ಕೈ ತಪ್ಪಿ ಹೋಗಿದನ್ನು ಕಂಡು ಕುಪಿತಗೊಂಡ ಜಡೇಜಾ ನೆಲದ ಮೇಲೆ ಕುಳಿತು ಕ್ಲಾಸೆನ್‌ನತ್ತ ನೋಡತೊಡಗಿದರು. ಆ ಬಳಿಕವೂ ಜಡೇಜಾ, ಕ್ಲಾಸೆನ್​ ಅವರನ್ನು ಕೆಣಕುವುದನ್ನು ಬಿಡಲಿಲ್ಲ. ಪ್ರತಿಯೊಂದು ಎಸೆತವಾದ ಬಳಿಕವೂ ಜಡೇಜಾ, ಕ್ಲಾಸೆನ್​ ಕಡೆ ಗುರಾಯಿಸುತ್ತಿದ್ದರು. ಆದಾಗ್ಯೂ, ಮಯಾಂಕ್ ಅಗರ್ವಾಲ್ ಈ ಜೀವದಾನದ ಉಡುಗೊರೆಯ ಲಾಭವನ್ನು ಪಡೆಯಲು ಸಾಧ್ಯವಾಗಲಿಲ್ಲ. ಬದಲಿಗೆ ಅದೇ ಓವರ್‌ನಲ್ಲಿ ಔಟಾದರು. ಒಮ್ಮೆ ಅವಕಾಶ ಜಡೇಜಾ ಕೈಯಿಂದ ಕೈ ತಪ್ಪಿದರೂ, ಐದನೇ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಧೋನಿ ಸ್ಟಂಪ್ ಮಾಡಿದರು. ವಿಕೆಟ್ ಕಬಳಿಸಿದ್ದರೂ ಜಡೇಜಾ ಕೋಪ ತಣ್ಣಗಾಗದೆ ಮತ್ತೆ ಕ್ಲಾಸೆನ್​ನತ್ತ ಕಣ್ಣು ಹಾಯಿಸುತ್ತಾ ಏನೋ ಮಾತನಾಡತೊಡಗಿದರು. ಆ ಬಳಿಕ ಧೋನಿ ಇಬ್ಬರ ನಡುವಿನ ದೃಷ್ಟಿ ಯುದ್ದಕ್ಕೆ ಅಂತ್ಯ ಹಾಡಿದರು.

ಈ ಐಪಿಎಲ್​ನಲ್ಲಿ ಜಡೇಜಾ ಅಬ್ಬರ

ಈ ಸಣ್ಣ ಗಲಾಟೆಯ ಹೊರತಾಗಿ ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ತಮ್ಮ 4 ಓವರ್‌ಗಳಲ್ಲಿ ಕೇವಲ 22 ರನ್ ನೀಡಿ 3 ವಿಕೆಟ್ ಪಡೆದರು. ಮಯಾಂಕ್ ಅಗರ್ವಾಲ್ ಅವರಿಗೂ ಮೊದಲು ಜಡೇಜಾ, ಅಭಿಷೇಕ್ ಶರ್ಮಾ ಮತ್ತು ರಾಹುಲ್ ತ್ರಿಪಾಠಿ ರೂಪದಲ್ಲಿ ಎರಡು ಪ್ರಮುಖ ವಿಕೆಟ್ಗಳನ್ನು ಪಡೆದರು. ಈ ಸೀಸನ್​ನಲ್ಲಿ ಇದುವರೆಗೆ ಜಡೇಜಾ ಒಟ್ಟು 9 ವಿಕೆಟ್ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:32 pm, Fri, 21 April 23