ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಚೆನ್ನೈ ಸೂಪರ್ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ (Gujarat Titans vs Chennai Super Kings) ನಡುವಿನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಬರೋಬ್ಬರಿ 231 ರನ್ ಕಲೆಹಾಕಿದೆ. ತಂಡದ ಪರ ಆರಂಭಿಕರಾದ ನಾಯಕ ಶುಭ್ಮನ್ ಗಿಲ್ (Shubman Gill) ಹಾಗೂ ಸಾಯಿ ಸುದರ್ಶನ್ (Sai Sudharsan) ತಲಾ ಒಂದೊಂದು ಶತಕ ಸಿಡಿಸಿ ತಂಡವನ್ನು ಈ ಬೃಹತ್ ಮೊತ್ತಕ್ಕೆ ಕೊಂಡೊಯ್ದರು. ಈ ಇಬ್ಬರು ಮೊದಲ ವಿಕೆಟ್ಗೆ 210 ರನ್ಗಳ ದಾಖಲೆಯ ಜೊತೆಯಾಟ ನಡೆಸಿದರು. ಈ ಇಬ್ಬರು ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಚೆನ್ನೈ ಪಾಳಯದಲ್ಲಿ ನಡುಕ ಹುಟ್ಟಿಸಿದಲ್ಲದೆ, ಮೈದಾನದಲ್ಲಿ ನೆರೆದಿದ್ದ ಚೆನ್ನೈನ ಪುಟ್ಟ ಅಭಿಮಾನಿ ಕಣ್ಣೀರಿಡುವಂತೆ ಮಾಡಿದರು.
ಮೇಲೆ ಹೇಳಿದಂತೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ತನ್ನ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡಿತ್ತು. ಅದರಂತೆ ನಾಯಕ ಶುಭ್ಮನ್ ಗಿಲ್ ಜೊತೆ ಈ ಬಾರಿ ಸಾಯಿ ಸುದರ್ಶನ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇಡೀ ಆವೃತ್ತಿಯಲ್ಲಿ ಗುಜರಾತ್ ತಂಡಕ್ಕೆ ಒಮ್ಮೆಯೂ ಉತ್ತಮ ಆರಂಭ ದೊರಕಿರಲಿಲ್ಲ. ಆದರೆ ಈಓ ಬಾರಿ ಮೊದಲ ಜೊತೆಯಾಟದಲ್ಲೇ ಗುಜರಾತ್ ಪರ ದಾಖಲೆಯ ಜೊತೆಯಾಟ ನಡೆಸಿದರು. ಈ ಇಬ್ಬರು ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದರು. ಹೀಗಾಗಿ ಗುಜರಾತ್ ತಂಡಕ್ಕೆ ಸ್ಫೋಟಕ ಆರಂಭ ಸಿಕ್ಕಿತು.
ಈ ಆರಂಭಿಕ ಜೋಡಿ ಪವರ್ ಪ್ಲೇ ಅಂತ್ಯಕ್ಕೆ 58 ರನ್ ಕಲೆಹಾಕಿತ್ತು. ಆದರೆ ಇಲ್ಲಿಂದ ಗೇರ್ ಬದಲಿಸಿದ ಈ ಜೋಡಿ ಪ್ರತಿ ಓವರ್ನಲ್ಲೂ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆಯಿತು. ಹೀಗಾಗಿ ತಂಡ 10 ಓವರ್ಗಳಲ್ಲಿ ಶತಕದ ಗಡಿ ದಾಟಿತು. ನಂತರ 4 ಓವರ್ಗಳಲ್ಲಿ ತಂಡ ಬರೋಬ್ಬರಿ 72 ರನ್ ಕಲೆಹಾಕಿತು. ಅದಾಗ್ಯೂ ಸಿಎಸ್ಕೆ ತಂಡಕ್ಕೆ ಇಲ್ಲಿಯವರೆಗೆ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ಶುಭ್ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಆಟಕ್ಕೆ ಸಿಎಸ್ಕೆ ಬೌಲರ್ಗಳ ಬಳಿ ಎದುರುತ್ತರವೇ ಇರಲಿಲ್ಲ. ಹೀಗಾಗಿ ಮೈದಾನದಲ್ಲಿ ನೆರೆದಿದ್ದ ಸಿಎಸ್ಕೆ ಅಭಿಮಾನಿಗಳ ಮೊಗದಲ್ಲಿ ನಿರವ ಮೌನವಿತ್ತು. ಈ ನಡುವೆ ತನ್ನ ತಂದೆಯೊಂದಿಗೆ ಪಂದ್ಯ ವೀಕ್ಷಿಸಲು ಬಂದಿದ್ದ ಸಿಎಸ್ಕೆಯ ಪುಟ್ಟ ಅಭಿಮಾನಿಯೊಬ್ಬ ತಂದೆ ಬಳಿ ತನ್ನ ಅಸಹಾಯಕತೆಯನ್ನು ತೊಡಿಕೊಳ್ಳುತ್ತ ಕಣ್ಣೀರಿಡ ತೊಡಗಿದ. ಅದರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
Little csk fan crying 🥲😐#GTvsCSK pic.twitter.com/wRhoIUVXnr
— GOLU (@_molu___) May 10, 2024
ಅಂತಿಮವಾಗಿ ಸಾಯಿ ಸುದರ್ಶನ್ ಹಾಗೂ ಶುಭ್ಮನ್ ಗಿಲ್ ಜೋಡಿ 210 ರನ್ಗಳಿಗೆ ಮುರಿದುಬಿತ್ತು. ನಾಯಕ ಶುಭ್ಮನ್ ಗಿಲ್ ತನ್ನ ಇನ್ನಿಂಗ್ಸ್ನಲ್ಲಿ 55 ಎಸೆತಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 104 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ ಮತ್ತೊಬ್ಬ ಆರಂಭಿಕ ಸಾಯಿ ಸುದರ್ಶನ್ 51 ಎಸೆತಗಳಲ್ಲಿ 5 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 103 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಇಬ್ಬರು ನಡೆಸಿದ 210 ರನ್ಗಳ ಜೊತೆಯಾಟ ಗುಜರಾತ್ ಪರ ಜೋಡಿಯೊಂದು ಕಲೆಹಾಕಿದ ಅತ್ಯಧಿಕ ಮೊತ್ತ ಎಂಬ ದಾಖಲೆ ಕೂಡ ಬರೆದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:34 pm, Fri, 10 May 24