IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-16 ಗಾಗಿ ಸಿದ್ಧತೆಗಳು ಶುರುವಾಗಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳಿಗೆ ಹರಾಜು ಪ್ರಕ್ರಿಯೆಗೆ ಸಿದ್ದರಾಗುವಂತೆ ತಿಳಿಸಲಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡಲಾಗುವ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಿದೆ. ಈ ಪಟ್ಟಿಯನ್ನು ನವೆಂಬರ್-15 ರೊಳಗೆ ಸಲ್ಲಿಸಬೇಕಿದ್ದು, ಅದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೆಲ ಸ್ಟಾರ್ ಆಟಗಾರರನ್ನು ಕೈ ಬಿಡಲು ಮುಂದಾಗಿದೆ ಎಂದು ವರದಿಯಾಗಿದೆ.
ಈ ಪಟ್ಟಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಹೆಸರು ಮುಂಚೂಣಿಯಲ್ಲಿದೆ. ಕಳೆದ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಫ್ರಾಂಚೈಸಿ 10.75 ಕೋಟಿ ನೀಡಿ ಶಾರ್ದೂಲ್ ಠಾಕೂರ್ರನ್ನು ಖರೀದಿಸಿತ್ತು. ಆದರೆ 14 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು 15 ವಿಕೆಟ್ ಮತ್ತು 120 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ ಈ ಬಾರಿ ಶಾರ್ದೂಲ್ ಅವರನ್ನು ಕೈ ಬಿಡಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಕೆಎಸ್ ಭರತ್ ಕೂಡ ತಂಡದಿಂದ ಹೊರಬೀಳಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಹೆಚ್ಚುವರಿ ವಿಕೆಟ್ ಕೀಪರ್ ಆಗಿರುವ ಭರತ್ ಅವರನ್ನು 2 ಕೋಟಿಗೆ ಖರೀದಿಸಲಾಗಿತ್ತು. ಇದೀಗ ಯುವ ಆಟಗಾರನನ್ನು ಕೈಬಿಡಲು ಡೆಲ್ಲಿ ಕ್ಯಾಪಿಟಲ್ಸ್ ಮುಂದಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಹಾಗೆಯೇ ಮತ್ತೋರ್ವ ಆಟಗಾರ ಮನ್ದೀಪ್ ಸಿಂಗ್ ಕೂಡ ಡೆಲ್ಲಿ ತಂಡದಿಂದ ಔಟ್ ಆಗಲಿದ್ದಾರೆ. ಕಳೆದ ಸೀಸನ್ನಲ್ಲಿ 3 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮನ್ದೀಪ್ ಕೇವಲ 18 ರನ್ ಮಾತ್ರ ಕಲೆಹಾಕಿದ್ದರು. ಹೀಗಾಗಿ 1.10 ಕೋಟಿ ಬೆಲೆ ಹೊಂದಿರುವ ಮನ್ದೀಪ್ ಸಿಂಗ್ ಅವರನ್ನೂ ಸಹ ಕೈ ಬಿಟ್ಟು ಬೇರೆ ಆಟಗಾರರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬಯಸಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಐಪಿಎಲ್ ಹರಾಜಿನ ಸಿದ್ಧತೆಗಳು ಶುರುವಾಗಿದ್ದು, ಇದರ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಮೂವರು ಆಟಗಾರರು ಹೊರಬೀಳಲಿರುವ ಸುದ್ದಿ ಹೊರಬಿದ್ದಿದೆ. ಅಷ್ಟೇ ಅಲ್ಲದೆ 10 ತಂಡಗಳು ಉಳಿಸಿಕೊಳ್ಳುವ ಆಟಗಾರರು ಯಾರೆಲ್ಲಾ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.
