ಬುಧವಾರ (ಏಪ್ರಿಲ್ 12) ರಾತ್ರಿ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್ (CSK vs RR) ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಂಡದ ಆಧಾರಸ್ತಂಭ ನಾಯಕ ಮಹೇಂದ್ರ ಸಿಂಗ್ ಧೋನಿ (Ms Dhoni) ಮೊಣಕಾಲು ಇಂಜುರಿಯಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನ ವಿರುದ್ಧದ ಪಂದ್ಯದ ನಂತರ ತಂಡದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ (Stephen Fleming) ಈ ವಿಷಯದ ಬಗ್ಗೆ ಮಾತನಾಡಿದ್ದು, ಧೋನಿ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ವಿಕೆಟ್ಗಳ ಮಧ್ಯೆ ಓಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಎರಡು ರನ್ ಬರಬೇಕಾದ ಸಂದರ್ಭಗಳಲ್ಲಿ, ಅವರು ಕೇವಲ ಸಿಂಗಲ್ ಮಾತ್ರ ತೆಗೆದುಕೊಳ್ಳುತ್ತಿದ್ದರು. ನಮ್ಮ ವೈದ್ಯಕೀಯ ತಂಡ ಸದ್ಯ ಧೋನಿ ಮೇಲೆ ನಿಗಾ ಇರಿಸಿದೆ. ನಮ್ಮ ಮುಂದಿನ ಪಂದ್ಯಕ್ಕೆ ನಾಲ್ಕು ದಿನ ಬಾಕಿ ಇದೆ. ಹಾಗಾಗಿ ಅದಕ್ಕೂ ಮುನ್ನ ಧೋನಿ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ. ಧೋನಿ ಫಿಟ್‌ನೆಸ್‌ಗೆ ಯಾವುದೇ ಧಕ್ಕೆಯಾಗಿಲ್ಲ. ಟೂರ್ನಿ ಆರಂಭಕ್ಕೂ ಮುನ್ನ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದರು. ಅಲ್ಲದೆ ಧೋನಿ ಅದ್ಭುತ ಆಟಗಾರ ಹೀಗಾಗಿ ಅವರು ಬೇಗ ಚೇತರಿಸಿಕೊಳ್ಳಲಿದ್ದಾರೆ ಎಂದು ಫ್ಲೆಮಿಂಗ್ ಹೇಳಿದ್ದಾರೆ. ಧೋನಿಯ ಇಂಜುರಿಯಿಂದಾಗಿ ಸಿಎಸ್‌ಕೆ ಅಭಿಮಾನಿಗಳು ಚಿಂತಿತರಾಗಿದ್ದು, ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಚೆನ್ನೈ ತನ್ನ ಮುಂದಿನ ಪಂದ್ಯದಲ್ಲಿ ಬೆಂಗಳೂರನ್ನು (RCB) ಎದುರಿಸಲಿದೆ. ಏಪ್ರಿಲ್ 17 ರಂದು ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಧೋನಿ ಗಾಯಗೊಂಡಿರುವುದರೊಂದಿಗೆ ದಕ್ಷಿಣ ಆಫ್ರಿಕಾದ ವೇಗಿ ಸಿಸಂಡಾ ಮಗಾಲಾ ಕೂಡ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಅವರ ಗಾಯದ ಬಗ್ಗೆಯೂ ಫ್ಲೆಮಿಂಗ್ ಮಾಹಿತಿ ನೀಡಿದ್ದು, ನಮ್ಮ ತಂಡದ ಮತ್ತೊಬ್ಬ ಕ್ರಿಕೆಟಿಗ ಗಾಯಗೊಂಡಿದ್ದಾರೆ. ನಮ್ಮ ತಂಡದಲ್ಲಿ ಕ್ರಿಕೆಟಿಗರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿದೆ. ಇದರಿಂದ ಬೇರೆಯವರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು. ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಮಗಾಲಾ ಕೈಗೆ ಗಾಯವಾಗಿತ್ತು. ಇದರಿಂದಾಗಿ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಕೊನೆಯ 2 ಓವರ್‌ಗಳಲ್ಲಿ ಬೌಲಿಂಗ್ ಮಾಡಲು ಸಹ ಸಾಧ್ಯವಾಗಲಿಲ್ಲ. ಹಿಂದಿನ ಪಂದ್ಯದಲ್ಲಿ ದೀಪಕ್ ಚಹರ್ ಕೂಡ ಇದೇ ರೀತಿಯ ಇಂಜುರಿಗೆ ತುತ್ತಾಗಿದ್ದರು. ಇದರಿಂದ ನಮ್ಮ ತಂಡದಲ್ಲಿ ಫಿಟ್ ಆಗಿರುವ ಆಟಗಾರರ ಸಂಖ್ಯೆ ಕಡಿಮೆಯಾಗಿದೆ. ಇದೀಗ ಇಂಜುರಿಗೊಂಡಿರುವ ಮಗಾಲಾ ಐಪಿಎಲ್‌ನಿಂದ 2 ವಾರಗಳ ಕಾಲ ದೂರ ಉಳಿಯಲಿದ್ದಾರೆ ಎಂದಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಆರಂಭದಲ್ಲೇ ಯಶಸ್ವಿ ಜೈಶ್ವಾಲ್ (10) ವಿಕೆಟ್ ಕಳೆದುಕೊಂಡ ರಾಯಲ್ಸ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮತ್ತೊಂದೆಡೆ, ದೇವದತ್ ಪಡಿಕ್ಕಲ್ ಹಾಗೂ ಜೋಸ್ ಬಟ್ಲರ್ ಎರಡನೇ ವಿಕೆಟ್‌ಗೆ 77 ರನ್‌ಗಳ ಜೊತೆಯಾಟವಾಡಿದರು.
