IPL 2024: ರಂಗು ರಂಗಿನ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್-17 ಅನ್ನು ವಿದೇಶದಲ್ಲಿ ಆಯೋಜಿಸುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆ. ಅಂದರೆ ಐಪಿಎಲ್ 2024 ರ ಸಂದರ್ಭದಲ್ಲೇ ಭಾರತದಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಹೀಗಾಗಿ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸುವ ಬಗ್ಗೆ ಬಿಸಿಸಿಐ ಚಿಂತಿಸಿದೆ. ಈ ಹಿಂದೆ 2009ರ ಹಾಗೂ 2014 ಲೋಕಸಭಾ ಚುನಾವಣಾ ಸಂದರ್ಭಗಳಲ್ಲಿ ವಿದೇಶದಲ್ಲಿ ಐಪಿಎಲ್ ಅನ್ನು ಆಯೋಜಿಸಲಾಗಿತ್ತು. ಇದೀಗ ಇದೇ ಕಾರಣದಿಂದಾಗಿ ಮುಂಬರುವ ಐಪಿಎಲ್ ಕೂಡ ವಿದೇಶದಲ್ಲಿ ಜರುಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಒಂದೆಡೆ ಮುಂದಿನ ವರ್ಷ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಮತ್ತೊಂದೆಡೆ ಟಿ20 ವಿಶ್ವಕಪ್ಗಾಗಿ ಡೇಟ್ ಕೂಡ ಫಿಕ್ಸ್ ಮಾಡಲಾಗಿದೆ. ಅದರಂತೆ ಜೂನ್ 4 ರಿಂದ 30 ರವರೆಗೆ ಟಿ20 ವಿಶ್ವಕಪ್ ನಡೆಯಲಿದೆ. ಇತ್ತ ಭಾರತದಲ್ಲಿ ಲೋಕಸಭಾ ಚುನಾವಣಾ ದಿನಾಂಕ ನಿಗದಿಯಾದರೆ, ಅದಕ್ಕೂ ಮುನ್ನವೇ ಐಪಿಎಲ್ ಆಯೋಜಿಸಬೇಕಾಗುತ್ತದೆ.
ಅದರಂತೆ ಮಾರ್ಚ್ ಹಾಗೂ ಮೇ ಒಳಗೆ ಐಪಿಎಲ್ ಅನ್ನು ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ. ಏಕೆಂದರೆ ಜೂನ್ ತಿಂಗಳಿಂದ ಟಿ20 ವಿಶ್ವಕಪ್ 2024 ಶುರುವಾಗಲಿದೆ. ಇತ್ತ ಮಾರ್ಚ್ ಅಥವಾ ಮೇನಲ್ಲಿ ಲೋಕಸಭಾ ಚುನಾವಣೆ ನಿಗದಿಯಾದರೆ ಬಿಸಿಸಿಐ ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸುವ ಬಗ್ಗೆ ಚರ್ಚಿಸಲಾಗುತ್ತಿದೆ.
ದೇಶದದಲ್ಲಿ ಸಾರ್ವತ್ರಿಕ ಚುನಾವಣೆ ಘೋಷಣೆಯಾದರೆ ಸರ್ಕಾರವು ಐಪಿಎಲ್ಗೆ ಸಂಪೂರ್ಣ ಭದ್ರತೆಯನ್ನು ಒದಗಿಸಲು ಸಾಧ್ಯವಾಗುವುದಿಲ್ಲ. ಈ ಹಿಂದೆ 2009 ಹಾಗೂ 2014 ರಲ್ಲಿ ಇದೇ ಕಾರಣಗಳಿಗಾಗಿ ಐಪಿಎಲ್ ಅನ್ನು ವಿದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೊಮ್ಮೆ ಐಪಿಎಲ್ ಅನ್ನು ವಿದೇಶದಲ್ಲಿ ಆಯೋಜಿಸುವ ಅನಿವಾರ್ಯತೆ ಬಿಸಿಸಿಐ ಮುಂದಿದೆ.
2009 ರ ಸಾರ್ವತ್ರಿಕ ಚುನಾವಣಾ ನಿಮಿತ್ತ ಐಪಿಎಲ್ ಅನ್ನು ಸೌತ್ ಆಫ್ರಿಕಾದಲ್ಲಿ ಆಯೋಜಿಸಲಾಗಿತ್ತು. ಅಲ್ಲದೆ ಯಾವುದೇ ತೊಂದರೆಗಳಿಲ್ಲದೆ ಟೂರ್ನಿಯು ಅತ್ಯಂತ ಯಶಸ್ವಿಯಾಗಿತ್ತು. ಇನ್ನು 2014 ರಲ್ಲಿ ಟೂರ್ನಿಯ ಅಂತಿಮ ಪಂದ್ಯಗಳನ್ನು ವಿದೇಶದಲ್ಲಿ ಆಯೋಜಿಸಲಾಗಿತ್ತು. ಅಂದು ಐಪಿಎಲ್ನ ದ್ವಿತಿಯಾರ್ಧದ ಕೆಲ ಪಂದ್ಯಗಳಿಗೆ ಯುಎಇ ಆತಿಥ್ಯವಹಿಸಿತ್ತು.
ಇದಾದ ಬಳಿಕ ಕೋವಿಡ್-19 ಭೀತಿ ಹಿನ್ನಲೆಯಲ್ಲಿ ಎರಡು ಬಾರಿ ಯುಎಇನಲ್ಲಿ ಐಪಿಎಲ್ ಅನ್ನು ಆಯೋಜಿಸಲಾಗಿದೆ. ಹೀಗಾಗಿ ಐಪಿಎಲ್ ಅನ್ನು ವಿದೇಶಕ್ಕೆ ಸ್ಥಳಾಂತರಿಸುವ ಅನಿವಾರ್ಯತೆ ಬಂದರೆ ಯುಎಇ ಅಥವಾ ಸೌತ್ ಆಫ್ರಿಕಾದಲ್ಲಿ ಟೂರ್ನಿ ನಡೆಯುವುದು ಬಹುತೇಕ ಖಚಿತ ಎನ್ನಬಹುದು.