16ನೇ ಆವೃತ್ತಿಯ ಐಪಿಎಲ್ನಲ್ಲಿ (IPL 2023) ಕೋಟಿ ವೀರರ ಪ್ರದರ್ಶನ ನಿರಸವಾಗಿದೆ. ಆದರೆ ಕಡಿಮೆ ಬೆಲೆಗೆ ತಂಡಗಳನ್ನು ಸೇರಿಕೊಂಡಿದ್ದ, ಹಾಗೆಯೇ ಮೊದಲ ಬಾರಿಗೆ ಅವಕಾಶ ಗಿಟ್ಟಿಸಿಕೊಂಡಿರುವ ಹಲವು ಯುವ ಪ್ರತಿಭೆಗಳು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದಾರೆ. ಅದರಲ್ಲೂ ಈ ಐಪಿಎಲ್ನಲ್ಲಿ ಕೆಳಿಬರುತ್ತಿರುವ ಕೆಲವೇ ಕೆಲವು ಹೆಸರುಗಳಲ್ಲಿ ಪ್ರಮುಖವಾದದ್ದು, ಕೆಕೆಆರ್ ತಂಡದ ಸ್ಟಾರ್ ಬ್ಯಾಟರ್ ರಿಂಕು ಸಿಂಗ್ (Rinku Singh). ಕಳೆದ ಆವೃತ್ತಿಯಲ್ಲೇ ತನ್ನ ಪ್ರತಿಭೆಯನ್ನು ಹೊರಹಾಕಿದ್ದ ರಿಂಕು, ಈ ಐಪಿಎಲ್ನಲ್ಲಿ ಗುಜರಾತ್ ವಿರುದ್ಧದ ಪಂದ್ಯದಲ್ಲಿ ತೋರಿದ ದಿಟ್ಟ ಹೋರಾಟ ಈ ಆಟಗಾರನ ಭವಿಷ್ಯವನ್ನೇ ಬದಲಿಸಿದೆ. ಗುಜರಾತ್ ವಿರುದ್ಧದ ಪಂದ್ಯದ 20ನೇ ಓವರ್ನಲ್ಲಿ ಬರೋಬ್ಬರಿ 5 ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ರಿಂಕು ರಾತ್ರೋರಾತ್ರಿ ಭಾರತ ಕ್ರಿಕೆಟ್ನ ಸೂಪರ್ ಸ್ಟಾರ್ ಆಗಿದ್ದರು. ರಿಂಕು ಅವರ ಆ ಇನ್ನಿಂಗ್ಸ್ ನೋಡಿದ್ದ ತಂಡದ ಮಾಲೀಕ ಶಾರುಖ್ ಖಾನ್ (Shahrukh Khan) ಕೂಡ ರಿಂಕು ಆಟಕ್ಕೆ ಫಿದಾ ಆಗಿದ್ದರು. ಪಂದ್ಯದ ಬಳಿಗ ರಿಂಕುಗೆ ಕಾಲ್ ಮಾಡಿದ್ದ ಕಿಂಗ್ ಖಾನ್, ನಿನ್ನ ಮದುವೆಯಲ್ಲಿ ಡಾನ್ಸ್ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕಳೆದ ಹಲವು ಐಪಿಎಲ್ ಸೀಸನ್‌ಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದ ಯುವ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಈಗ ನಿರಂತರವಾಗಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಇದರ ಫಲಿತಾಂಶ ರಿಂಕು ಅವರ ಅಮೋಘ ಬ್ಯಾಟಿಂಗ್ನಲ್ಲೂ ಕಂಡುಬಂದಿದೆ. ರಿಂಕುವಿನ ಈ ಮೋಡಿ ಶಾರುಖ್ ಮೇಲೂ ತನ್ನ ಪ್ರಭಾವ ಬೀರುತ್ತಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧವೂ ರಿಂಕು ಮಹತ್ವದ ಇನ್ನಿಂಗ್ಸ್ ಆಡಿದ್ದರು. ಆ ಇನ್ನಿಂಗ್ಸ್ ಕೂಡ ಕೆಕೆಆರ್ ಗೆಲುವಿಗೆ ವಿಶೇಷ ಕೊಡುಗೆ ನೀಡಿತ್ತು. ತಂಡದ ಗೆಲುವಿನ ನಂತರ, ಮಾತನಾಡಿದ್ದ ರಿಂಕು, ಶಾರುಖ್ ತನ್ನ ಮದುವೆಯಲ್ಲಿ ನೃತ್ಯ ಮಾಡುವ ಭರವಸೆ ನೀಡಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
JHOOME JO RINKUUUUU !!! My baby @rinkusingh235 And @NitishRana_27 & @venkateshiyer you beauties!!! And remember Believe that’s all. Congratulations @KKRiders and @VenkyMysore take care of your heart sir! pic.twitter.com/XBVq85FD09
— Shah Rukh Khan (@iamsrk) April 9, 2023
ಈ ಬಗ್ಗೆ ವಿವರವಾಗಿ ಮಾತನಾಡಿದ ರಿಂಕು, ಶಾರುಖ್ ಖಾನ್ ಅವರು ನನ್ನೊಂದಿಗೆ ಫೋನಿನಲ್ಲಿ ಸಂಭಾಷಣೆ ನಡೆಸಿದರು. ಆ ಸಮಯದಲ್ಲಿ ‘ನನ್ನನ್ನು ಹಲವು ಜನ ಅವರ ಮದುವೆಗೆ ಕರೆಯುತ್ತಾರೆ. ಆದರೆ ನಾನು ಯಾರ ಮದುವೆಗೂ ಹೋಗಲ್ಲ. ಆದರೆ ನಾನು ನಿನ್ನ ಮದುವೆಗೆ ಖಂಡಿತ ಬರುತ್ತೇನೆ. ಅಷ್ಟೇ ಅಲ್ಲದೆ ನಿನ್ನ ಮದುವೆಯಲ್ಲಿ ಡಾನ್ಸ್ ಕೂಡ ಮಾಡುತ್ತೇನೆ’ ಎಂದು ಶಾರುಖ್ ಖಾನ್ ಭರವಸೆ ನೀಡಿದ್ದಾರೆ ಎಂದು ರಿಂಕು ಹೇಳಿಕೊಂಡಿದ್ದಾರೆ.
When SRK Called Rinku Singh!#ShahRukhKhan? #RinkuSingh pic.twitter.com/rC2Ki7eHwl
— Shah Rukh Khan Warriors FAN Club (@TeamSRKWarriors) April 27, 2023
ಉತ್ತರ ಪ್ರದೇಶದ 25 ವರ್ಷದ ಎಡಗೈ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಈ ಸೀಸನ್ನಲ್ಲಿ ಇದುವರೆಗೆ 8 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇದರಲ್ಲಿ ಅವರು 4 ಬಾರಿ ಅಜೇಯರಾಗಿ ಮರಳಿದ್ದು 62 ರ ಸರಾಸರಿಯಲ್ಲಿ ಮತ್ತು 158 ರ ಸ್ಟ್ರೈಕ್ ರೇಟ್‌ನಲ್ಲಿ 251 ರನ್ ಗಳಿಸಿದ್ದಾರೆ. ಇದರೊಂದಿಗೆ ಈ ಸೀಸನ್ನಲ್ಲಿ 2 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಇಡೀ ಪಂದ್ಯಾವಳಿಯ ಅತ್ಯುತ್ತಮ ಫಿನಿಶರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:34 pm, Fri, 28 April 23