CSK vs RR Highlights IPL 2023: ಧೋನಿ ಏಕಾಂಗಿ ಹೋರಾಟ ವ್ಯರ್ಥ; ಚೆನ್ನೈಗೆ ರೋಚಕ ಸೋಲು
ಆದರೆ 38 ರನ್ ಗಳಿಸಿದ್ದಾಗ ಜಡೇಜಾ ಬೌಲಿಂಗ್‌ನಲ್ಲಿ ಪಡಿಕ್ಕಲ್ ಕ್ಯಾಚಿತ್ತು ನಿರ್ಗಮಿಸಿದರು. ಬಳಿಕ ಬಂದ ನಾಯಕ ಸ್ಯಾಮ್ಸನ್ (0) ಡಕೌಟ್ ಆಗಿ ಪೆವಿಲಿಯನ್ ಸೇರಿದರು. ನಂತರ ಬಂದ ಅಶ್ವಿನ್ 30 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬೆನ್ನಲ್ಲೇ ಬಟ್ಲರ್ ಕೂಡ 52 ರನ್ ಗಳಿಸಿ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಹೆಟ್ಮೇಯರ್ ಮುಂದಿನ ಇನ್ನಿಂಗ್ಸ್‌ನಲ್ಲಿ ಅಜೇಯ 30 ರನ್ ಗಳಿಸಿ ತಂಡದ ಸ್ಕೋರನ್ನು 175 ರನ್‌ಗಳಿಗೆ ಕೊಂಡೊಯ್ದರು. ಚೆನ್ನೈ ಪರ ಆಕಾಶ್ ಸಿಂಗ್, ದೇಶಪಾಂಡೆ ಹಾಗೂ ಜಡೇಜಾ ತಲಾ 2 ವಿಕೆಟ್ ಪಡೆದರು.ಮೊಯೀನ್ ಅಲಿ 1 ವಿಕೆಟ್ ಪಡೆದರು.
ಇನ್ನು 176 ರನ್‌ಗಳ ಗುರಿಯೊಂದಿಗೆ ಕ್ರೀಸ್ಗೆ ಬಂದ ಚೆನ್ನೈ ಸೂಪರ್ ಕಿಂಗ್ಸ್ ಗೆ ಉತ್ತಮ ಆರಂಭ ಸಿಗಲಿಲ್ಲ. ರುತುರಾಜ್ ಗಾಯಕ್ವಾಡ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಅಜಿಂಕ್ಯ ರಹಾನೆ ಕೂಡ 32 ರನ್ ಗಳಿಸಿ ಡಗೌಟ್ ತಲುಪಿದರು. ನಂತರ ಬಂದ ಶಿವಂ ದುಬೆ (8), ಮೊಯಿನ್ ಅಲಿ (7) ಮತ್ತು ಅಂಬಟಿ ರಾಯುಡು (1) ಪೆವಿಲಿಯನ್ ಸೇರಿದರು. ಇದೇ ಅನುಕ್ರಮದಲ್ಲಿ ಡೆವೊನ್ ಕಾನ್ವೆ ಕೂಡ ಅರ್ಧಶತಕ ಗಳಿಸಿ 50 ರನ್ ಗಳಿಸುವಷ್ಟರಲ್ಲಿ ವಿಕೆಟ್ ಕಳೆದುಕೊಂಡರು.
ಕಾನ್ವೇ ಬಳಿಕ ಜಡೇಜಾ ಹಾಗೂ ಧೋನಿ ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಆದರೆ ಅಂತಿಮ ಓವರ್ನಲ್ಲಿ 20 ರನ್ ಗುರಿ ಬೆನ್ನಟ್ಟಬೇಕಿದ್ದ ಚೆನ್ನೈಗೆ 17 ರನ್ ಬಾರಿಸಲಷ್ಟೇ ಸಾಧ್ಯವಾಯಿತು. ಹೀಗಾಗಿ ಚೆನ್ನೈ ತಂಡ ಅಂತಿಮವಾಗಿ 3 ರನ್ಗಳಿಂದ ಸೋಲೊಪ್ಪಿಕೊಂಡಿತು. ರಾಜಸ್ಥಾನ ಪರ ರವಿಚಂದ್ರನ್ ಅಶ್ವಿನ್ ಮತ್ತು ಯಜುವೇಂದ್ರ ಚಹಾಲ್ ತಲಾ 2 ವಿಕೆಟ್ ಪಡೆದರು.ಆಡಮ್ ಝಂಪಾ ಮತ್ತು ಸಂದೀಪ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:20 pm, Thu, 13 April 23