RCB: ರೆಡ್ ಆರ್ಮಿಗೆ ‘ಗ್ರೀನ್’ ಬಲ; ಆದರೂ ತಂಡದಲ್ಲಿದೆ ಅದೊಂದು ಕೊರತೆ..!

|

Updated on: Nov 27, 2023 | 4:14 PM

IPL 2024: ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್‌ನ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಟ್ರೇಡ್ ಮಾಡಿದೆ. ಮುಂಬೈ ಇಂಡಿಯನ್ಸ್ ಐಪಿಎಲ್ 2023 ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ರೀನ್ ಅವರನ್ನು 17.5 ಕೋಟಿ ರೂ.ಗೆ ಖರೀದಿಸಿತ್ತು.

RCB: ರೆಡ್ ಆರ್ಮಿಗೆ ‘ಗ್ರೀನ್’ ಬಲ; ಆದರೂ ತಂಡದಲ್ಲಿದೆ ಅದೊಂದು ಕೊರತೆ..!
ಆರ್​ಸಿಬಿ
Follow us on

ಐಪಿಎಲ್ 2024ರ (IPL 2024) ಕಿರು ಹರಾಜು ದುಬೈನಲ್ಲಿ ನಡೆಯಲಿದೆ. ವಿದೇಶದಲ್ಲಿ ಹರಾಜು ನಡೆಯುತ್ತಿರುವುದು ಇದೇ ಮೊದಲು. ಆದರೆ ಹರಾಜಿಗೂ ಮುನ್ನವೇ ಎಲ್ಲಾ ತಂಡಗಳು ಬಿಡುಗಡೆಯಾದ ಮತ್ತು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಐಪಿಎಲ್ ಆಡಳಿತ ಮಂಡಳಿಗೆ ಸಲ್ಲಿಸಿವೆ. ಪಟ್ಟಿ ಬಿಡುಗಡೆಯಾದ ಬಳಿಕ ಐಪಿಎಲ್ ತಂಡಗಳ ನಡುವೆ ಟ್ರೇಡಿಂಗ್ ಶುರುವಾಗಿದೆ. ಅದರಂತೆ ಹಾರ್ದಿಕ್ ಪಾಂಡ್ಯ (Hardik Pandya) ಅವರನ್ನು ಮುಂಬೈ ಇಂಡಿಯನ್ಸ್ (Mumbai Indians) ತಂಡ ಗುಜರಾತ್ ಟೈಟಾನ್ಸ್ ತಂಡದಿಂದ ಟ್ರೇಡ್ ಮಾಡಿದ್ದರೆ, ಮುಂಬೈ ತಂಡದ ಸ್ಟಾರ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ (Cameron Green) ಅವರನ್ನು ಆರ್​ಸಿಬಿ (RCB) ಟ್ರೇಡ್ ಮಾಡಿದೆ.

ಆರ್​ಸಿಬಿ ಸೇರಿದ ಗ್ರೀನ್

ಆರ್‌ಸಿಬಿ ತಂಡ ಮುಂಬೈ ಇಂಡಿಯನ್ಸ್‌ನ ಸ್ಟಾರ್ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಟ್ರೇಡ್ ಮಾಡಿದೆ. ಮುಂಬೈ ಇಂಡಿಯನ್ಸ್ ಐಪಿಎಲ್ 2023 ಹರಾಜಿನಲ್ಲಿ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ರೀನ್ ಅವರನ್ನು 17.5 ಕೋಟಿ ರೂ.ಗೆ ಖರೀದಿಸಿತ್ತು. ಇದರ ನಂತರ ಅವರು ಐಪಿಎಲ್ 2023 ರಲ್ಲಿ ಮುಂಬೈ ಪರ ಉತ್ತಮ ಪ್ರದರ್ಶನ ನೀಡಿದ್ದರು. ಆಡಿದ 16 ಪಂದ್ಯಗಳಲ್ಲಿ ಗ್ರೀನ್ ಒಂದು ಶತಕ ಮತ್ತು ಮೂರು ಅರ್ಧ ಶತಕ ಸೇರಿದಂತೆ ಒಟ್ಟು 452 ರನ್ ಕಲೆಹಾಕಿದ್ದರು. ಇದಲ್ಲದೇ ಬೌಲಿಂಗ್​ನಲ್ಲಿ 6 ವಿಕೆಟ್ ಕೂಡ ಕಬಳಿಸಿದ್ದರು.