ಟಿ20 ವಿಶ್ವಕಪ್-ಐಪಿಎಲ್ 2023:
ಟಿ20 ವಿಶ್ವಕಪ್ ಫೈನಲ್ ಪಂದ್ಯವು ನವೆಂಬರ್ 13 ರಂದು ನಡೆಯಲಿದೆ. ಇಲ್ಲಿ ಅಚ್ಚರಿ ಸಂಗತಿ ಎಂದರೆ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಸಲ್ಲಿಸಬೇಕಾಗುತ್ತದೆ. ಅಂದರೆ ಟಿ20 ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರು ತಂಡದಲ್ಲೇ ಉಳಿದುಕೊಳ್ಳುವ ಸಾಧ್ಯತೆಯಿದೆ. ಹಾಗೆಯೇ ಟಿ20 ವಿಶ್ವಕಪ್ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ ಹೊಸ ಆಟಗಾರರು ಮುಂದಿನ ಐಪಿಎಲ್ನಲ್ಲಿ ಅವಕಾಶ ಪಡೆಯಲಿದ್ದಾರೆ. ಏಕೆಂದರೆ ಟಿ20 ವಿಶ್ವಕಪ್ ಮುಗಿದ ಒಂದು ತಿಂಗಳ ಅಂತರದಲ್ಲಿ ಐಪಿಎಲ್ ಮಿನಿ ಹರಾಜು ನಡೆಯಲಿದೆ.
ಈ ಬಾರಿ ಮಿನಿ ಹರಾಜು:
ಐಪಿಎಲ್ನಲ್ಲಿ ಪ್ರತಿ ಮೂರು ಸೀಸನ್ಗೊಮ್ಮೆ ಮೆಗಾ ಹರಾಜನ್ನು ನಡೆಸಲಾಗುತ್ತದೆ. ಇದರ ನಡುವಿನ 2 ಸೀಸನ್ಗಳಲ್ಲಿ ಮಿನಿ ಹರಾಜು ನಡೆಯಲಿದೆ. ಕಳೆದ ಬಾರಿ ಮೆಗಾ ಹರಾಜು ನಡೆದಿರುವುದರಿಂದ ಈ ಬಾರಿ ಮಿನಿ ಹರಾಜು ನಡೆಯಲಿದೆ. ಅಂದರೆ ಪ್ರತಿ ತಂಡಗಳು 25 ಆಟಗಾರರಲ್ಲಿ ಬಿಡುಗಡೆ ಮಾಡಲಾದ ಆಟಗಾರ ಸ್ಥಾನದಲ್ಲಿ ಬದಲಿ ಆಟಗಾರರನ್ನು ಹರಾಜಿನ ಮೂಲಕ ಖರೀದಿಸಲು ಅವಕಾಶ ಇರಲಿದೆ.
ಹರಾಜು ಮೊತ್ತ ಹೆಚ್ಚಳ:
ಐಪಿಎಲ್ ಸೀಸನ್ 16 ಹರಾಜಿಗಾಗಿ ಫ್ರಾಂಚೈಸಿಗಳ ಹರಾಜು ಮೊತ್ತವನ್ನು ಹೆಚ್ಚಿಸಲಾಗುತ್ತಿದೆ. ಕಳೆದ ಬಾರಿ 90 ಕೋಟಿಯಿದ್ದ ಹರಾಜು ಮೊತ್ತವು ಈ ಬಾರಿ 5 ಕೋಟಿ ಏರಿಕೆಯಾಗಲಿದೆ. ಅಂದರೆ ಐಪಿಎಲ್ ಸೀಸನ್ 16 ಹರಾಜು ಪ್ರಕ್ರಿಯೆಯು ಒಟ್ಟು 95 ಕೋಟಿಯಲ್ಲಿ ನಡೆಯಲಿದೆ.
ಒಟ್ಟಿನಲ್ಲಿ ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಐಪಿಎಲ್ನ ಮೊದಲ ಹಂತದ ಸಿದ್ಧತೆಗಳನ್ನು ಶುರು ಮಾಡಲು ಬಿಸಿಸಿಐ ಭರ್ಜರಿ ಪ್ಲ್ಯಾನ್ಗಳನ್ನು ರೂಪಿಸಿರುವುದು ವಿಶೇಷ.