ಆರ್‌ಸಿಬಿ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ

ಆರ್‌ಸಿಬಿ ತಂಡ ಇದುವರೆಗೆ ಒಮ್ಮೆಯೂ ಐಪಿಎಲ್ ಟ್ರೋಫಿ ಗೆದ್ದಿಲ್ಲ. ಆರ್‌ಸಿಬಿ ಮೂರು ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು, ಆದರೆ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ತಂಡಕ್ಕೆ ಸಾಧ್ಯವಾಗಲಿಲ್ಲ. ಈ ಬಾರಿ ಐಪಿಎಲ್ 2024ರ ಹರಾಜಿಗೂ ಮುನ್ನ ಆರ್‌ಸಿಬಿ 11 ಆಟಗಾರರನ್ನು ಬಿಡುಗಡೆ ಮಾಡಿದೆ. ಅಲ್ಲದೆ ಶಹಬಾಜ್ ಅಹ್ಮದ್ ಬದಲಿಗೆ ಸನ್‌ರೈಸರ್ಸ್ ಹೈದರಾಬಾದ್‌ನಿಂದ ಮಯಾಂಕ್ ದಾಗರ್ ಅವರನ್ನು ಟ್ರೇಡಿಂಗ್ ಮಾಡಿಕೊಂಡಿದೆ.

ಆರ್‌ಸಿಬಿಗೆ ಬೇಕು ಸ್ಟಾರ್ ಬೌಲರ್‌

ಈಗಿರುವ ಆರ್​ಸಿಬಿ ತಂಡದಲ್ಲಿ ಸ್ಟಾರ್ ಬ್ಯಾಟರ್​ಗಳ ದಂಡೇ ಇದೆ. ಆದರೆ ತಂಡದಲ್ಲಿ ಸ್ಟಾರ್ ಬೌಲರ್​ಗಳ ಕೊರತೆ ಎದುರಾಗಿದೆ. ಏಕೆಂದರೆ ತಂಡ ಜೋಸ್ ಹ್ಯಾಜಲ್‌ವುಡ್, ವನಿಂದು ಹಸರಂಗ, ಹರ್ಷಲ್ ಪಟೇಲ್​ರಂತಹ ಸ್ಟಾರ್ ಬೌಲರ್​ಗಳನ್ನು ತಂಡದಿಂದ ಕೈಬಿಟ್ಟಿದೆ. ಹೀಗಾಗಿ ಮುಂದಿನ ತಿಂಗಳು ನಡೆಯಲ್ಲಿರುವ ಮಿನಿ ಹರಾಜಿನಲ್ಲಿ ಬೌಲಿಂಗ್ ವಿಭಾಗವನ್ನು ಬಲಪಡಿಸುವುದು ತಂಡಕ್ಕೆ ಮೊದಲ ಆದ್ಯತೆಯಾಗಿದೆ. ತಂಡಕ್ಕೆ ಕನಿಷ್ಠ ಒಬ್ಬ ಭಾರತೀಯ ಮತ್ತು ಒಬ್ಬ ವಿದೇಶಿ ಅಗ್ರ ಬೌಲರ್ ಅಗತ್ಯವಿದೆ. ವಿದೇಶಿ ಆಟಗಾರರಾಗಿ, ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಸ್ಥಾನಗಳು ಬಹುತೇಕ ಖಚಿತವಾಗಿದ್ದು, ರೀಸ್ ಟೋಪ್ಲಿ ಕೂಡ ಆಡುವುದನ್ನು ಕಾಣಬಹುದು. ಆದರೆ ಎರಡನೇ ವಿದೇಶಿ ವೇಗದ ಬೌಲರ್ ಯಾರು ಎಂಬುದನ್ನು ಕಾದು ನೋಡಬೇಕಿದೆ. ಈ ಬಾರಿ ಮಿಚೆಲ್ ಸ್ಟಾರ್ಕ್ ಕೂಡ ಹರಾಜಿಗೆ ಬರುತ್ತಿದ್ದಾರೆ. ಬಹುಶಃ ಅವರಿಗಾಗಿ ಆರ್​ಸಿಬಿ ಭಾರಿ ಮೊತ್ತ ಬಿಡ್ ಮಾಡುವ ಸಾಧ್ಯತೆ ಇದೆ. ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್‌ಗೆ ಹೆಸರುವಾಸಿಯಾಗಿರುವ ಆರ್‌ಸಿಬಿ ಈ ಬಾರಿ ಬೌಲಿಂಗ್‌ಗೆ ಹೆಚ್ಚು ಹಣ ವ್ಯಯಿಸಿದರೆ ಶ್ರೇಷ್ಠ ತಂಡವಾಗಬಲ್ಲದು.

IPL 2024: ಮುಂಬೈಗೆ ಹಾರಿದ ಹಾರ್ದಿಕ್; ಗುಜರಾತ್ ತಂಡದ ನೂತನ ನಾಯಕ ಯಾರು ಗೊತ್ತಾ?

ಆರ್​ಸಿಬಿ ಉಳಿಸಿಕೊಂಡ ಮತ್ತು ಬಿಡುಗಡೆ ಮಾಡಿದ ಆಟಗಾರರು:

ಬಿಡುಗಡೆಗೊಂಡ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾಧವ್.

ಉಳಿಸಿಕೊಂಡಿರುವ ಆಟಗಾರರು: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯ್ಯಶ್ ಪ್ರಭುದೇಸಾಯಿ, ವಿಲ್ ಜಾಕ್ವೆಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವೈಶಾಕ್ ವಿಜಯಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:12 pm, Mon, 27 November 23